ಯುವಕರು ಬೌದ್ಧಿಕ ಮಟ್ಟ ಹೆಚ್ಚಿಸಿಕೊಳ್ಳಿ: ಅಲ್ಲಮಪ್ರಭು ಬೆಟ್ಟದೂರು
ಬಳ್ಳಾರಿ: ಯುವಕರು ಕಲೆ, ಸಾಹಿತ್ಯ, ಸಂಗೀತಗಳ ಬಗ್ಗೆ ಸದಭಿರುಚಿ ಬೆಳೆಸಿಕೊಂಡಲ್ಲಿ ತಮ್ಮ ಬೌದ್ಧಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದರು.
ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯು ಎಐಡಿಎಸ್ಒ, ಎಐಡಿವೈಒ, ಎಐಎಂಎಸ್ಎಸ್ ಸಂಘಟನೆಗಳ ಸಹಯೋಗದದಲ್ಲಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿರುವ ಸಾಂಸ್ಕೃತಿಕ ಜನೋತ್ಸವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಎಸ್ಯುಸಿಐ(ಸಿ) ರಾಜ್ಯ ಸಮಿತಿಯ ಕೆ. ಉಮಾ ಮಾತನಾಡಿ, ಲೈಂಗಿಕತೆ, ಹಿಂಸೆಗಳ ಕುಸಂಸ್ಕೃತಿಯೇ ಅಧಿಕವಾಗಿ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ ಇಂತಹ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು, ಜನರಲ್ಲಿ ಹಾಗೂ ಯುವ ಸಮೂಹದಲ್ಲಿ ಹೊಸ ಚೈತನ್ಯ ತುಂಬಲಿದೆ ಎಂದರು.
ಆವಿಷ್ಕಾರ ಸಂಚಾಲಕ ರಾದಾಕೃಷ್ಣ ಉಪಾಧ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಚಾರ್ಲಿ ಚಾಪ್ಲಿನ್ ಕುರಿತು ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ನಂತರ ಆರಂಭವಾದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದೊಡ್ಡಬಸವ ಗವಾಯಿ ಹಿಂದೂಸ್ತಾನಿ ಸಂಗೀತ, ಧ್ರುವ ಭರತನಾಟ್ಯ, ಪತ್ರಕರ್ತ ಕಾಡ್ಲೂರ್ ಮಧುಸೂದನ್ ಮತ್ತವರ ಸಂಗಡಿಗರಿಂದ ಭಾವಗೀತೆ, ಕೋಲಾಟ ಕಾರ್ಯಕ್ರಮಗಳು ಜರುಗಿದವು.
ಬಳ್ಳಾರಿಯ ಸೃಜನ ಫಿಲ್ಮ್ ಅಂಡ್ ಕಲ್ಚರಲ್ ಸೊಸೈಟಿ ವತಿಯಿಂದ ನಿಕೊಲಾಯ್ ಗೊಗೊಲ್ರ ಓವರ್ ಕೋಟ್ ಆಧಾರಿತ, ಕೊಡೆ ಕಥೆಯಾಯಿತೊಂದು ಕಡೆ ನಾಟಕ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಡಾ. ಪ್ರಮೋದ್, ಜಿಲ್ಲಾಧ್ಯಕ್ಷ ಗೋವಿಂದ್, ಸುರೇಶ್ ಸೇರಿದಂತೆ ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ನೌಕರರು ಭಾಗವಹಿಸಿದ್ದರು.