ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಗಣಿಗಾರಿಕೆ ಬಂದ್: ನಿರುದ್ಯೋಗ ನಿವಾರಣೆಗಾಗಿ ಉಪವಾಸ ಸತ್ಯಾಗ್ರಹ

Lingaraj Badiger
Updated On : 2 Jan 2014, 12:25 pm

ಹೊಸಪೇಟೆ: ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಗಣಿಗಾರಿಕೆ ಬಂದ್ ಆಗಿರುವುದರಿಂದ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಅಧಿಕವಾಗಿದ್ದು, ತಕ್ಷಣ ನಿರುದ್ಯೋಗ ಸಮಸ್ಯೆ ನಿವಾರಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಳ್ಳಾರಿ ಜಿಲ್ಲಾ ಉದ್ಯೋಗ ಭದ್ರತಾ ವೇದಿಕೆ ಮುಖಂಡರು ನಗರದ ತಹಸೀಲ್ದಾರ್ ಕಚೇರಿ ಎದುರು ಬುಧವಾರ ಉಪವಾಸ ಸತ್ಯಾಗ್ರಹ ನಡೆಸಿದರು.
ಬಳ್ಳಾರಿ ಜಿಲ್ಲಾ ಉದ್ಯೋಗ ಭದ್ರತಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಯು. ಜಾಕೀರ್ ಹುಸೇನ್ ಉಪವಾಸ ಸತ್ಯಾಗ್ರಹ ಸಭೆ ಉದ್ದೇಶಿಸಿ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಅನೇಕ ಕುಟುಂಬಗಳು ಗಣಿಗಾರಿಕೆ ಮತ್ತು ಕೈಗಾರಿಕೆಗಳ ಮೇಲೆ ಅವಲಂಬಿತರಾಗಿದ್ದು, ಕಳೆದ ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ಗಣಿಗಾರಿಕೆ ಬಂದ್ ಆಗಿರುವುದರಿಂದ ಗಣಿಗಾರಿಕೆಯಲ್ಲಿ ತೊಡಗಿದ್ದ ಕೂಲಿ ಕಾರ್ಮಿಕರು, ಲಾರಿ ಚಾಲಕರು, ಕ್ಲೀನರ್‌ಗಳು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಸರ್ಕಾರ ತಕ್ಷಣ ಜಿಲ್ಲೆಯ ಬಗ್ಗೆ ಗಮನಹರಿಸಿ ಜಿಲ್ಲೆಯಲ್ಲಿನ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವಂಥ ಯೋಜನೆಗಳನ್ನು ರೂಪಿಸಬೇಕು. ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿಗಾಗಿ ಜಾರಿ ಮಾಡಿರುವ ಸಂವಿಧಾನದ 371 (ಜೆ) ಕಾಯ್ದೆಯಡಿ ಬಳ್ಳಾರಿ ಜಿಲ್ಲೆಯ ನಿರುದ್ಯೋಗ ಕುಟುಂಬಗಳಿಗೆ ಉದ್ಯೋಗದಲ್ಲಿ ಪ್ರಥಮ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ವಕೀಲರಾದ ಇ. ಪುಷ್ಪಲತಾ ಮಾತನಾಡಿ, ಜಿಲ್ಲೆಯ ಬಹುತೇಕ ಜನರಿಗೆ ದುಡಿಯಲು ಕೆಲಸವಿಲ್ಲದಾಗಿರುವುದರಿಂದ ಸಾಕಷ್ಟು ನಿರುದ್ಯೋಗ ಸಮಸ್ಯೆ ಜಿಲ್ಲೆಯಲ್ಲಿ ತಾಂಡವಾಡುತ್ತಿದೆ. ದುಡಿಯಲು ಕೈ ತುಂಬ ಕೆಲಸವಿಲ್ಲದೆ ಇರುವುದರಿಂದ ಕೆಲ ನಿರುದ್ಯೋಗಿಗಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವಂತಾಗಿದೆ. ತಕ್ಷಣ ಯಾರೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ಉದ್ಯೋಗ ಅವಕಾಶ ಕಲ್ಪಿಸಿಕೊಟ್ಟು ನಿರುದ್ಯೋಗ ಸಮಸ್ಯೆ ಬಗೆಹರಿಸುವಂತೆ ಅವರು ಸರ್ಕಾರಕ್ಕೆ ಒತ್ತಾಯಿಸಿದರು.
ಬಳ್ಳಾರಿ ಜಿಲ್ಲಾ ಉದ್ಯೋಗ ಭದ್ರತಾ ವೇದಿಕೆ ಮುಖಂಡರಾದ ಜಂಬಾನಹಳ್ಳಿ ಆಂಜನೇಯ, ಪರಶುರಾಮ, ತಾರಿಹಳ್ಳಿ ಭೀಮಪ್ಪ, ಜಿ. ವೆಂಕಟೇಶ್, ಶೌಕತ್ ಅಲಿ, ಎಂ. ಅನೀಸ್, ಮಮ್ತಾಜ್ ಬೇಗಂ, ಶಮಾ ಇತರರು ಸತ್ಯಾಗ್ರಹದಲ್ಲಿ ತೊಡಗಿಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement