ಪರಿಸರ ರಕ್ಷಣೆಗೆ ಎಲ್ಲರೂ ಬದ್ಧರಾಗಿ: ಶೋಭಾ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 26
ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಬದ್ಧರಾಗಬೇಕು ಎಂದು ಜಿಪಂ ಅಧ್ಯಕ್ಷೆ ಶೋಭಾ ಬೆಂಡಿಗೇರಿ ಹೇಳಿದರು.
ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರದ ನಾಶ ನಮ್ಮೆಲ್ಲರ ನಾಶ, ಪರಿಸರ ರಕ್ಷಿಸದಿದ್ದರೆ ಮುಂದೊಂದು ದಿನ ಶುದ್ಧ ಗಾಳಿ, ನೀರು ಸಿಗದ ಪರಿಸ್ಥಿತಿ ಬರುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ನಿಸ್ವಾರ್ಥದಿಂದ ಪರಿಸರ ಸಂರಕ್ಷಣೆಗೆ ಕಂಕಣಬದ್ಧರಾಗಬೇಕು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆ ಸಂತೆಕಡೂರಿನ ಪರಿಸರ ಅಧ್ಯಯನ ಕೇಂದ್ರದ ನಿರ್ದೇಶಕ ಜೆ.ಎಲ್. ಜನಾರ್ದನ ಮಾತನಾಡಿ, ನಾಶವಾಗುತ್ತಿರುವ ಪರಿಸರದ ಕಾಳಜಿ ವಹಿಸಿ ಸಮೃದ್ಧ ಪರಿಸರವನ್ನು ಕಾಣಿಕೆಯಾಗಿ ನೀಡುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೊ. ಸತ್ಯನಾರಾಯಣ, ಪರಿಸರ ಪ್ರೇಮದ ಜತೆಗೆ ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಹಿರಿಯ ಪರಿಸರ ಅಧಿಕಾರಿ ಗೋಪಾಲಕೃಷ್ಣ ಬಿ. ಸಣತಂಗಿ ಹಾಗೂ ಬೊಮ್ಮಘಟ್ಟ ಸೀಡ್ಸ್ ಸಂಸ್ಥೆಯ ಕಾರ್ಯದರ್ಶಿ ಜಿ. ವಿಶ್ವಮೂರ್ತಿ ಅವರು, ಪರಿಸರ ಮಿತ್ರ ಶಾಲಾ ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಪಕ್ಷಿ ಲೋಕಗಳ ಬಗ್ಗೆ ಹೊಸಪೇಟೆ ತುಂಗಭದ್ರಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಅಬ್ದುಲ್ ಸಮದ್ ಕೊಟ್ಟೂರು ಉಪನ್ಯಾಸ ನೀಡಿದರು. ಶಿವಮೊಗ್ಗ ಜಿಲ್ಲೆ ಸಂತೆಕಡೂರಿನ ಪರಿಸರ ಅಧ್ಯಯನ ಕೇಂದ್ರದ ಉಪಾಧ್ಯಕ್ಷ ಪ್ರೊ.ಎ.ಎಸ್. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗೌತಮ ಬುದ್ಧ ಸಂಸ್ಥೆಯ ಡಾ. ಲಕ್ಕಿ ಪೃಥ್ವಿರಾಜ್, ಉಪನ್ಯಾಸಕ ಶ್ರೀನಿವಾಸರೆಡ್ಡಿ, ಡಯಟ್ ಪ್ರಾಚಾರ್ಯ ಟಿ. ನಾರಾಯಣಗೌಡ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ ಇದ್ದರು.
ಜಿಲ್ಲಾ ಪರಿಸರ ಮಿತ್ರ ಶಾಲೆ 2013-14 ಪ್ರಶಸ್ತಿಯನ್ನು ಹೊಸದೇವಲಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪ್ರದಾನ ಮಾಡಲಾಯಿತು. ಉಳಿದಂತೆ 10 ಹಸಿರು ಶಾಲೆಗಳು ಹಾಗೂ 10 ಕಿತ್ತಲೆ ಶಾಲೆಗಳ ಪ್ರಶಸ್ತಿ ಹಾಗೂ 16 ಶಾಲೆಗಳಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು.
ಉಪಪರಿಸರ ಅಧಿಕಾರಿ ಬಿ.ಸಿ. ಶಿವಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ವಲ್ಲಭಾಪುರ ಶಾಲಾ ಮಕ್ಕಳು ಪ್ರಾರ್ಥಿಸಿದರು. ಉಪ ಪರಿಸರ ಅಧಿಕಾರಿ ಸಿ.ಎನ್. ಮಂಜಪ್ಪ ಸ್ವಾಗತಿಸಿದರು. ಹಗರಿಬೊಮ್ಮನಹಳ್ಳಿ ತಾಲೂಕಿನ ಶಿಕ್ಷಕ ಬಿ. ಕೊಟ್ರೇಶ ಹಾಗೂ ಡಿ. ವಾಮದೇವಪ್ಪ ನಿರೂಪಸಿದರು. ಚಂದ್ರಪ್ರಕಾಶ ವಂದಿಸಿದರು.