ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಸವಣ್ಣ ಪುತ್ಥಳಿ ಅನಾವರಣಕ್ಕೆ ಆನೆ ಅಡ್ಡಿ

Vishwanath S
Updated On : 26 Feb 2014, 11:19 am

ಹಗರಿಬೊಮ್ಮನಹಳ್ಳಿ: ಪಟ್ಟಣದ ಹೊಸಪೇಟೆ- ಶಿವಮೊಗ್ಗ ರಾಜ್ಯ ಹೆದ್ದಾರಿ ಮೇಲೆ, ತಾಲೂಕು ಕಚೇರಿ ಬಳಿ ನೂತನವಾಗಿ ನಿರ್ಮಿಸಿರುವ ಕಾಯಕಯೋಗಿ ಬಸವಣ್ಣನ ವೃತ್ತ ಹಾಗೂ ಬಸವೇಶ್ವರರ ಕಂಚಿನ ಪುತ್ಥಳಿಯ ಅನಾವರಣಕ್ಕೆ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ ಆನೆ ಅಡ್ಡಿ ಬಂದಿದೆ.
ಎಲ್ಲಿಯ ಉತ್ತರಪ್ರದೇಶ? ಮಾಯಾವತಿ ಅವರ ಆನೆ ಹೇಗೆ ತಾನೆ ಇಲ್ಲಿನ ಬಸವೇಶ್ವರರ ಪುತ್ಥಳಿಯ ಅನಾವರಣಕ್ಕೆ ಅಡ್ಡಿಯಾಗಿದೆ ಎಂದು ಅಶ್ಚರ್ಯಪಡಬೇಡಿ. ಮಾಯಾವತಿ ಉತ್ತರಪ್ರದೇಶದ ಸಿಎಂ ಆಗಿದ್ದಾಗ ತಮ್ಮ ಪುತ್ಥಳಿ ಜತೆಗೆ ಪಕ್ಷದ ಚಿಹ್ನೆಯಾದ ಆನೆ ಪುತ್ಥಳಿಯನ್ನೂ ಉತ್ತರಪ್ರದೇಶದ ಪ್ರಮುಖ ಸಾರ್ವಜನಿಕ ಪಾರ್ಕ್, ರಸ್ತೆಗಳು ಸೇರಿದಂತೆ ಎಲ್ಲೆಂದರಲ್ಲಿ ಪ್ರತಿಷ್ಠಾಪಿಸಿದ್ದರು. ಇದನ್ನು ಪ್ರಶ್ನಿಸಿ ಅಲ್ಲಿನ ಸಾರ್ವಜನಿಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಾರ್ವಜನಿಕ ಸ್ಥಳಗಳಲ್ಲಿ ಪುತ್ಥಳಿ ಪ್ರತಿಷ್ಠಾಪಿಸುವ ಮುನ್ನ ಆಯಾ ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಚಿತವಾದ ಸಮಿತಿಯಿಂದ ಪರವಾನಗಿ ಹಾಗೂ ನಿರಪೇಕ್ಷಣಾ ಪತ್ರ ಪಡೆಯುವುದು ಕಡ್ಡಾಯ ಎಂದು ನೀಡಿದ ತೀರ್ಪೇ ಅಶ್ವಾರೂಢ ಬಸವಣ್ಣನ ಪುತ್ಥಳಿ ಅನಾವರಣಕ್ಕೆ ಅಡ್ಡಿಯಾಗಿದೆ.
ಮಾರ್ಚ್ 2ರಂದು ಅನಾವರಣಗೊಳ್ಳಬೇಕಿತ್ತು: 2013ರ ಜೂನ್ ತಿಂಗಳಲ್ಲಿಯೆ ವೃತ್ತದಲ್ಲಿ ಪುತ್ಥಳಿಯನ್ನು ಅನಾವರಣಕ್ಕಾಗಿ ತಂದಿರಿಸಲಾಗಿದೆ. ಇತ್ತೀಚಿಗೆ ಸ್ಥಳೀಯ ಶಾಸಕ ಎಸ್. ಭೀಮಾನಾಯ್ಕ ಅಧ್ಯಕ್ಷತೆಯಲ್ಲಿ ಸಮಾಜದ ಮುಖಂಡರು ನಡೆಸಿದ ಪೂರ್ವಭಾವಿ ಸಭೆಯಲ್ಲಿ ಮಾರ್ಚ್ 2ರಂದು ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿತ್ತು. ಆದರೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ಕಾರ್ಯಕ್ರಮದ ಮೇಲೆ ಮಂಕು ಕವಿದಿದೆ. ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಅನುಮತಿ ಪಡೆಯಲು ಶಾಸಕರು ಹಾಗೂ ತಾಲೂಕು ಆಡಳಿತದಿಂದ ಜಿಲ್ಲಾಧಿಕಾರಿ ಮನವೊಲಿಸುವ ಕೆಲಸ ಬಿರುಸಾಗಿ ನಡೆಯುತ್ತಿದೆ. ಆದರೆ ಅದಕ್ಕೆ ಅನುಮತಿ ದೊರೆಯುತ್ತದೆಯೆ ಎಂಬುದನ್ನು ಕಾದು ನೋಡಬೇಕು.
ಸುಪ್ರೀಂ ಕೋರ್ಟ್ ಏನು ಹೇಳಿದೆ?: ಸುಪ್ರೀಂ ಕೋರ್ಟ್ 2013ರಲ್ಲಿ ನೀಡಿದ ತನ್ನ ತೀರ್ಪಿನಲ್ಲಿ, ಯಾವುದೆ ಸಾರ್ವಜನಿಕ ಸ್ಥಳಗಳಲ್ಲಿ ಪುತ್ಥಳಿ, ವೃತ್ತ ನಿರ್ಮಿಸುವ ಮುನ್ನ ಆಯಾ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ. ಇಂತಹ ಸ್ಥಳದಲ್ಲಿ ಪುತ್ಥಳಿ, ವೃತ್ತ ಪ್ರತಿಷ್ಠಾಪಿಸುತ್ತೇವೆಂದು ಸಂಬಂಧಿಸಿದ ಇಲಾಖೆಯ ಮುಖಸ್ಥರು ಜಿಲ್ಲಾಧಿಕಾರಿ ನೇತೃತ್ವದ ಸಮಿತಿಗೆ ಪತ್ರದ ಮೂಲಕ ಮನವಿ ಮಾಡಿಕೊಳ್ಳಬೇಕು. ಸಮಿತಿ ಸಭೆ ಕರೆದು ಚರ್ಚಿಸಿ ಆನಂತರ ಈ ವಿಚಾರವನ್ನು ಸಾರ್ವಜನಿಕರ ತಿಳಿವಳಿಕೆಗಾಗಿ ಬಹಿರಂಗ ಪ್ರಕಟಣೆ ಹೊರಡಿಸಿ, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುತ್ತದೆ. ಆಗ ಸಾರ್ವಜನಿಕರಿಂದ ಯಾವುದೆ ರೀತಿಯ ಆಕ್ಷೇಪಣೆಗಳು ಬಾರದಿದ್ದರೆ ಸಂಬಂಧಿಸಿದ ಇಲಾಖೆ ಸೂಚಿಸಿದ ಸ್ಥಳದಲ್ಲಿ ಪುತ್ಥಳಿ ನಿರ್ಮಾಣ, ಅನಾವರಣಕ್ಕೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಪರವಾನಗಿ ನೀಡುತ್ತದೆ. ಒಂದು ವೇಳೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರೆ ಅನುಮತಿ ದೊರೆಯಲಾರದು.
ಈ ಎಲ್ಲ ಪ್ರಕ್ರಿಯೆಗಳು ಎಷ್ಟೇ ತುರ್ತಾಗಿ ನಡೆದರೂ ಅವುಗಳು ಮುಗಿಯಲು ಕನಿಷ್ಠ ಪಕ್ಷ ಎರಡು ತಿಂಗಳು ಬೇಕೇ ಬೇಕು. ಲೋಕೋಪಯೋಗಿ ಇಲಾಖೆಯಿಂದ ನಿರ್ಮಿತಗೊಂಡಿರುವ ಈ ಪುತ್ಥಳಿ ಅನಾವರಣಕ್ಕೆ ಜಿಲ್ಲಾಧಿಕಾರಿಯಿಂದ ಪರವಾನಗಿ ಪಡೆದುಕೊಂಡಿಲ್ಲ. ಈಗ ಪರವಾನಗಿ ಪಡೆದರೆ ಮಾರ್ಚ್‌ನಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗುವುದು ಬಹುತೇಕ ಖಚಿತ. ಆಗ ಮೇ ಅಂತ್ಯದವರೆಗೂ ದೇಶದಲ್ಲಿ ನೀತಿಸಂಹಿತೆ ಜಾರಿಯಲ್ಲಿರುತ್ತದೆ. ನೀತಿಸಂಹಿತೆ ಇದ್ದಾಗ ಯಾವುದೆ ಸಾರ್ವಜನಿಕ ಸರ್ಕಾರಿ ಸಭೆ, ಸಮಾರಂಭ, ಕಾರ್ಯಕ್ರಮಗಳನ್ನು ಮಾಡಲು ಬರುವುದಿಲ್ಲ. ಕನಿಷ್ಠ ಐದಾರು ತಿಂಗಳು ಪುತ್ಥಳಿ ಅನಾವರಣ ಮುಂದಕ್ಕೆ ಹೋಗುವುದು ಖಚಿತ. ಕಳೆದ ಜೂನ್‌ನಲ್ಲೆ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ ಮೇಲೆ ಮುಸುಕು ಹೊದ್ದು ನಿಂತ ಅಶ್ವಾರೂಢ ಕಾಯಕಯೋಗಿ ಬಸವಣ್ಣನ ಕಂಚಿನ ಪುತ್ಥಳಿಯ ಅನಾವರಣ ಸದ್ಯ ಆಗದ ಮಾತು.
ಸುಪ್ರೀಂ ಕೋರ್ಟ್ ತೀರ್ಪನ್ನು ಎಲ್ಲರೂ ಗೌರವಿಸಬೇಕು. ಅಧಿವೇಶನದಲ್ಲಿ ಭಾಗವಹಿಸಿದ್ದ ಸಮಯದಲ್ಲಿ ಈ ವಿಚಾರವಾಗಿ ರಾಜ್ಯದ ಕಾನೂನು ಸಚಿವರ ಜತೆಗೆ ಚರ್ಚಿಸಿರುವೆ. ಈ ಸಂಬಂಧ ಜಿಲ್ಲಾಧಿಕಾರಿ ಜತೆಗೂ ನಿರಂತರ ಸಂಪರ್ಕದಲ್ಲಿದ್ದೇನೆ. ಕಾನೂನು ಮೀರಿ ಯಾವ ಕೆಲಸ ಮಾಡಲು ಬರುವುದಿಲ್ಲ, ಜಿಲ್ಲಾಧಿಕಾರಿ ಅನುಮತಿ ಪಡೆದು ಪುತ್ಥಳಿ ಅನಾವರಣ ಮಾಡಲಾಗುವುದು.
- ಎಸ್. ಭೀಮಾನಾಯ್ಕ, ಶಾಸಕ


-ಹುಳ್ಳಿ ಪ್ರಕಾಶ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement