ಸೇತುವೆಯಿಂದ ಬಿದ್ದು ಸೇನಾ ವೈದ್ಯ ಸಾವು
ರಾಣಿಬೆನ್ನೂರು: ಗೋವಾದಿಂದ-ಬೆಂಗಳೂರಿಗೆ ಸಾರಿಗೆ ಸಂಸ್ಥೆಯ ಹವಾನಿಯಂತ್ರಿತ ಬಸ್ನಲ್ಲಿ ಕುಟುಂಬ ಸಮೇತ ಹೊರಟಿದ್ದ ಅಲಹಾಬಾದ್ ಮಿಲಿಟರಿ ಆಸ್ಪತ್ರೆಯ ವೈದ್ಯರೊಬ್ಬರು ಮೂತ್ರ ವಿಸರ್ಜನೆಗೆ ಇಳಿದಿದ್ದಾಗ ಸೇತುವೆಯಿಂದ ಕೆಳಗೆ ಬಿದ್ದು, ಮೃತಪಟ್ಟ ಘಟನೆ ಗುರುವಾರ ಬೆಳಗಿನ ಜಾವ ಹಲಗೇರಿ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಭವಿಸಿದೆ. ಪ್ರಯಾಣಿಕರ ಕೋರಿಕೆ ಮೇರೆಗೆ ಮೂತ್ರ ವಿಸರ್ಜನೆಗೆಂದು ಚಾಲಕ ಬಸ್ ನಿಲ್ಲಿಸಿದ್ದ. ಹೆದ್ದಾರಿ ಸೇತುವೆ ಪಕ್ಕದಲ್ಲಿ ಮೂತ್ರ ವಿಸರ್ಜನೆಗೆ ತೆರಳಿದ್ದ ಮಿಲಿಟರಿ ಆಸ್ಪತ್ರೆ ವೈದ್ಯ ಕರ್ನಲ್ ಆಶಿಫ್ ಚಕ್ರವರ್ತಿ(57) ಸೇತುವೆಯಿಂದ 7 ಅಡಿ ಕೆಳಕ್ಕೆ ಬಿದ್ದಿದ್ದಾರೆ. ಅವರ ತಲೆ ಹಾಗೂ ಎದೆಗೆ ಗಂಭೀರ ಗಾಯಗಳಾಗಿದ್ದವು. ತಲೆಯಿಂದ ರಕ್ತ ಸುರಿಯುತ್ತಿದ್ದ ಕಾರಣ ಗಾಬರಿಗೊಂಡ ಪತ್ನಿ ನೀಲಂ ಹಾಗೂ ಪುತ್ರಿ ಆಶ್ರಿತಾ ಸಹ ಪ್ರಯಾಣಿಕರ ನೆರವಿನೊಂದಿಗೆ ಆಶಿಫ್ ಅವರನ್ನು ರಾಣಿಬೆನ್ನೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.