ಶಿವರಾತ್ರಿ ದಿನ ಬೆಟ್ಟದಲ್ಲಿ ಗಂಗೆ ಪ್ರತ್ಯಕ್ಷ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಫೆ. 27
ಇಲ್ಲಿ ಕಾದ ಬಂಡೆಯ ಮೇಲೆಯೂ ಸಿಹಿ ನೀರು ಜಿನುಗುತ್ತದೆ. ಅಕ್ಟೋಬರ್‌ನಲ್ಲಿಯೆ ಗುಬ್ಬಿ ಕುಡಿಯಲು ಹನಿ ನೀರಿಲ್ಲದ ನೂರಾರು ಹೆಕ್ಟೇರ್ ಬೆಟ್ಟ ಗುಡ್ಡಗಳಲ್ಲಿ ಶಿವರಾತ್ರಿ ಬಂತೆಂದರೆ ಅಂದೇ ಕಾದ ಹಂಚಿನಂತಿರುವ ಬಂಡೆಯ ಇಕ್ಕೆಲಗಳಲ್ಲಿ ಪರಿಶುದ್ಧ ನೀರು ಜಿನುಗಿ ಒರತೆಯಂತೆ ಗುಂಡಿಯಲ್ಲಿ ಸೇರುತ್ತದೆ.
ಇದು ಅಚ್ಚರಿ ಎನಿಸಿದರೂ ಸತ್ಯ. ಈ ಭಾಗದ ಹತ್ತಾರು ಹಳ್ಳಿಗಳ ಜನತೆ ಶಿವನ ಗಂಗೆ ಎಂದು ಹಬ್ಬದ ರೀತಿಯಲ್ಲಿ ಪೂಜಿಸುತ್ತಾರೆ. ಹಬ್ಬ ಮಾಡುತ್ತಾರೆ. ಮನೆಯವರೆಲ್ಲ ನೀರು ಕುಡಿದು ಧನ್ಯರಾಗುತ್ತಾರೆ ಇಂತಹ ವಿಸ್ಮಯ ಈ ವರ್ಷ ನೀವೂ ನೋಡಬೇಕೆ ಇಂದಿನಿಂದ (ಶುಕ್ರವಾರದಿಂದ) ಬನ್ನಿ ಪ್ರಕೃತಿ ವಿಸ್ಮಯವನ್ನು ಕಣ್ತುಂಬಿಸಿಕೊಳ್ಳಿ.
ಔಷಧಿ ಗುಣವಿದೆ: ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿಯ ಕರಡಿಹಳ್ಳಿ ಹಾಗೂ ನರಸಿಂಹನಗಿರಿ ಗ್ರಾಮಗಳ ಮಧ್ಯೆ ಇರುವ ಏಳು ಬೆಟ್ಟಗಳ ಪ್ರದೇಶದಲ್ಲಿಯೆ ಶಿವರಾತ್ರಿಯಂದು ಪ್ರಕೃತಿ ವಿಸ್ಮಯ ಪ್ರತಿವರ್ಷ ನಡೆಯುತ್ತಿದ್ದು, ಹೆಬ್ಬಂಡೆಗಳೆ ತುಂಬಿರುವ ಬೆಟ್ಟದಲ್ಲಿ ಸುತ್ತಮುತ್ತ ಎಲ್ಲಿ ನೋಡಿದರೂ ಒಣ ಹವೆ, ಧಗ ಧಗ ಬಿಸಿಲು, ಮಳೆಗಾಲದಲ್ಲೆ ಕುಡಿಯಲು ನೀರು ಸಿಗದ ಈ ಪ್ರದೇಶದಲ್ಲಿ ಬಿರು ಬಿಸಿಲಿನ ಬೇಸಿಗೆ ಕಾಲದಲ್ಲಿ ಅದೂ ಶಿವರಾತ್ರಿಯಂದು ಈ ಬೆಟ್ಟದಲ್ಲಿ ಗಂಗಾಜಲ ಒರತೆಯಂತೆ ಜಿನುಗುತ್ತದೆ ಎಂದರೆ ಅಚ್ಚರಿಯಲ್ಲವೇ? ಬೆಟ್ಟದ ಇಳಿಜಾರಿನಲ್ಲಿ 4 ಅಡಿ ಚೌಕಾಕಾರದ ತಗ್ಗಿನಲ್ಲಿ ನೀರು ಸಂಗ್ರಹವಾಗುತ್ತದೆ. ಈ ನೀರಿನಲ್ಲಿ ಔಷಧಿಯ ಗುಣವಿದೆಯೆಂಬುದು ಜನತೆಯ ಪರಂಪರಾಗತ ನಂಬಿಕೆ.
ಈ ವಿಸ್ಮಯ ಗಂಗೆಯನ್ನು ಸ್ಥಳೀಯರು ಪೂಜೆ ಮಾಡುತ್ತಾರೆ. ಈ ನೀರು ಕುಡಿದರೆ ರೋಗ ರುಜಿನಿ ದೂರವಾಗುವುದರಿಂದ ಎಲ್ಲರೂ ಈ ನೀರು ಕುಡಿಯುತ್ತಾರೆ. ಬಾಟಲಿಗಳಲ್ಲಿ ಮನೆಗಳಿಗೂ ತೆಗೆದುಕೊಂಡು ಹೋಗುತ್ತಾರೆ. ಈ ವಿಸ್ಮಯ ನೀರನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುತ್ತಾರೆ. ಈ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆದರೆ ಈ ಸ್ಥಳದ ಮಹತ್ವ ಹೆಚ್ಚುತ್ತದೆ.
ನೀರಿನ ಚಿಲುಮೆ: ಕರಡಿಹಳ್ಳಿಯಿಂದ ನರಸಿಂಹಗಿರಿಗೆ ಹೋಗುವ ರಸ್ತೆಯಲ್ಲಿ ಬಂದು ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ಕಾಡಿನಲ್ಲಿ 2 ಕಿ.ಮೀ. ದೂರ ಕಾಲ್ನಡಿಗೆ ಮೂಲಕವೆ ಹೋಗಬೇಕು. ಬೆಳಗ್ಗೆ, ಸಂಜೆ ಕರಡಿಗಳ ಕಾಟ ಹೆಚ್ಚು. ಗುಂಪಾಗಿ ಹೋಗುವುದು ಕ್ಷೇಮ. ಇಲ್ಲಿ ತೆಲುಗು ಪ್ರಭಾವ ಹೆಚ್ಚು. ನೀರು ಪ್ರತ್ಯಕ್ಷವಾಗುವ ಸ್ಥಳವನ್ನು ಬಾಗಲ್ ಚಿಲುಮೆ ಎನ್ನುತ್ತಾರೆ. ಬಾಗಲ್ ಚಿಲುಮೆ ಎಂದರೆ ಬಾಧೆ ತಣಿಸುವ ಚಿಲುಮೆ ಎಂದರ್ಥ.
ಈ ಬೆಟ್ಟದ ಸುತ್ತ ಮುತ್ತವಿರುವ ನರಸಿಂಹನಗಿರಿ, ಕರಡಿಹಳ್ಳಿ, ಭೀಮಸಮುದ್ರ, ಹುಲಿಕುಂಟೆ, ಕೆಂಚೋಬನಹಳ್ಳಿ, ಮಾಡ್ಲಕನಹಳ್ಳಿ, ಕಡೇಕೊಳ, ನೆಲಬೊಮ್ಮನಹಳ್ಳಿ ಇತರೆ ಹಳ್ಳಿಗಳ ರೈತರು ಧನ, ಕರು ಮೇಯಿಸಲು ಇದೇ ಬೆಟ್ಟಕ್ಕೆ ಬರಬೇಕು. ನಮಗೂ ನಮ್ಮ ಧನ ಕರುಗಳಿಗೆ ಬೇಸಿಗೆಯಲ್ಲಿ ಈ ನೀರಿನ ಚಿಲುಮೆಯೇ ಆಸರೆ. ಮುಂಗಾರು ಸಮಯದಲ್ಲಿ ಗುಡುಗು ಬಂತೆಂದರೆ ಈ ಚಿಲುಮೆಯ ನೀರು ಹಂತ ಹಂತವಾಗಿ ಕಡಿಮೆಯಾಗುತ್ತದೆ ಎನ್ನುತ್ತಾರೆ ಕರಡಿಹಳ್ಳಿ ಶರಣಪ್ಪ.
ಶಿವರಾತ್ರಿಯಂದು ಗಂಗಾಪೂಜೆ: ಶಿವರಾತ್ರಿಯ ದಿನದಂದೆ ಗಂಗೆ ಪ್ರತ್ಯಕ್ಷವಾಗುವ ಈ ಸ್ಥಳ ಇಂದಿಗೂ ಎಲ್ಲರಿಗೂ ಅಚ್ಚರಿ ಮೂಡಿಸುತ್ತಿದೆ. ಸುತ್ತಮುತ್ತಲ ಹಳ್ಳಿಗಳ ಗಂಗೆಪೂಜೆ ನಡೆಯುವುದೂ ಇಲ್ಲಿಯೆ. ಈ ಸ್ಥಳದಲ್ಲಿ ಬಾಳ ಪವಾಡ ಇದೆ. ಈ ಬೆಟ್ಟದಲ್ಲಿ ಇನ್ನು ಅದ್ಭುತ ಸ್ಥಳಗಳಿವೆ. ಹೊರಜಗತ್ತಿಗೆ ಈ ಬಾಧೆ ಚಿಲುಮೆ ಗೊತ್ತಿಲ್ಲ. ಕಾಡಲ್ಲಿ ಇರುವುದರಿಂದ ಇಲ್ಲಿಗೆ ಭಕ್ತರು ಬರುವುದು ಕಡಿಮೆ, ಸರ್ಕಾರ ರಸ್ತೆ ಮಾಡಿಸಿದರೆ ಈ ಕ್ಷೇತ್ರ ಪುಣ್ಯಕ್ಷೇತ್ರ ಆಗುತ್ತದೆ ಎನ್ನುತ್ತಾರೆ ನರಸಿಂಹಗಿರಿಯ ಓಬಣ್ಣ. ಮತ್ತೊಂದು ವಿಸ್ಮಯ ಎಂದರೆ ಬಿಸಿಲು ಏರಿದಂತೆ ಇಲ್ಲಿ ನೀರು ಬರುವುದು ಹೆಚ್ಚಾಗುತ್ತದೆ. ಬಿಸಿಲು ಕಡಿಮೆಯಾದಾಗ ನೀರು ಬರುವುದೂ ಕಡಿಮೆಯಾಗುತ್ತದೆ ಎನ್ನುತ್ತಾರೆ ಸ್ಥಳೀಯರು. ಋತುಮತಿಯಾದ ಮಹಿಳೆಯರು ಈ ಚಿಲುಮೆ ಹತ್ತಿರ ಹೋದರೆ ಇಲ್ಲಿ ನೀರು ಬತ್ತುತ್ತದೆ ಎಂಬುದು ಇಲ್ಲಿಯ ಜನತೆಯ ನಂಬಿಕೆ. ಹೀಗೆಯೆ ಆದ ಹಲವು ಉದಾಹರಣೆಗಳನ್ನು ಇಲ್ಲಿಯ ಶೆಟ್ರು ಶರಣಪ್ಪ ಹೇಳುತ್ತಾರೆ.
ಬತ್ತಿಹೋದ ಚಿಲುಮೆಯಲ್ಲಿ ಪುನಃ ನೀರು ಬರಬೇಕೆಂದರೆ ಕಪ್ಪು ಬಣ್ಣದ ಮೇಕೆಯನ್ನು ಆ ಬಾಗಲ್ ಬಾಧೆ ಚಿಲುಮೆ ಮುಂದೆ ನಿಲ್ಲಿಸಿ ಹಾಲು ಕರೆದಾಗ ಮತ್ತೆ ಯಥಾ ರೀತಿ ಬಂಡೆ ಮೇಲೆ ನೀರು ಕಾಣಿಸುತ್ತದೆ ಎಂಬ ಗುಟ್ಟನ್ನು ಹೇಳುತ್ತಾರೆ. ಕಾಡು, ಬೆಟ್ಟಗಳ ನಡುವಿನ ಈ ಸುಂದರ ಪರಿಸರ ತಾಣ ಮಾತ್ರ ಆಧುನಿಕತೆಯ ದಿನಗಳಲ್ಲೂ ಅಚ್ಚರಿ ಮೂಡಿಸುತ್ತಿರುವುದು ಸೋಜಿಗ. ತಡ ಏಕೆ ನೀವೂ ಬನ್ನಿ ಈ ಪ್ರಕೃತಿ ಸೋಜಿಗವನ್ನು ಆಸ್ವಾದಿಸಿ.
-ಭೀಮಣ್ಣ ಗಜಾಪುರ