ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ಶಿವರಾತ್ರಿ ಆಚರಣೆ

Lingaraj Badiger
Updated On : 28 Feb 2014, 11:57 am

ಬಳ್ಳಾರಿ: ನಗರವೂ ಸೇರಿದಂತೆ ಜಿಲ್ಲಾದ್ಯಂತ ಎಲ್ಲಡೆ ಮಹಾ ಶಿವರಾತ್ರಿ ಹಬ್ಬವನ್ನು ಶ್ರದ್ಧಾ, ಭಕ್ತಿ, ಸಡಗರದಿಂದ ಗುರುವಾರ ಆಚರಿಸಲಾಯಿತು. ಶಿವರಾತ್ರಿ ನಿಮಿತ್ತ ನಗರದಲ್ಲಿನ ಶಿವನ ದೇವಾಲಯಗಳು ಹೂ, ತಳಿರು ತೋರಣಗಳಿಂದ ಅಲಂಕೃತಗೊಂಡಿದ್ದವು. ದೇವಸ್ಥಾನಗಳಲ್ಲಿ ಗುರುವಾರ ಬೆಳಗ್ಗೆಯಿಂದಲೆ ಶಿವನಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಶಿವನ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಸಾಲಾಗಿ ನಿಂತು, ದರ್ಶನ ಪಡೆದರು. ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಬಿಲ್ವ ಹಾಗೂ ವಿವಿಧ ಪುಷ್ಪಗಳಿಂದ ಶಿವಾಷ್ಟೋತ್ತರ, ಶಿವಸಹಸ್ರನಾಮಾವಳಿ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ಭಕ್ತಿ ಪೂರ್ವಕವಾಗಿ ನಡೆದವು. ನಗರದ ಆರಾದ್ಯ ದೈವ ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ನೀಲಕಂಠೇಶ್ವರ, ಗ್ರಾಹಂ ರಸ್ತೆಯಲ್ಲಿನ ಈಶ್ವರ ದೇವಸ್ಥಾನ, ಬಸವೇಶ್ವರ ನಗರದ ಸಂಗಮೇಶ್ವರ ದೇವಸ್ಥಾನ ಸೇರಿದಂತೆ ಇತರೆ ದೇವಸ್ಥಾನಗಳಲ್ಲಿ ಬೆಳಗಿನ ಜಾವದಿಂದಲೆ ಭಕ್ತಾಧಿಗಳು ಶಿವನಿಗೆ ಬಿಲ್ವಪತ್ರಿ, ಬಗೆ ಬಗೆಯ ಪುಷ್ಪ, ನೈವೇದ್ಯಗಳೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಪರಮೇಶ್ವರನ ದರ್ಶನ ಪಡೆಯುತ್ತಿದ್ದ ದೃಶ್ಯಗಳು ಕಂಡುಬಂದವು. ಕೆಲ ಭಕ್ತರು  ಮನೆಗಳಲ್ಲಿ ಶಿವರಾತ್ರಿ ಜಾಗರಣೆ ನಡೆಸಿದರು.

ಶಿವರಾತ್ರಿ ಪ್ರಯುಕ್ತ ರಥೋತ್ಸವ
ಕೂಡ್ಲಿಗಿ: ತಾಲೂಕಿನ ದೇವಲಾಪುರ ಗ್ರಾಮದ ಶ್ರೀ ವಸಂತ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಶಿವರಾತ್ರಿ ಪ್ರಯುಕ್ತ ಗುರುವಾರ ಸಂಜೆ ಅದ್ಧೂರಿಯಾಗಿ ನೆರವೇರಿತು. ಗಜಾಪುರ ಕಂದಾಯ ಗ್ರಾಮಕ್ಕೆ ಸೇರಿದ ಈ ದೇವಾಲಯ ಬಡೇಲಡಕು, ತುಪ್ಪಾಕನಹಳ್ಳಿ, ಅಕ್ಕಾಪುರ, ದೊಡ್ಡ ಗೊಲ್ಲರಹಟ್ಟಿ, ಕಂದಗಲ್ಲು, ಕೊಟ್ಟೂರು, ಕೂಡ್ಲಿಗಿ, ಈಚಲಬೊಮ್ಮನಹಳ್ಳಿ, ನಾಗಲಾಪುರ ಸೇರಿದಂತೆ ಹತ್ತು ಹಲವು ಗ್ರಾಮಗಳ ಭಕ್ತರ ನಡುವೆ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ನಡೆಯಿತು. ಪ್ರತಿವರ್ಷದಂತೆಈ ವರ್ಷವೂ ರಥೋತ್ಸವ ಶಾಂತಿಯುತವಾಗಿ ಸಹಸ್ರಾರು ಭಕ್ತರ ನಡುವೆ ಜರುಗಿತು. ಭಕ್ತರು ವಸಂತ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದು, ತೇರಿಗೆ ಬಾಳೆಹಣ್ಣು ತೂರಿ ಭಕ್ತಿ ಅರ್ಪಿಸಿದರು.

ತಾಲೂಕಿನಾದ್ಯಂತ ಸಂಭ್ರಮದ ಮಹಾಶಿವರಾತ್ರಿ
ಹಗರಿಬೊಮ್ಮನಹಳ್ಳಿ: ತಾಲೂಕಿನಾದ್ಯಂತ ಗುರುವಾರ ಬೆಳಗಿನ ಜಾವದಿಂದ ಮಹಾಶಿವರಾತ್ರಿಯನ್ನು ಜನತೆ ಭಕ್ತಿಯಿಂದ ಆಚರಿಸಿದರು. ಕುಟಂಬ ಸಮೇತರಾಗಿ ಶಿವ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಪಟ್ಟಣದ ರೇಲ್ವೆ ಗೇಟ್ ಬಳಿಯ ಈಶ್ವರ ದೇವಸ್ಥಾನ, ಕೆವಿಓಆರ್ ಕಾಲೋನಿ ಪತ್ರಿಬಸವೇಶ್ವರ ದೇವಸ್ಥಾನ, ಹಳೆ ಹಗರಿಬೊಮ್ಮನಹಳ್ಳಿ ಕಲ್ಲೇಶ್ವರ ದೇವಸ್ಥಾನ, ರಾಮನಗರದ ಕೆಚ್ಚಿನ ಬಂಡಿರಸ್ತೆಯ ಹರ ದೇವಸ್ಥಾನ, ತಾಲೂಕಿನ ತಂಬ್ರಹಳ್ಳಿಯ ಶ್ರೀಗುರು ಕೊಟ್ಟೂರೇಶ್ವರ ಗುಡಿ, ಅಂಬಳಿಯ ಐತಿಹಾಸಿಕ ಕಲ್ಲೇಶ್ವರ ದೇವಸ್ಥಾನ, ಬ್ಯಾಲಾಳು ಗ್ರಾಮದ ಕೆಪಿಟಿಸಿಎಲ್ ಆವರಣದ ಶ್ರೀ ಕಲ್ಲೇಶ್ವರ ಗುಡಿ, ಹನಸಿ ಶಂಕರಲಿಂಗೇಶ್ವರ ದೇವಸ್ಥಾನ, ಪುಣ್ಯಕ್ಷೇತ್ರಗಳಾದ ನಂದಿಪುರ, ಹಳೆ ಹಗರಿಬೊಮ್ಮನಹಳ್ಳಿ ಹಾಲಸ್ವಾಮಿ ಮಠ, ಹಂಪಸಾಗರದ ಮಹಾದೇವತಾತ ಮಠಗಳು ಮುಂತಾದೆಡೆ ದಲ್ಲಿ ಬೆಳಗ್ಗೆ 4 ಗಂಟೆಯಿಂದಲೆ ಪೂಜಾ ಕಾರ್ಯಗಳು ಜರುಗಿದವು.

ಭಕ್ತಿಭಾವದಿ ಶಿವರಾತ್ರಿ ಆಚರಣೆ
ಹೂವಿನಹಡಗಲಿ: ತಾಲೂಕಿನ ಕುರುವತ್ತಿ, ಮೈಲಾರ, ಮಾಗಳ, ರಂಗಾಪುರ, ಹೊಳಲು, ಹೂವಿನಹಡಗಲಿ, ಕೋಟ್ನಿಕಲ್, ಕಾಗನೂರು ಸೇರಿದಂತೆ ತಾಲೂಕಾದ್ಯಂತ ಶಿವರಾತ್ರಿ ಪ್ರಯುಕ್ತ ಶಿವ ದೇಗುಲಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ತುಂಗಭದ್ರಾ ನದಿಯಲ್ಲಿನ ಜಡಿ ಶಂಕರಲಿಂಗ, ರಾಮೇಶ್ವರ, ಧರ್ಮೇಶ್ವರ, ಸೂರ್ಯನಾರಾಯಣ, ಉಗ್ರನರಸಿಂಹ, ಮಹಾಲಿಂಗೇಶ್ವರ ದೇಗುಲಕ್ಕೆ ಭಕ್ತರು ತೆರಳಿ ನರಸಿಂಹ ತೀರ್ಥ, ಶಂಕರಲಿಂಗ ತೀರ್ಥ, ಪ್ರಯಾಗ ತೀರ್ಥ, ಅಶ್ವತನಾರಾಯಣ ತೀರ್ಥ, ಶಿವ ತೀರ್ಥ, ಮಲ್ಲಿಕಾರ್ಜುನ ತೀರ್ಥ, ಪ್ರೇತ ಪರ್ವತ ತೀರ್ಥ, ಗಯಾ ತೀರ್ಥ, ವಿಠ್ಠಲ ತೀರ್ಥ ಸೇರಿದಂತೆ ತುಂಗಭದ್ರೆಯ 9 ತೀರ್ಥಗಳಲ್ಲಿ ಭಕ್ತರು ಪುಣ್ಯಸ್ನಾನ ಮಾಡಿ ನದಿಯಲ್ಲಿನ ಲಿಂಗುವಿಗೆ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರಿಗೆ ಬಹಳ ಅಪರೂಪವಾಗಿ ದರ್ಶನ ನೀಡುವ ಜಡಿ ಶಂಕರಲಿಂಗು ಸಿಂಗಟಾಲೂರು ಹಿನ್ನೀರಿನಲ್ಲಿ ಮುಳುಗಿದ್ದ ಕಾರಣ ನದಿಗೆ ಪೂಜೆ ಸಲ್ಲಿಸಿದರು. ಕುರುವತ್ತಿಯ ಮಲ್ಲಿಕಾರ್ಜುನ, ಬಸವೇಶ್ವರ, ಹೊಳಲು ಗ್ರಾಮದ ಗೌರಿಶಂಕರ, ಹೂವಿನಹಡಗಲಿ ಕಲ್ಲೇಶ್ವರ, ಪಾತಾಳೇಶ್ವರ, ಮಲ್ಲಿಕಾರ್ಜುನ, ಕೋಟ್ನಿಕಲ್‌ನ ಕಲ್ಲೇಶ್ವರ, ಮೈಲಾರದ ಉದ್ಭಲ ಲಿಂಗು, ಅಂಗೂರಿನ ಮಹಾಲಿಂಗೇಶ್ವರ, ಹಿರೇ ಹಡಗಲಿಯ ಕಲ್ಲೇಶ್ವರ, ಬಸವೇಶ್ವರ ದೇವಸ್ಥಾನಗಳಲ್ಲಿ ಬೆಳಗ್ಗಿನಿಂದಲೆ ಭಕ್ತರು ಧಾರ್ಮಿಕ ವಿಧಿ ವಿಧಾನಗಳನ್ನು ಕೈಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement