ಸಾಹಿತ್ಯದಿಂದ ಬದುಕು ಹಸನು: ರವೀಂದ್ರನಾಥ
ಕೂಡ್ಲಿಗಿ: ಬರವಣಿಗೆ ಮತ್ತು ಪುಸ್ತಕ ಪ್ರಕಟಣೆ ಕೇವಲ ಪಾಂಡಿತ್ಯ ಹೊಂದಿದವರ ಸ್ವತ್ತಲ್ಲ, ಸಾಹಿತ್ಯದಿಂದ ಬದುಕು ಹಸನಾಗುತ್ತಿದ್ದು ಪುಸ್ತಕ ಓದುವ ಸಂಸ್ಕೃತಿ ಬೆಳೆಯಲು ಸಾಧ್ಯ ಎಂದು ಹಂಪಿ ವಿವಿ ಪ್ರಾಧ್ಯಾಪಕ ಕೆ. ರವೀಂದ್ರನಾಥ ತಿಳಿಸಿದರು.
ಅವರು ತಾಲೂಕಿನ ಹೊಸಹಳ್ಳಿ ಎಸ್ಕೆಡಿಡಿವಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ನಡೆದ ಲೋಕಿಕೆರೆ ಗ್ರಾಮದ ನಿವೃತ್ತ ಮುಖ್ಯಶಿಕ್ಷಕ ಎಚ್.ಎಂ. ರೇವಣ್ಣ ಬರೆದ ನಿಮ್ಮೊಂದಿಗೆ ನಾನು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಾನಮಡುಗು ದಾಸೋಹ ಮಠದ ಐಮಡಿ ಶರಣಾರ್ಯರು ಮಾತನಾಡಿ, ಸಂಸ್ಕಾರ, ಶ್ರದ್ಧೆ, ಶಿಸ್ತು ಸಾಹಿತ್ಯದ ಮೂಲಕ ಎಲ್ಲರಿಗೂ ಪರಿಚಿತವಾಗುವ ಮೂಲಕ ಸುಸಂಸ್ಕೃತರು ಇರಲು ಸಾಧ್ಯವಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ರೈತರು, ಶ್ರಮಿಕರು, ಕೂಲಿ ಕಾರ್ಮಿಕರು ತಮ್ಮ ಅನುಭವಗಳನ್ನು ಹಂಚಿಕೊಂಡು ದಾಖಲಿಸಿದರೆ ಮುಂದಿನ ಪೀಳಿಗೆಗೆ ದಾರಿದೀಪವಾಗಬಲ್ಲದು ಎಂದು ಅಭಿಪ್ರಾಯಪಟ್ಟರು. ಚಿತ್ರದುರ್ಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ. ವೀರೇಶ್ ಪ್ರಾಸ್ತಾವಿಕ ಮಾತನಾಡಿದರು. ಕೆ.ಎಂ. ಶರಣಯ್ಯ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಎಚ್.ಎಂ. ರೇವಣ್ಣ, ಬಿಇಒ ಎಂ.ಆರ್. ಮಂಜುನಾಥ, ಇಳಕಲ್ ಡಯಟ್ ಉಪನ್ಯಾಸಕ ಎಚ್.ಎಂ. ಮಲ್ಲಿಕಾರ್ಜುನಸ್ವಾಮಿ, ಎ. ಚನ್ನಬಸಪ್ಪ, ಎಚ್.ಎಂ. ಚನ್ನಬಸಯ್ಯ, ಎಚ್.ಎಂ. ವೃಷಭೇಂದ್ರಸ್ವಾಮಿ, ಕಸಾಪ ತಾಲೂಕು ಅಧ್ಯಕ್ಷ ಎಸ್.ಎಂ. ಗುರುಪ್ರಸಾದ್, ಎನ್.ಎಂ. ರವಿಕುಮಾರ್, ಲೇಖಕರ ಪತ್ನಿ ಗೌರಮ್ಮ, ಕೆ.ಎಂ. ತಿಪ್ಪೇಸ್ವಾಮಿ, ಲೋಕಿಕೆರೆ ರಾಮಣ್ಣ, ಎಸ್.ಎಂ. ಕೊಟ್ರಯ್ಯ, ಎಚ್.ಬಿ. ಕಣ್ಣ, ರವೀಂದ್ರಸ್ವಾಮಿ, ಜೆ. ನಾಗಮಣಿ, ಎಚ್.ಎಂ. ಶಿವಪ್ರಕಾಶ್, ಡಿ.ಎಂ. ಯಶೋದಾ ಇತರರಿದ್ದರು.