ನಾಳೆ ಶಾಲೆ ವಾರ್ಷಿಕೋತ್ಸವ
ಬಳ್ಳಾರಿ: ನಗರದ ಶ್ರೀ ವಾಸವಿ ಪ್ರೌಢಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮ ಜ. 3ರಂದು ಸಂಜೆ 6.15ಕ್ಕೆ ಶಾಲಾ ಆವರಣದಲ್ಲಿ ಜರುಗಲಿದೆ. ಜಿಲ್ಲಾ ಎಸ್ಪಿ ಚೇತನ್ಸಿಂಗ್ ರಾಥೋರ್, ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ವೀರಣ್ಣ ಎಸ್. ಜತ್ತಿ ಪಾಲ್ಗೊಳ್ಳುವರು. ವಾಸವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಯಪ್ರಕಾಶ್ ಜೆ. ಜಯಗುಪ್ತ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಡಿಟಿಪಿ ತರಬೇತಿ: ಆಹ್ವಾನ
ಬಳ್ಳಾರಿ: ನಗರದ ಸಿಂಡ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ನಗರ ಹಾಗೂ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ-ಯುವತಿಯರಿಗೆ ಉಚಿತ ಕಂಪ್ಯೂಟರ್ ಡಿಟಿಪಿ ತರಬೇತಿಗೆ ಅರ್ಜಿ ಆಹ್ವಾನಿಸಿದೆ. 18ರಿಂದ 45 ವಯೋವುತಿಯೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿ ಅವಧಿ 45 ದಿನಗಳಾಗಿದ್ದು, ಉಚಿತ ಊಟ, ವಸತಿ ಹಾಗೂ ಕೌಶಲ್ಯದ ಜತೆಗೆ ಉದ್ಯಮಶೀಲತೆ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲಾಗುತ್ತದೆ. ತರಬೇತಿ ಜನವರಿ ತಿಂಗಳ ಎರಡನೇ ವಾರದಲ್ಲಿ ನಡೆಯಲಿದ್ದು, ಕನ್ನಡವನ್ನು ಓದಲು ಹಾಗೂ ಬರೆಯಲು ಬರುವಂತಹ ನಿರುದ್ಯೋಗಿ ಸ್ವ-ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಬಹುದು. ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ, ಸಂಪರ್ಕಕ್ಕೆ ಲಭ್ಯವಿರುವ ದೂರವಾಣಿ ಸಂಖ್ಯೆ, ವಯಸ್ಸು, ವಿದ್ಯಾರ್ಹತೆ ಹಾಗೂ ಇತರೆ ಮಾಹಿತಿಯೊಂದಿಗೆ ಬಿಳಿ ಹಾಳಿಯಲ್ಲಿ ಬರೆದ ಅರ್ಜಿಯನ್ನು ನಿರ್ದೇಶಕರು, ಸಿಂಡ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಡಿಐಸಿ ಕಾಂಪೌಂಡ್, ಹೊಸಪೇಟೆ ರಸ್ತೆ, ಬಳ್ಳಾರಿ ಈ ವಿಳಾಸಕ್ಕೆ ಜ. 4ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂ: 08392-244117ಗೆ ಸಂಪರ್ಕಿಸುವಂತೆ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸ್ಪಾಸ್ ನವೀಕರಣಕ್ಕೆ ಫೆ. 28 ಕೊನೆ ದಿನ
ಬಳ್ಳಾರಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಜಿಲ್ಲೆಯ ವಿಕಲಚೇತನರಿಗೆ 2013ರಲ್ಲಿ ನೀಡಿರುವ ರಿಯಾಯಿತಿ ಬಸ್ಪಾಸ್ಗಳನ್ನು ನವೀಕರಿಸಲು 2014ರ ಫೆ. 28 ಕಡೆ ದಿನವಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ದುರ್ಗಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಕಲಚೇತನರು 2014ನೇ ಸಾಲಿಗಾಗಿ ಬಸ್ಪಾಸ್ಗಳನ್ನು ನವೀಕರಿಸಿಕೊಳ್ಳುವವರು ಹಾಗೂ ಹೊಸದಾಗಿ ವಿಕಲಚೇತನ ರಿಯಾಯತಿ ಬಸ್ಪಾಸ್ ಪಡೆಯಲಿಚ್ಛಿಸುವವರು ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆಯಲ್ಲಿ ದಾಖಲಿಸಿಕೊಂಡು ರು. 660ಗಳ ಶುಲ್ಕ ಪಾವತಿಸಿ 2014ರ ಜ. 1ರಿಂದ ಡಿ. 31ರ ಅವಧಿಗೆ ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.