ಮಾದಿಗ ಸಮಾಜಕ್ಕೆ ಸರಿಯಾದ ನೆಲೆ ಇಲ್ಲ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಫೆ. 23
ಮಾದಿಗ ಸಮಾಜಕ್ಕೆ ಭವ್ಯ ಮತ್ತು ದೊಡ್ಡ ಪರಂಪರೆ ಇದೆ ಎಂದು ಹೇಳಿಕೊಂಡರೂ ಸರಿಯಾದ ನೆಲೆ ಇಲ್ಲವಾಗಿದೆ. ಸಮಾಜದ ಸಂಘಟನೆಗೆ ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕು ಎಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಶಿವಶರಣರು ಹೇಳಿದರು.
ಹಂಪಿಯ ಮಹರ್ಷಿ ಮಾತಂಗ ಸೇವಾ ಸಮಿತಿಯವರು ಭಾನುವಾರ ಹಮ್ಮಿಕೊಂಡಿದ್ದ ಮಹರ್ಷಿ ಮಾತಂಗ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಮಾದಿಗ ಸಮಾಜದಲ್ಲಿ ಶೈಕ್ಷಣಿಕ ಕ್ರಾಂತಿ ನಡೆಯಬೇಕು. ಆಗ ಅಭಿವೃದ್ಧಿ ಸಾಧ್ಯ. ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಬೆಳೆಸುವ ಮೂಲಕ ಸಮುದಾಯದಲ್ಲಿ ಶೈಕ್ಷಣಿಕ ಕ್ರಾಂತಿ ನಡೆಯಬೇಕು. ನಮ್ಮ ನಮ್ಮಲ್ಲಿರುವ ದ್ವೇಷಾಸೂಯೆ ಮನೋಭಾವನೆ ತೊರೆದು, ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ನಮ್ಮಲ್ಲಿರುವ ಒಣ ಪ್ರತಿಷ್ಠೆಯನ್ನು ಬದಿಗೊತ್ತಿ ಸಮುದಾಯದ ಪ್ರಗತಿಗೆ ಮುಂದಾಗಬೇಕು. ಸಮುದಾಯದ ಪರವಾಗಿ ನಿಷ್ಠೆಯಿಂದ ಕೆಲಸ ಮಾಡುವ ವ್ಯಕ್ತಿಗಳನ್ನು ಬೆಂಬಲಿಸಬೇಕು. ಸಮಾಜದಲ್ಲಿ ಸಾಮೂಹಿಕ ವಿವಾಹಗಳು ಹೆಚ್ಚಾಗಿ ನಡೆಯಬೇಕು. ಸಾಮೂಹಿಕ ವಿವಾಹಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆ. ಪ್ರತಿಯೊಬ್ಬರೂ ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದು ಹೇಳಿದರು.
ಕಾರ್ಯಾಗಾರ ಅಗತ್ಯ: ಧಾರವಾಡ ಕರ್ನಾಟಕ ವಿವಿ ಪ್ರಾಧ್ಯಾಪಕ ಡಾ.ಜಿ.ಬಿ. ನಂದನ್ ಮಾತನಾಡಿ, ಮಾದಿಗ ಸಮಾಜದ ಪೌರಾಣಿಕ ಪರಂಪರೆ, ಐತಿಹಾಸಕ ಪರಂಪರೆ ಬಗ್ಗೆ ಅರ್ಥ ಮಾಡಿಕೊಂಡು ಸ್ಪೂರ್ತಿ ಪಡೆಯಬೇಕು. ಮಾದಿಗ ಜನಾಂಗದ ಇತಿಹಾಸ, ಐತಿಹಾಸಿಕ, ಪೌರಾಣಿಕ ಬಗ್ಗೆ ಸಮಗ್ರ ಮಾಹಿತಿ ಪಡೆಯಲು ಒಂದು ಕಾರ್ಯಾಗಾರದ ಅಗತ್ಯವಿದೆ ಎಂದರು.
ಹುಮ್ನಾಬಾದ್ನ ಕರ್ನಾಟಕ ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಶಿವಾಜಿರಾವ್ ಮುಚಕೂರೆ ಮಾತನಾಡಿ, ಮಾತಂಗ ಋಷಿ ಯಾರು ಎಂಬುದನ್ನು ತಿಳಿದುಕೊಳ್ಳಬೇಕು. ಮಾದಾರ ಚೆನ್ನಯ್ಯ ಜಯಂತಿಯನ್ನು ಸರ್ಕಾರವೆ ಆಚರಿಸಬೇಕು. ದೊಡ್ಡ ಸಮಾಜವಾಗಿದ್ದರೂ ಸರ್ಕಾರ ಕಡೆಗಣಿಸಿದೆ ಎಂದು ಹೇಳಿದರು.
ಅಂಬೇಡ್ಕರ್ ಸಂಘದ ತಾಲೂಕು ಗೌರವಾಧ್ಯಕ್ಷ ಜಿ. ತಿಪ್ಪಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೈಸೂರಿನ ಪ್ರಸನ್ನ ಚಕ್ರವರ್ತಿ, ಆಹಾರ ನಿರೀಕ್ಷಕ ಎ. ಕೆ. ಶಿವರುದ್ರಪ್ಪ, ಪಂತರ್ ಜಯಂತ್, ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಎಂ.ಸಿ. ವೀರಸ್ವಾಮಿ, ಸಂಗಮೇಶ ಕಾರಜೋಳ, ಸುರೇಶ್ ಹುಬ್ಳಿ ಇದ್ದರು. ಸಂಗಮೇಶ್ ಅಯೋಧ್ಯಾ ಪ್ರಾರ್ಥಿಸಿದರು. ಮಧು ಗಡ್ಡಿ ಸ್ವಾಗತಿಸಿದರು. ಬಿ.ಸಿ. ಮಹಾಂತೇಶ್ ವಂದಿಸಿದರು. ಎ. ಬಸವರಾಜ ನಿರೂಪಿಸಿದರು.