ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನಿರುದ್ಯೋಗ ಸಮಸ್ಯೆ ನಿವಾರಣೆಗೆ ಆಗ್ರಹ

Lingaraj Badiger
Updated On : 3 Jan 2014, 12:33 pm

ಹೊಸಪೇಟೆ: ಬಳ್ಳಾರಿ ಜಿಲ್ಲೆಯಲ್ಲಿ ಕೆಲ ವರ್ಷಗಳಿಂದ ಗಣಿಗಾರಿಕೆ ಬಂದ್ ಆಗಿರುವುದರಿಂದ ನಿರುದ್ಯೋಗ ಸಮಸ್ಯೆ ಅಧಿಕವಾಗಿದ್ದು, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಳ್ಳಾರಿ ಜಿಲ್ಲಾ ಉದ್ಯೋಗ ಭದ್ರತಾ ವೇದಿಕೆಯ ಮುಖಂಡರು ನಗರದ ತಹಸೀಲ್ದಾರ್ ಕಚೇರಿ ಎದುರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.  
ಬಳ್ಳಾರಿ ಜಿಲ್ಲಾ ಉದ್ಯೋಗ ಭದ್ರತಾ ವೇದಿಕೆ ಅಧ್ಯಕ್ಷ ಟಿ. ಭೀಮಪ್ಪ, ಉಪವಾಸ ಸತ್ಯಾಗ್ರಹ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಗಣಿಗಳನ್ನು ಪುನಾರಂಭಿಸಬೇಕು. ಗಣಿಗಾರಿಕೆಗೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ ಸರ್ಕಾರವು ಗಣಿಗಳ ಆರಂಭಕ್ಕೆ ಗಮನ ಹರಿಸುತ್ತಿಲ್ಲ. ಗಣಿ ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಹುತೇಕ ಜನರು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಆದ್ದರಿಂದ ಸರ್ಕಾರ ನ್ಯಾಯಯುತ ಗಣಿಗಳನ್ನು ಪುನಾರಂಭಿಸುವುದಕ್ಕೆ ಆದೇಶ ನೀಡಿ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದರು.
ವೇದಿಕೆಯ ಗೌರವಾಧ್ಯಕ್ಷ ಜೆ. ಆಂಜನೇಯ ಮಾತನಾಡಿ, ಬಳ್ಳಾರಿ ಜಿಲ್ಲೆಯಿಂದ ಹೊರಡುವ ವರಮಾನದಲ್ಲಿ ಶೇ. 50ರಷ್ಟು ಬಳ್ಳಾರಿ ಜಿಲ್ಲೆಗೆ ಸೀಮಿತಗೊಳಿಸಬೇಕು. ಬಳ್ಳಾರಿ ಜಿಲ್ಲೆಯ ಆರ್ಥಿಕ ಸಬಲತೆಗೆ ಸದೃಢಗೊಳ್ಳಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. ವೇದಿಕೆಯ ಸಂಚಾಲಕ ಯು. ಜಾಕೀರ್ ಹುಸೇನ್ ಮಾತನಾಡಿದರು.
ವೇದಿಕೆ ಪ್ರಧಾನ ಕಾರ್ಯದರ್ಶಿ ಇ. ಪುಷ್ಪಲತಾ ಮಾತನಾಡಿ, ಜಿಲ್ಲೆಯ ಜನರು ಬೇರೆ ರಾಜ್ಯಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಸರ್ಕಾರ ಗಣಿಗಾರಿಕೆಯನ್ನು ಪುನಾರಂಭಿಸುವುದಕ್ಕೆ ಅವಕಾಶ ನೀಡುವ ಜೊತೆಗೆ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಕಲ್ಪಿಸಿಕೊಟ್ಟು ಜನರಿಗೆ ಉದ್ಯೋಗವನ್ನು ಕಲ್ಪಿಸಿಕೊಡಬೇಕು. ದುಡಿಯುವ ಕೈಗಳಿಗೆ ಕೆಲಸ ನೀಡುವ ಮೂಲಕ ಜಿಲ್ಲೆಯ ಜನರನ್ನು ಆರ್ಥಿಕ ಸಬಲರನ್ನಾಗಿ ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು.
ಹೈದ್ರಾಬಾದ್ ಕರ್ನಾಟಕದ ಕಲಂ 371ರ ಅಡಿಯಲ್ಲಿ ಬರುವಂತಹ ಎಲ್ಲ ಸರ್ಕಾರಿ ಮತ್ತು ಅರೆಸರ್ಕಾರಿ ಸೌಲಭ್ಯಗಳನ್ನು ಮತ್ತು ಇತರೆ ಸಂಘ-ಸಂಸ್ಥೆಗಳಿಂದ ದೊರೆಯುವ ಎಲ್ಲಾ ಸವಲತ್ತುಗಳಲ್ಲಿ ಬಳ್ಳಾರಿ ಜಿಲ್ಲೆಯ ಜನರಿಗೆ ಶೇ. 75ರಷ್ಟು ಉದ್ಯೋಗ ಅವಕಾಶ ಕಲ್ಪಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಬಳ್ಳಾರಿ ಜಿಲ್ಲಾ ಉದ್ಯೋಗ ಭದ್ರತಾ ವೇದಿಕೆಯ ಉಪಾಧ್ಯಕ್ಷ ಪರಶುರಾಮ, ಕಾರ್ಯದರ್ಶಿ ಎಂ. ಅನೀಸ್, ಖಚಾಂಚಿ ಜಿ. ವೆಂಕಟೇಶ್, ಮುಖಂಡರಾದ ಶೌಕತ್ ಅಲಿ, ಮಮ್ತಾಜ್ ಬೇಗಂ, ಶಮಾ, ಜಯ ಕರ್ನಾಟಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕಟಗಿ ರಾಮಕೃಷ್ಣ, ತಾಲೂಕು ಅಧ್ಯಕ್ಷ ವಿ. ಪರಶುರಾಮ, ಮುಖಂಡರಾದ ಯೂನಿಸ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement