ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜಿಎಸ್ಸೆಸ್‌ರಿಂದ ಕಾವ್ಯಗಳಲ್ಲಿ ವೈಚಾರಿಕ ಪ್ರಜ್ಞೆ: ರಾಮನಮಲಿ

Lingaraj Badiger
Updated On : 4 Jan 2014, 11:28 am

ಹೂವಿನಹಡಗಲಿ: ದೇವರು, ಧರ್ಮ, ವಿಧಿ ಕರ್ಮಗಳನ್ನು ಧಿಕ್ಕರಿಸಿ ವರ್ತಮಾನದ ಸಮಕಾಲೀನ ಅನುಭಗಳ ನೆಲೆಗಟ್ಟಿನಲ್ಲಿ ತಮ್ಮ ಕಾವ್ಯಗಳಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದವರು ಜಿ.ಎಸ್. ಶಿವರುದ್ರಪ್ಪನವರು ಎಂದು ಹರಪನಹಳ್ಳಿ ಸಾಹಿತಿ ರಾಮನಮಲಿ ಅಭಿಪ್ರಾಯ ಪಟ್ಟರು.
ಸ್ಥಳೀಯ ಮಲ್ಲಿಗೆ ಪ್ರಕಾಶನದಿಂದ ಆಯೋಜಿಸಿದ್ದ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ ಭಾವನಮನ ಕಾರ್ಯಕ್ರಮದಲ್ಲಿ 'ಜಿ.ಎಸ್. ಶಿವರುದ್ರಪ್ಪ ಅವರ ಕಾವ್ಯಗಳಲ್ಲಿ ವೈಚಾರಿಕ ಪ್ರಜ್ಞೆ' ಕುರಿತು ಅವರು ಮಾತನಾಡಿದರು.
ಜಿಎಸ್ಸೆಸ್ ಕಾಲದ ಯಾವ ಪ್ರಭಾವ, ಪ್ರವಾಹಕ್ಕೂ ಒಳಗಾಗದೇ ಸಮಚಿತ್ತದಿಂದ ಎದೆತುಂಬಿ ಹಾಡಿ ಪ್ರೀತಿಯ ಹಣತೆ ಹಚ್ಚಿದವರು ಎಂದರು.
ಪ್ರೊ. ಶಾಂತಮೂರ್ತಿ ಕುಲಕರ್ಣಿ ಕಾವ್ಯ ಓದುವ ಮೂಲಕ ವಿಚಾರ ಸಂಕಿರಣ ಉದ್ಘಾಟಿಸಿದರು. ಸಾಹಿತಿಗಳಾದ ಕೆ. ವಿರೂಪಾಕ್ಷಗೌಡ, ಜಿಎಸ್‌ಎಸ್ ಅವರು ವಿದ್ಯಾರ್ಥಿಯಾಗಿದ್ದ ಆ ಕಾಲದ ತಮ್ಮ ಅನುಭವಗಳನ್ನು ಹಂಚಿಕೊಂಡು ಜಿ.ಎಸ್.ಎಸ್ ಅವರ ಕಾವ್ಯರ್ಥ ಚಿಂತನೆಯನ್ನು ತಿಳಿಸಿದರು. ಸಾಹಿತಿ ಎಚ್. ಶೇಷಗಿರಿರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಗೆ ಕಲಾ ಸಂಸ್ಥೆ ಅಧ್ಯಕ್ಷ ಎಚ್.ಎಂ. ಬೆಟ್ಟಯ್ಯ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ. ಕೊಟ್ರಗೌಡ, ಸಾಹಿತಿಗಳಾದ ಅಂಜನಾ ಕೃಷ್ಣಪ್ಪ, ಟಿ.ಎಂ. ಶಂಕ್ರಯ್ಯ, ಮಲ್ಲಿಗೆ ಪ್ರಕಾಶನದ ಅಧ್ಯಕ್ಷ ಎಲ್. ಖಾದರ್ ಬಾಷಾ ಮಾತನಾಡಿದರು.
ಭಾವ ನಮನದ ವಿಶೇಷ ಕವಿಗೋಷ್ಠಿಯಲ್ಲಿ ಎಸ್. ನಿಂಗರಾಜ್, ನಾಗಮಂಜುಳಾ ಜೈನ್, ಎಲ್. ಖಾದರ್ ಬಾಷಾ, ಎಚ್. ಶೇಷಗಿರಿರಾವ್, ಶಂಕರ್ ಬೆಟಗೇರಿ ಇತರ ಕವಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಭಾವಗೀತೆಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರೌಢಶಾಲೆ ಹಂತದಲ್ಲಿ ವಿದ್ಯಾಂಜಲಿ ಶಾಲೆಯ ಕೆ. ಹೀನಾ ಕೌಸರ್ ಪ್ರಥಮ, ಯು.ಎಂ. ಅನುಷಾ ದ್ವಿತೀಯ, ನಾಗತಿ ಬಸಾಪುರ ಪ್ರೌಢಶಾಲೆಯ ಎಚ್. ಅಂಜನಪ್ಪ ತೃತೀಯ ಹಾಗೂ ಕಾಲೇಜು ಹಂತದಲ್ಲಿ ಮ.ಮ. ಪಾಟೀಲ್ ಕಾಲೇಜಿನ ಬಿ. ಜೂರಿಲಾಲ್ ನಾಯ್ಕ ಪ್ರಥಮ, ಬಿ. ವಿಶ್ವನಾಥ ದ್ವಿತೀಯ, ಸರ್ಕಾರಿ ಪದವಿ ಕಾಲೇಜಿನ ಎಸ್. ಮಲ್ಲಾನಾಯ್ಕ ತೃತೀಯ ಸ್ಥಾನದಲ್ಲಿ ವಿಜೇತರಾಗಿ ಬಹುಮಾನ ಪಡೆದರು. ಕಲಾವಿದ ಎ. ಕಾಳಪ್ಪ, ಶಿಕ್ಷಕ ಎಲ್.ಎಂ. ಶ್ರೀಲತಾ, ಎ. ಉಮಾಪತಿ ನಿರ್ಣಾಯಕರಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement