ಸಿಪಿಎಂನಿಂದ ಇಬ್ಬರು ಚುನಾವಣೆ ಕಣಕ್ಕೆ
ಬಳ್ಳಾರಿ: ಈ ಬಾರಿಯ ಚುನಾವಣೆಯಲ್ಲಿ ಸಿಪಿಎಂ ಪಕ್ಷದಿಂದ ರಾಜ್ಯದ ಎರಡು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲಾಗುತ್ತದೆ ಎಂದು ಸಿಪಿಎಂ ಕಾರ್ಯಕಾರಿ ಮಂಡಳಿ ಸದಸ್ಯ ಎಸ್. ಪ್ರಸನ್ನಕುಮಾರ್ ತಿಳಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಮತ್ತು ಮಂಗಳೂರು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ. ರಾಜ್ಯದಲ್ಲಿ ಸಿಪಿಐ ಎರಡು ಕಡೆ ಹಾಗೂ ಫಾವರ್ಡ್ ಬ್ಲಾಕ್ನಿಂದ 2 ಕಡೆ ಸೇರಿದಂತೆ ಎಡಪಕ್ಷಗಳು 6 ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ ಎಂದರು.
ಈಗಾಗಲೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯವಾಗಿ ಮೂರನೇ ಶಕ್ತಿಯು ದೇಶದಲ್ಲಿ ಹೊರಹೊಮ್ಮುತ್ತಿದೆ. ದೇಶದ 14 ಪಕ್ಷಗಳು ಒಟ್ಟಿಗೆ ಸೇರಿ ಜನವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿಗೆ ಪೆಟ್ಟು ನೀಡಲು ಮುಂದಾಗಿವೆ. ಆ ಬಾರಿ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಹಾಗೂ ಯುಪಿಎಗೆ ಸ್ವಷ್ಟ ಬಹುಮತ ಸಿಗುವ ಅವಕಾಶ ಕಡಿಮೆಯಿದ್ದು, ಈ ಎರಡು ಪಕ್ಷಗಳ ನೇತೃತ್ವದ ಮೈತ್ರಿಕೂಟಕ್ಕೆ 273 ಸ್ಥಾನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ದೇಶದ 14 ಪಕ್ಷಗಳು ಪರ್ಯಾಯ ಶಕ್ತಿಯನ್ನು ಹುಟ್ಟುಹಾಕಲು ಮುಂದಾಗಿವೆ ಎಂದರು.
ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದಿಂದ ಪಕ್ಷಗಳು ದೂರ ಹೋಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಕೇಂದ್ರ ಸರ್ಕಾರ ಬೆಲೆ ಏರಿಕೆ ಸೇರಿದಂತೆ ಇತರ ವಿಷಯದಲ್ಲಿ ಜನವಿರೋಧಿ ಕೆಲಸವನ್ನು ಯುಪಿಎ ಸರ್ಕಾರ ಮಾಡುತ್ತಿದೆ. ಇದರಿಂದಾಗಿ ಈ ಬಾರಿ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬರುವುದಿಲ. ಕಾಂಗ್ರೆಸ್ ತನ್ನ ಸ್ಥಾನವನ್ನು ಉಳಿಸಿಕೊಳ್ಳುವುದು ಕಷ್ಟವಾಗಿ ತೀವ್ರ ಹಿನ್ನಡೆ ಸಾಧಿಸಲಿದೆ. ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿಯೆಂದು ಬಿಂಬಿತರಾಗಿರುವ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ನ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಜನರ ಸಮಸ್ಯೆಗಳ ಬಗ್ಗೆ ಚಿಂತಿಸದೆ, ಮಾತನಾಡದೆ, ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತ ಮುಂದಿನ ಪ್ರಧಾನಿ ನಾವೆ ಎಂದು ಬಿಂಬಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇಂತಹ ಬಿಂಬಿಸುವಿಕೆ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ. ಈ ಎರಡು ಪಕ್ಷಗಳಿಗೆ ಜನರು ಸಹಮತ ತೋರದೆ, ಪರ್ಯಾಯ ಶಕ್ತಿಯನ್ನು ಆಯ್ಕೆ ಮಾಡುವ ನಿರೀಕ್ಷೆ ಇದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಆರ್.ಎಸ್. ಬಸವರಾಜ್, ಸತ್ಯಬಾಬು ಹಾಗೂ ರಂಗಪ್ಪ ದಾಸರ್ ಇದ್ದರು.