ಸಿರಾಜ್ ಶೇಖ್ ಕಾಂಗ್ರೆಸ್ ಸೇರ್ಪಡೆ ವಿರೋಧಿಸಿ ಪತ್ರ
ಬಳ್ಳಾರಿ: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದಂತೆ ಕಾಂಗ್ರೆಸ್‌ನಲ್ಲಿ ಒಂದಿಲ್ಲೊಂದು ಗೊಂದಲಗಳು ಸೃಷ್ಟಿಯಾಗುತ್ತಿವೆ. ಕೆ.ಸಿ. ಕೊಂಡಯ್ಯನವರ ರಾಜೀವ್ ಗಾಂಧಿ ಟ್ರಸ್ಟ್ ವಿವಾದ ಆಯ್ತು, ಕೆ.ಎಂ. ಶಶಿಧರಸ್ವಾಮಿ ಮೇಲೆ ಹಲ್ಲೆ ಆರೋಪ ಆಯ್ತು, ಇದೀಗ ಸಿರಾಜ್ ಶೇಖ್ ಕಾಂಗ್ರೆಸ್ ಸೇರ್ಪಡೆ ಸರದಿ.
ಸಿರಾಜ್ ಶೇಖ್ ಸೇರ್ಪಡೆ ಕುರಿತಾಗಿ ಬಳ್ಳಾರಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಹರಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ಅವರೇ ವಿರೋಧ ತೋರಿ, ಕೆಪಿಸಿಸಿ ಅಧ್ಯಕ್ಷರಿಗೆ ಡಿ. 27ರಂದು ಪತ್ರ ಬರೆದಿದ್ದಾರೆ. ಪತ್ರವು ಕನ್ನಡಪ್ರಭಕ್ಕೆ ಲಭ್ಯವಾಗಿದೆ. ಇನ್ನು ಡಿ. 30ರಂದು ಸಿರಾಜ್ ಶೇಖ್ ಕಾಂಗ್ರೆಸ್ ಸೇರ್ಪಡೆ ಕುರಿತಾಗಿ ಕರೆದ ಸಮಾನ ಮನಸ್ಕರ ಸಭೆಯಲ್ಲಿ ಪಾಲ್ಗೊಂಡಿದ್ದ ಕೆ.ಸಿ. ಕೊಂಡಯ್ಯ ಸೇರಿ 11 ಕಾಂಗ್ರೆಸ್ ಮುಖಂಡರಿಗೆ ಗ್ರಾಮೀಣ ಜಿಲ್ಲಾ ಸಮಿತಿಯು ಬುಧವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಇದರಿಂದಾಗಿ ಸಿರಾಜ್ ಶೇಖ್ ಕಾಂಗ್ರೆಸ್ ಸೇರ್ಪಡೆಗೆ ಆರಂಭದಲ್ಲಿಯೇ ವಿರೋಧ ವ್ಯಕ್ತವಾಗಿದೆ. ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದ ಸಿರಾಜ್ ಶೇಖ್ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ, ನಂತರ ಶ್ರೀರಾಮುಲು ಅವರ ಬಿಎಸ್ಸಾರ್ ಸೇರಿ 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹರಪನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಿತರಾದರು.
ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ರವೀಂದ್ರ ಅವರ ಪತ್ರದಲ್ಲೇನಿದೆ: ಡಿ. 30ರಂದು ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ ನೀವು ಕಾರ್ಯಕ್ರಮಕ್ಕೆ ಬರಬೇಕು ಎಂದು ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸಿರಾಜ್ ಶೇಖ್ ಅವರು ದೂರವಾಣಿ ಮೂಲಕ ಆಹ್ವಾನ ಮಾಡಿದ್ದಾರೆ. ಈ ಕುರಿತಾಗಿ ತಾವು (ಎಂ.ಪಿ. ರವೀಂದ್ರ) ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಭೋಸರಾಜು ಅವರೊಂದಿಗೆ ಚರ್ಚಿಸಿದಾಗ, ಈ ವಿಚಾರ ಕೆಪಿಸಿಸಿ ಮುಂದೆ ಪ್ರಸ್ತಾಪವಾಗಿಲ್ಲ ಎಂದು ಖಚಿತಪಡಿಸಿದ್ದಾರೆ.
ಸಿರಾಜ್ ಶೇಖ್ ಇಂತಹ ಆಹ್ವಾನ ನೀಡಿ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅಲ್ಲದೆ, ಬಳ್ಳಾರಿ ಜಿಪಂ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಆಯ್ಕೆ ವಿಷಯದಲ್ಲಿ ಸಿರಾಜ್ ಶೇಖ್ ಅವರು ಬಿಎಸ್ಸಾರ್ ಮುಖಂಡರಾಗಿ ಬಿಎಸ್ಸಾರ್ ಪಕ್ಷಕ್ಕೆ ಬೆಂಬಲ ನೀಡಿದ್ದು ಅಲ್ಲದೆ, ಕಾಂಗ್ರೆಸ್ ಸದಸ್ಯರಿಗೆ ಆಮಿಷವೊಡ್ಡಿ, ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸೋಲಲು ಕಾರಣವಾಗಿದ್ದಾರೆ. ಇದೀಗ ನಾನು(ಎಂ.ಪಿ. ರವೀಂದ್ರ) ಕಾಂಗ್ರೆಸ್ ಸದಸ್ಯರ ಮನವೊಲಿಸಿ, ನಂತರ ಜಿಲ್ಲಾ ಪಂಚಾಯ್ತಿ ಅಧಿಕಾರವನ್ನು ಕಾಂಗ್ರೆಸ್ ಪಡೆಯುವಂತೆ ಮಾಡಿದ್ದೇನೆ.
ಹರಪನಹಳ್ಳಿಯಲ್ಲಿ ಕಾಂಗ್ರೆಸ್ ಸೋಲಿಸುವ ತಂತ್ರ: 2013ರಲ್ಲಿ ಹರಪನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ತಾವು (ಎಂ.ಪಿ. ರವೀಂದ್ರ) ಕಣಕ್ಕಿಳಿದು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ನೆರವಿನಿಂದ ಜಯ ಗಳಿಸಿದ್ದೇನೆ. ಆದರೆ, ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಕರುಣಾಕರ ರೆಡ್ಡಿಗೆ ಅನುಕೂಲವಾಗುವ ದೃಷ್ಟಿಯಿಂದ ಸಿರಾಜ್ ಶೇಖ್ ಅವರು, ಬಿಎಸ್‌ಆರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್ ಮತಗಳನ್ನು ಸೆಳೆದು, ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರಣವಾಗಬೇಕೆನ್ನುವ ಗೌಪ್ಯ ತಂತ್ರಗಳ ಭಾಗವಾಗಿಯೇ ಸಿರಾಜ್ ಶೇಖ್ ತಮ್ಮ ವಿರುದ್ಧ ಸ್ಪರ್ಧಿಸಿದ್ದರು ಎಂಬ ಆರೋಪವನ್ನು ಎಂ.ಪಿ. ರವೀಂದ್ರ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಕಾಂಗ್ರೆಸ್ ಮೂಲಕವೇ ರಾಜಕೀಯ ಪ್ರವೇಶ ಮಾಡಿದ ಅವರು, ಗಣಿ ರೆಡ್ಡಿಗಳ ಸಾಂಗತ್ಯ ಬೆಳೆಸಿಕೊಂಡು, ಇದೀಗ ರೆಡ್ಡಿ ಬಳಗದ ಸದಸ್ಯರು ಒಬ್ಬೊಬ್ಬರಾಗಿ ಜೈಲು ಪಾಲಾಗುತ್ತಿರುವಾಗ, ಸಿರಾಜ್ ಶೇಖ್ ತಮ್ಮ ರಾಜಕೀಯ ಅಸ್ತಿತ್ವಕ್ಕೆ ಕಾಂಗ್ರೆಸ್‌ಗೆ ಮರು ಸೇರ್ಪಡೆಯ ಚರ್ಚೆ ನಡೆಯುತ್ತಿದೆ. ಇಂತಹ ಅವಕಾಶವಾದಿ ರಾಜಕಾರಣಿ ಅಗತ್ಯ ಕಾಂಗ್ರೆಸ್‌ಗಿಲ್ಲ. ಅವರನ್ನು ಸ್ವಾಗತಿಸಿದರೆ, ರಾಜಕೀಯ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದು ನನ್ನ(ಎಂ.ಪಿ. ರವೀಂದ್ರ) ಅಭಿಪ್ರಾಯ ಎಂದು ಪತ್ರದಲ್ಲಿ ರವಿಂದ್ರ ತಿಳಿಸಿದ್ದಾರೆ.
ಶೋಕಾಸ್ ನೋಟಿಸ್: ಇನ್ನು ಕಾಂಗ್ರೆಸ್ ಸೇರ್ಪಡೆಯ ಕುರಿತಾಗಿ ಸಿರಾಜ್ ಶೇಖ್ ಅವರು ಡಿ. 30ರಂದು ನಡೆದ ಸಾಮಾನ ಮನಸ್ಕರ ಸಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ನ ಮುಖಂಡರಾದ ಕೆ.ಸಿ. ಕೊಂಡಯ್ಯ, ಕೆ.ಎಸ್.ಎಲ್. ಸ್ವಾಮಿ, ಕೆ.ಎಂ. ಹಾಲಪ್ಪ, ನಿರಂಜನನಾಯ್ಡು ಸೇರಿದಂತೆ 11 ಜನರಿಗೆ ಬುಧವಾರ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ. ಸಿರಾಜ್ ಶೇಖ್ ಕಾಂಗ್ರೆಸ್ ಸೇರ್ಪಡೆಗೆ ಕಾಂಗ್ರೆಸ್ ಹೈಕಮಾಂಡ್ ಸ್ವಷ್ಟ ತೀರ್ಮಾನ ಕೈಗೊಳ್ಳುವ ಮುಂಚಿತವಾಗಿಯೇ ಸಿರಾಜ್ ಶೇಖ್ ನೇತೃತ್ವದ ಬೆಂಬಲಿಗರ ಸಭೆಯಲ್ಲಿ ಪಾಲ್ಗೊಂಡು ಪಕ್ಷದ ಶಿಸ್ತು ಉಲ್ಲಂಘಿಸಿದ್ದೀರಿ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳ ನಾಲ್ಕು ಬ್ಲಾಕ್ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿರುತ್ತೀರಿ. ಈ ಹಿನ್ನೆಲೆಯಲ್ಲಿ ತಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಲು ಕೆಪಿಸಿಸಿ ಶಿಸ್ತು ಸಮಿತಿಗೆ ಏಕೆ ಶಿಫಾರಸು ಮಾಡಬಾರದು ಎಂದು ಜಿಲ್ಲಾಧ್ಯಕ್ಷರು (ಗ್ರಾಮೀಣ) ನಿರ್ದೇಶನದ ಮೇರೆಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
7 ದಿನದೊಳಗಾಗಿ ಸ್ವಷ್ಟೀಕರಣ ನೀಡಬೇಕೆಂದು ಜಿಲ್ಲಾಧ್ಯಕ್ಷ(ಗ್ರಾಮೀಣ)ರಿಂದ ನಿರ್ದೇಶಿತನಾಗಿದ್ದೇನೆ ಎಂದು ಪಕ್ಷದ ಜಿಲ್ಲಾ ಗ್ರಾಮೀಣ ಸಮಿತಿಯ ಉಪಾಧ್ಯಕ್ಷ ಟಿ. ಮೆಹಬೂಬ್ ಸಾಬ್ ಬುಧವಾರ ನೋಟಿಸ್ ಜಾರಿ ಮಾಡಿದ್ದಾರೆ.
-ಶಶಿಧರ ಮೇಟಿ