28ರಂದು ಜಿಲ್ಲಾ ಯುವಜನ ಮೇಳ
ಬಳ್ಳಾರಿ: ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಂಟಿಯಾಗಿ ಫೆ. 28ರಂದು ಬೆಳಗ್ಗೆ 11ಕ್ಕೆ ನಗರದ ಡಾ. ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಉದ್ಘಾಟಿಸಲಿದ್ದಾರೆ. ಶಾಸಕ ಅನಿಲ್ ಲಾಡ್ ಅಧ್ಯಕ್ಷತೆ ವಹಿಸುವರು. ಜಿಪಂ ಅಧ್ಯಕ್ಷೆ ಶೋಭಾ ಬೆಂಡಿಗೇರಿ, ಸಂಸದರು, ಶಾಸಕರು,ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸಾವಿತ್ರಮ್ಮ, ಜನಪ್ರತಿನಿಧಿಗಳು, ರಾಜ್ಯ ಮತ್ತು ಜಿಲ್ಲಾ ಯುವ ಪ್ರಶಸ್ತಿ ವಿಜೇತರು, ಯುವಕ-ಯುವತಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕ್ರೀಡಾಪಟುಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ ಆಗಮಿಸಲಿದ್ದಾರೆ. ಮೇಳದಲ್ಲಿ ಜಾನಪದ ನೃತ್ಯ, ಜಾನಪದ ಗೀತೆ, ಏಕಪಾತ್ರಾಭಿನಯ, ಭಾವಗೀತೆ, ಬಯಲಾಟ, ಲಾವಣಿ, ರಂಗಗೀತೆ, ಸೋಬಾನೆ ಪದ, ಬೀಸುವ ಹಾಡು, ಚರ್ಮವಾದ್ಯ, ಡೊಳ್ಳು ಕುಣಿತ, ವೀರಗಾಸೆ ಕುಣಿತ, ಕೋಲಾಟ, ಭಜನೆ, ಗೀಗೀ ಪದ, ದೊಡ್ಡಾಟ ಸ್ಪರ್ಧೆಗಳು ನಡೆಯಲಿವೆ. ವಿಶೇಷ ಘಟಕ ಯೋಜನೆಯಡಿ ಪ.ಜಾತಿ ಯುವಕ ಸಂಘಗಳ ಭಜನಾ ಸಾಮಗ್ರಿ ವಿತರಿಸಲಾಗುವುದೆಂದು ಪ್ರಕಟಣೆ ತಿಳಿಸಿದೆ.
ಇಂದು ಉದ್ಘಾಟನೆ
ಹೊಸಪೇಟೆ: ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನ ಹಾಗೂ ಚಿಣ್ಣರ ಶಾಲಾ ಕೈತೋಟದ ಉದ್ಘಾಟನಾ ಸಮಾರಂಭ ತಾಲೂಕಿನ ಮರಿಯಮ್ಮನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಫೆ. 25ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ. ಎಸ್ಡಿಎಂಸಿ ಅಧ್ಯಕ್ಷ ಖಾಜಾ ಮೈನುದ್ದೀನ್ ಹಾಗೂ ಎಸ್ಡಿಎಂಸಿ ಸದಸ್ಯರು, ಊರಿನ ಹಿರಿಯ ಮುಖಂಡರು, ಹಿತೈಷಿಗಳು, ಶಿಕ್ಷಕರು ಭಾಗವಹಿಸುವರು ಬಿ.ಎಂ.ಎಸ್. ಮೃತ್ಯುಂಜಯ ತಿಳಿಸಿದ್ದಾರೆ.
ನಾಳೆ ರಸಗ್ರಹಣ ಕಾರ್ಯಕ್ರಮ
ಬಳ್ಳಾರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಫೆ. 26ರಂದು ಬೆಳಗ್ಗೆ 11 ಗಂಟೆಗೆ ಕೂಡ್ಲಿಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಸಗ್ರಹಣ ಕಾರ್ಯಕ್ರಮ ಆಯೋಜಿಸಿದೆ. ಕೂಡ್ಲಿಗಿ ತಾಲೂಕಿನ ಕಾನಾಮಡುಗು ಗ್ರಾಮದ ನಿವೃತ್ತ ಸಂಗೀತ ಶಿಕ್ಷಕ ಎ. ಸಿದ್ಧಪ್ಪ ಸಂಗೀತ ಪ್ರಕಾರಗಳ ವಿಶೇಷತೆ ಹಾಗೂ ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಕೂಡ್ಲಿಗಿಯ ಶ್ರೀ ರೇಣುಕಾ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಹಾಡಿರೇ ರಾಗಗಳ- ತೂಗಿರೇ ದೀಪಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಾನಪದ ಹಾಗೂ ಸಾಂಪ್ರದಾಯಿಕ ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿನೂತನ ಯೋಜನೆಯಡಿ ಈ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಸಂಡೂರು ತಾಲೂಕು ಹಳೇ ದರೋಜಿಯ ನಾಡೋಜ ದರೋಜಿ ಈರಮ್ಮ ಅವರು ಬುರ್ರಕಥಾ ಪ್ರಸ್ತುತಪಡಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್ ತಿಳಿಸಿದ್ದಾರೆ.
ವಿಳಾಸ ಕೇಳೋ ನೆಪ: ಸರಗಳ್ಳತನ
ಬಳ್ಳಾರಿ: ಮನೆಯ ವಿಳಾಸ ಕೇಳಿದಂತೆ ಮಾಡಿ ಮಹಿಳೆಯ ಕೊರಳಲ್ಲಿದ್ದ ರು. 50 ಸಾವಿರ ಮೌಲ್ಯದ 25 ಗ್ರಾಂ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಿರುವ ಘಟನೆ ಇಲ್ಲಿನ ವಿದ್ಯಾನಗರದ 4ನೇ ಕ್ರಾಸ್ನ ಮನೆಯ ಆವರಣದಲ್ಲಿ ನಡೆದಿದೆ. ಫೆ. 22ರಂದು ರಾತ್ರಿ 7.30ರ ಸುಮಾರಿಗೆ ನಾರಾಯಣಮ್ಮ ಎನ್ನುವವರು ಮನೆಯ ಕಾಂಪೌಂಡಿನಲ್ಲಿ ವಾಕಿಂಗ್ ಮಾಡುತ್ತಿರುವಾಗ ಇಬ್ಬರು ಆಪರಿಚಿತರು ಬೈಕ್ನಲ್ಲಿ ಬಂದು ಶಂಕರ್ ಎನ್ನುವವರ ಮನೆ ಎಲ್ಲಿದೆ ಎಂದು ತೆಲುಗಿನಲ್ಲಿ ಕೇಳಿದ್ದಾರೆ, ಅಂತಹ ವ್ಯಕ್ತಿ ಹೆಸರುಳ್ಳವರು ಇಲ್ಲಿ ಯಾರು ಇಲ್ಲ ಎಂದು ತಿಳಿಸಿದ್ದಾರೆ, ನಂತರ ಬೈಕ್ ಸ್ಟಾರ್ಟ್ ಮಾಡಿ, ಮನೆ ಕಾಂಪೌಂಡ್ ಹತ್ತಿರ ನಡೆದುಕೊಂಡು ಬಂದು, ನಿಮ್ಮ ಮನೆಯ ನಂಬರ್ ಏನು ಎಂದು ಕೇಳಿದಂತೆ ಮಾಡಿ ಕೊರಳಲ್ಲಿದ್ದ ರು. 50 ಸಾವಿರ ಮೌಲ್ಯದ 25 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದಾರೆ. ಈ ಕುರಿತು ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ ಕದಿಯಲು ಯತ್ನ
ಬಳ್ಳಾರಿ: ಮನೆಯ ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಕೊರಳಲ್ಲಿ ಬಂಗಾರದಂತಿದ್ದ ಅಂತ್ರದ ದಾರ ಕಿತ್ತುಕೊಳ್ಳಲು ಪ್ರಯತ್ನಿಸಿದ ಘಟನೆ ಕಾಕರ್ಲತೋಟದಲ್ಲಿ ನಡೆದಿದೆ. ಫೆ. 23ರಂದು ಬೆಳಗಿನ ಜಾವ 5.30ಕ್ಕೆ ಇಲ್ಲಿನ ಕಾರ್ಕಲತೋಟದಲ್ಲಿ ವೆಂಕಟಲಕ್ಷ್ಮಮ್ಮ ಎನ್ನುವವರು ಮನೆ ಮುಂದುಗಡೆಯ ಕೊಳಾಯಿಯಿಂದ ನೀರು ಬಿಡುವಾಗ ಓರ್ವ ಅಪರಿಚಿತ ಬೈಕ್ನಲ್ಲಿ ಬಂದು ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಕೊರಳಲ್ಲಿದ್ದ ಅಂತ್ರದ ದಾರವನ್ನು ಬಂಗಾರದ ಸರವೆಂದು ಕಿತ್ತುಕೊಂಡು ಹೋಗಲು ಯತ್ನಿಸಿದ್ದಾನೆ. ಆಗ ಮನೆಯವರು, ಓಣಿಯವರು ಬಂದಾಗ ಅದನ್ನು ಬಿಟ್ಟು ಓಡಿ ಹೋಗಿದ್ದಾನೆ. ಈ ಕುರಿತು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೀಗ ಮುರಿದು ಮನೆ ಕಳ್ಳತನ
ಬಳ್ಳಾರಿ: ಹಾಡಹಗಲೆ ಮನೆಯ ಬೀಗ ಮುರಿದು ರು. 1.35 ಲಕ್ಷ ಹಾಗೂ ಒಂದೂವರೆ ತೊಲೆ ಬಂಗಾರ ಕಳವು ಮಾಡಿಕೊಂಡು ಹೋಗಿರುವ ಘಟನೆ ಸೋಮವಾರ ತಾಲೂಕಿನ ಸಿಡಿಗಿನಮೊಳ ಗ್ರಾಮದಲ್ಲಿ ನಡೆದಿದೆ. ವಾಲ್ಮೀಕಿ ಹನುಮಂತಪ್ಪನವರ ಮನೆಯಲ್ಲಿ ಕಳ್ಳತನ ನಡೆದಿದೆ. ಬೀಗ ಹಾಕಿಕೊಂಡು ಹೊಲಕ್ಕೆ ಹೋದಾಗ, ಕಳ್ಳರು ಮನೆಯ ಬೀಗ ಮುರಿದು, ರು. 1.35 ಲಕ್ಷ ನಗದು ಹಾಗೂ ಒಂದೂವರೆ ತೊಲೆ ಬಂಗಾರವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಹೊಲದಿಂದ ಬಂದು ನೋಡಿದಾಗ ಕಳ್ಳತನವಾಗಿರುವುದು ತಿಳಿದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪಿ.ಡಿ. ಹಳ್ಳಿ ಠಾಣೆಯ ಉಸ್ತುವಾರಿ ಸಬ್ಇನ್ಸ್ಪೆಕ್ಟರ್ ಹೊಸಕೇರಪ್ಪ ಅವರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.