ಸಾರ್ವಜನಿಕರೂ ಸ್ವಚ್ಛತೆಗೆ ಕೈಜೋಡಿಸಿ: ಕವಿತಾ
ಹೊಸಪೇಟೆ: ನಗರದಲ್ಲಿ ನೈರ್ಮಲ್ಯ ಜನಪ್ರತಿನಿಧಿಗಳ, ಅಧಿಕಾರಿಗಳ ಕೆಲಸ ಮಾತ್ರವಲ್ಲ. ಸಾರ್ವಜನಿಕರು ಸಹ ನಗರದ ಸ್ವಚ್ಛತೆಗೆ ಕೈಗೂಡಿಸಿದಾಗ ಮಾತ್ರ ನಗರ ಸುಂದರವಾಗಲು ಸಾಧ್ಯವಾಗಲಿದೆ ಎಂದು ಕವಿತಾ ಈಶ್ವರಸಿಂಗ್ ಹೇಳಿದರು.
ನಗರದ ಡಾನ್ ಬಾಸ್ಕೋದಲ್ಲಿ ಬೆಂಗಳೂರಿನ ಬ್ರೆಡ್ಸ್ ಸಂಸ್ಥೆ ಹಾಗೂ ಡಾನ್ ಬಾಸ್ಕೋ ಸಂಸ್ಥೆ ಆಶ್ರಯದಲ್ಲಿ ನಡೆದ ಇಂದಿನ ಸಮಾಜದಲ್ಲಿ ಆಗುತ್ತಿರುವ ಪ್ರಸ್ತುತ ಸಾಮಾಜಿಕ ಸ್ಥಿತಿಗತಿ ಕುರಿತು ಜನಾಭಿಪ್ರಾಯ ಸಂಗ್ರಹಣಾ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಪಂತರ್ ಮಾತನಾಡಿ, ಸ್ವಚ್ಛತೆಯಿಂದ ಕೂಡಿದ ಕುಡಿಯುವ ನೀರು ಪೂರೈಸಲು ನಗರಸಭೆ ಮುಂದಾಗಬೇಕು. ಒಡೆದ ಪೈಪ್ಲೈನ್ ದುರಸ್ತಿ ಸೇರಿದಂತೆ ಇತರೆ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುವ ಮೂಲಕ ನಗರದ ನೈರ್ಮಲ್ಯ ಕಾಪಾಡಲು ಆದ್ಯತೆ ಮೇಲೆ ಕೆಲಸ ಮಾಡಬೇಕು ಎಂದು ಹೇಳಿದರು.
ಬಿ. ಗೌರಿಶಂಕರ್ ಮಾತನಾಡಿದರು. ಫಾ. ಲಾರೆನ್ಸ್, ಅನಿಲ್ ಕುಮಾರಿ, ಮಹ್ಮದ್ ಶೈನ್, ಮಹ್ಮದ್ ರಫೀಕ್, ವೆಂಕಟೇಶ್, ಎಸ್.ಬಿ. ಮಂಜುನಾಥ ಇದ್ದರು.