ಡಾ. ಪುಟ್ಟರಾಜ ಗವಾಯಿಗೆ ಭಾರತ ರತ್ನ ನೀಡಿ
ಕಂಪ್ಲಿ: ನಾಡಿನ ಅಸಂಖ್ಯಾತ ಅಂಧರ ಮತ್ತು ಅನಾಥ ಮಕ್ಕಳ ಬಾಳಿಗೆ ಬೆಳಕಾಗಿದ್ದ ಗದಗನ ಲಿಂಗೈಕ್ಯ ಡಾ. ಪಂಡಿತ ಪುಟ್ಟರಾಜ ಗವಾಯಿಗಳವರಿಗೆ ಭಾರತ ರತ್ನ ನೀಡಬೇಕು ಎಂದು ಎಮ್ಮಿಗನೂರು ಹಂಪಿ ಸಾವಿರ ದೇವರ ಮಹಂತರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಆಗ್ರಹಿಸಿದರು.
ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ಪಂ. ಡಾ. ಪುಟ್ಟರಾಜ ಗವಾಯಿಗಳವರ ಸೇವಾ ಟ್ರಸ್ಟ್ ಉದ್ಘಾಟಿಸಿ, ಟ್ರಸ್ಟ್‌ನ ದಿನದರ್ಶಿಕೆ ಬಿಡುಗಡೆ ಹಾಗೂ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಪುಟ್ಟರಾಜ ಗವಾಯಿಗಳು ದೈಹಿಕವಾಗಿ ಅಂಧರಾಗಿದ್ದರೂ ಅಂತರಾಳದಿಂದ ಇನ್ನೊಬ್ಬರಿಗೆ ದಾರಿದೀಪವಾದರು ಎಂದು ಹೇಳಿದರು.
ಹೊಸಮಠ ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ಮಾತನಾಡಿ, ಪುಟ್ಟರಾಜ ಗವಾಯಿಗಳು ಅಂಧರಾಗಿದ್ದು ಮಾಡಿದ ಸಾಧನೆ ಅಪಾರ. ಅವರ ಹೆಸರಿನ ಸೇವಾ ಟ್ರಸ್ಟ್ ಪುಟ್ಟರಾಜರ ಸಾಧನೆಗಳನ್ನು ಮನೆ ಮನೆಗೆ ಮುಟ್ಟಿಸುವಂಥ ಕೆಲಸ ಮಾಡಬೇಕು ಎಂದರು. ಡಾ. ಪಂ. ಪುಟ್ಟರಾಜ ಗವಾಯಿಗಳ ಸೇವಾ ಟ್ರಸ್ಟ್‌ನ ನೂತನ ಅಧ್ಯಕ್ಷ ಜಿ. ಚಂದ್ರಶೇಖರಗೌಡ ಮಾತನಾಡಿ, ಸೇವಾ ಟ್ರಸ್ಟ್‌ನಿಂದ ಅಂಧ ಹಾಗೂ ಅನಾಥ ಮಕ್ಕಳ ವಸತಿ ಸಹಿತ ಸಂಗೀತ ಶಾಲೆ ತೆರೆಯುವ ಸದುದ್ದೇಶ ಹೊಂದಿದ್ದೇವೆ ಎಂದರು.
ಪೇಟೆ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ. ವೀರಪ್ಪ ಉಪಸ್ಥಿತರಿದ್ದರು. ಡಾ. ಪಂ. ಪುಟ್ಟರಾಜ ಗವಾಯಿಗಳ ಸೇವಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಜೆ.ಎಂ. ಸಿದ್ರಾಮಯ್ಯ ಶಾಸ್ತ್ರಿ ನಿರೂಪಿಸಿದರು. ಗೌರವಾಧ್ಯಕ್ಷ ನವಣಕ್ಕಿ ಈಶಪ್ಪ, ಕಾರ್ಯದರ್ಶಿ ಜೌಕಿನ ಸತೀಶ, ಖಜಾಂಚಿ ಯು.ಎಂ. ವಿದ್ಯಾಶಂಕರ, ಉಪಾಧ್ಯಕ್ಷರಾದ ಈಶಪ್ಪ ಹೂಗಾರ್, ರಮೇಶ ಹೂಗಾರ್, ವೈ. ವೆಂಕಟರೆಡ್ಡಿ, ಉಪ ಕಾರ್ಯದರ್ಶಿ ಅಯ್ಯಪ್ಪ ಹೂಗಾರ್, ಮಲ್ಲೇಶ್ ಮಾಳ್ಗಿ, ಕಾರ್ಯಕಾರಿ ಮಂಡಳಿ ಸದಸ್ಯರಾದ ಕೆ.ಎಂ. ಬಸವರಾಜಶಾಸ್ತ್ರಿ, ಸಿ.ಕೆ. ಪಡದಯ್ಯಸ್ವಾಮಿ, ಜೆ.ಎಂ. ಚನ್ನಬಸವಣ್ಣ, ಯು.ಎಂ. ಮಲ್ಲಿಕಾರ್ಜುನ, ಕೆ.ಎಂ. ಶೀಕಾಂತ, ಬೂಸಾರಿ ತಿಪ್ಪೇರುದ್ರ, ಪಿ. ಮಂಜುನಾಥ, ರವಿ ಹೂಗಾರ್, ಅರವಿ ಶಾಂತಕುಮಾರ, ಗವಿ ವೀರನಗೌಡ, ಪಿ. ರಾಜ ಭಾಗವಹಿಸಿದ್ದರು.