ಹಗರಿಬೊಮ್ಮನಹಳ್ಳಿ: ಗುಡುಗು, ಸಿಡಿಲು ಸಹಿತ ಭಾರಿ ಮಳೆ
ಹಗರಿಬೊಮ್ಮನಹಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಲ್ಲಿ ಮಹಾ ಶಿವರಾತ್ರಿ ದಿನವಾದ ಗುರುವಾರ ರಾತ್ರಿ ಭಾರಿ ಗುಡುಗು, ಸಿಡಿಲು ಆರ್ಭಟದೊಂದಿಗೆ ಜೋರಾದ ಮಳೆ ಸುರಿಯಿತು.
ರಾತ್ರಿ 8 ಗಂಟೆ 10 ನಿಮಿಷಕ್ಕೆ ಇದ್ದಕ್ಕಿಂದ್ದಂತೆಯೆ ಆರಂಭವಾದ ಭಾರಿ ಮಳೆ ಸುಮಾರು ಹೊತ್ತು ಬಿರುಸಾಗಿ ಸುರಿಯಿತು. ಏಕಾಏಕಿ ಸಿಡಿದ ಸಿಡಿಲಿನ ಆರ್ಭಟ ಮುಂದುವರೆಯಿತು. ಆರಂಭದಲ್ಲಿ ಭಾರೀ ಗುಡುಗಿನ ಸದ್ದಿನೊಂದಿಗೆ ಆರಂಭವಾದ ಮಳೆ 8.30ರವರೆಗೆ ಜೋರಾಗಿ ಸುರಿಯಿತು. ಪಟ್ಟಣದ ರಸ್ತೆಗಳ ಮೇಲ್ಲೆಲ್ಲ ಮಳೆನೀರು ಹರಿದರೆ, ಚಂರಡಿಗಳು ಮಳೆನೀರಿನಿಂದ ಭರ್ತಿಯಾಗಿ ಹರಿದವು. ತಾಲೂಕಿನ ಕೋಗಳಿ, ತಂಬ್ರಹಳ್ಳಿ ಹಾಗೂ ಹಗರಿಬೊಮ್ಮನಹಳ್ಳಿ ಕಂದಾಯ ವ್ಯಾಪ್ತಿಗೆ ಒಳಪಡುವ ಹಲವು ಗ್ರಾಮಗಳಲ್ಲಿ ಜಿಟಿ, ಜಿಟಿ ಹಾಗೂ ಜೋರಾದ ಮಳೆ ಸುರಿದಿದೆ. ಆದರೆ ಯಾವುದೆ ಹಾನಿ ಸಂಭವಿಸಿದ ವರದಿಗಳಾಗಿಲ್ಲ. ಶಿವರಾತ್ರಿ ಜಾಗರಣೆಯ ಸಂಭ್ರಮದಲ್ಲಿದ್ದ ಪಟ್ಟಣದ ಜನತೆಗೆ ಜೋರಾಗಿ ಸುರಿದ ಅಕಾಲಿಕ ಮಳೆ ತೊಂದರೆ ನೀಡಿತು. ಪಟ್ಟಣದ ವಿವಿಧ ದೇವಸ್ಥಾನಗಳಿಗೆ ತೆರಳಿದ್ದ ಭಕ್ತರು ಗುಡುಗು ಸಿಡಿಲಿನಿಂದ ತಪ್ಪಿಸಿಕೊಳ್ಳಲು ದೇವಸ್ಥಾನದ ಆಶ್ರಯ ಪಡೆದರು. ಅಕಾಲಿಕ ಮಳೆ ಹಬ್ಬದಾಚರಣೆಗೆ ಅಡ್ಡಿ ಉಂಟು ಮಾಡಿದ್ದು ಭಕ್ತರಿಗೆ ನಿರಾಸೆ ತರಿಸಿತು.