ನಿರುದ್ಯೋಗ ಸಮಸ್ಯೆ: ಧರಣಿ ತಾತ್ಕಾಲಿಕ ಸ್ಥಗಿತ
ಹೊಸಪೇಟೆ: ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಗಣಿಗಾರಿಕೆ ಬಂದ್ ಆಗಿರುವುದರಿಂದ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಅಧಿಕವಾಗಿದ್ದು, ತಕ್ಷಣ ನಿರುದ್ಯೋಗ ಸಮಸ್ಯೆ ನಿವಾರಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಳ್ಳಾರಿ ಜಿಲ್ಲಾ ಉದ್ಯೋಗ ಭದ್ರತಾ ವೇದಿಕೆ ಮುಖಂಡರು ನಗರದ ತಹಸೀಲ್ದಾರ್ ಕಚೇರಿ ಎದರು ಮೂರು ದಿನಗಳಿಂದ ನಡೆಸುತ್ತಿದ್ದ ಉಪವ್ಯಾಸ ಸತ್ಯಾಗ್ರಹವು ಶುಕ್ರವಾರ ತಹಸೀಲ್ದಾರ್ ಕಚೇರಿಯ ಅಧಿಕಾರಿಗೆ ಮನವಿ ಸಲ್ಲಿಸುವ ಮೂಲಕ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ಉಪವಾಸ ಸತ್ಯಾಗ್ರಹ ಸಭೆಯನ್ನುದ್ದೇಶಿಸಿ ಬಳ್ಳಾರಿ ಜಿಲ್ಲಾ ಉದ್ಯೋಗ ಭದ್ರತೆ ವೇದಿಕೆ ಸಂಚಾಲಕ ಯು. ಜಾಕೀರ್ ಹುಸೇನ್ ಮಾತನಾಡಿ, ಇಡೀ ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಯಥೇಚ್ಚವಾಗಿ ನೈಸರ್ಗಿಕ ಗಣಿಗಾರಿಕೆ ಹೆಚ್ಚಾಗಿದ್ದು, ಅನೇಕ ವರ್ಷಗಳಿಂದಲೂ ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆಯಲ್ಲಿ ಕೂಲಿ ಕಾರ್ಮಿಕರು ದುಡಿಯುವ ಮೂಲಕ ಜೀವನ ಸಾಗಿಸುತ್ತಿದ್ದರು. ಗಣಿಗಾರಿಕೆಯಿಂದಾಗಿ ಅನೇಕ ಉದ್ಯಮಿಗಳು ನಡೆಯುತ್ತಿದ್ದವು. ಈ ಉದ್ಯಮಗಳಲ್ಲಿ ಸಾಕಷ್ಟು ಜನರಿಗೆ ದುಡಿಯಲು ಕೆಲಸ ಸಿಗುತ್ತಿತ್ತು. ಆದರೀಗ ಕಳೆದ ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ಕೆಲ ಗಣಿಗಾರಿಕೆಗಳನ್ನು ಬಂದ್ ಮಾಡಿರುವುದರಿಂದ ಗಣಿಗಾರಿಕೆಯನ್ನೇ ನಂಬಿ ಜೀವಿಸುವಂಥ ಜನರಿಗೆ ದುಡಿಯಲು ಕೆಲಸವಿಲ್ಲದೆ ಅನೇಕ ಜನರು ನಿರುದ್ಯೋಗಿಗಳಾಗಿ ಜೀವಿಸುತ್ತಿದ್ದಾರೆ. ಸರ್ಕಾರ ತಕ್ಷಣ ನಿರುದ್ಯೋಗಿಗಳಿಗೆ ದುಡಿಯಲು ಕೆಲಸ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
ವೇದಿಕೆ ಪ್ರಧಾನ ಕಾರ್ಯದರ್ಶಿ ಇ. ಪುಷ್ಪಲತಾ, ಜಿಲ್ಲೆಯಲ್ಲಿ ಗಣಿಗಾರಿಕೆ ಅನೇಕ ವರ್ಷಗಳಿಂದಲೂ ನಡೆದುಕೊಂಡು ಬಂದಿದ್ದು, ಇತ್ತೀಚೆಗೆ ಕೆಲವರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದರಿಂದ ಎಲ್ಲ ಗಣಿಗಾರಿಕೆಗಳನ್ನು ಬಂದ್ ಮಾಡುವುದು ಸರಿಯಲ್ಲ.
ಯಾರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೋ ಅಂತಹವರಿಗೆ ಗಣಿಗಾರಿಕೆ ಲೀಜ್ ನೀಡುವುದು ಬಿಟ್ಟು ಬೇರೆಯವರಿಗೆ ಗಣಿಗಾರಿಕೆ ಲೀಜ್ ನೀಡುವ ಮೂಲಕ ಕಾನೂನು ಬದ್ಧವಾಗಿ ಗಣಿಗಾರಿಕೆ ನಡೆಸುವಂತೆ ಸೂಚನೆ ನೀಡಿ, ಗಣಿಗಾರಿಕೆ ಆರಂಭಿಸಬೇಕು ಎಂದರು.
ಧರಣಿಯಲ್ಲಿ ವೇದಿಕೆ ಗೌರವಾಧ್ಯಕ್ಷ ಜೆ. ಆಂಜನೇಯ, ಬಳ್ಳಾರಿ ಜಿಲ್ಲಾ ಉದ್ಯೋಗ ಭದ್ರತಾ ವೇದಿಕೆ ಅಧ್ಯಕ್ಷ ತಾರಿಹಳ್ಳಿ ಭೀಮಪ್ಪ, ಉಪಾಧ್ಯಕ್ಷ ಪರಶುರಾಮ, ಕಾರ್ಯದರ್ಶಿ ಎಂ. ಅನೀಸ್, ಖಜಾಂಚಿ ಜಿ. ವೆಂಕಟೇಶ್, ಕರುನಾಡು ಕಲಿಗಳ ಕ್ರೀಯಾಶೀಲ ಸಮಿತಿ ಅಧ್ಯಕ್ಷ ಪಿ.ವಿ. ವೆಂಕಟೇಶ್, ಮುಖಂಡರಾದ ಖಾದರ್, ಖಾಸಿಂ ಸಾಹೇಬ್, ಟಿಕರ್ ರಫೀಕ್, ಜಲೀಲ್, ಸಾದಿಕ್, ರಾಜು, ಹುಲಿಗೆಮ್ಮ, ಅಹಮ್ಮದ್, ದಿಲ್ಲರ್ ಖಾನ್, ಎ. ನಾಗಪ್ಪ, ಅಪ್ಸರ್, ಇಮ್ರಾನ್, ಖಾಸಿಂ, ನಾರಾಯಣ ಶೌಕತ್ ಅಲಿ, ಮಮ್ತಾಜ್ ಬೇಗಂ, ಶಮಾ, ಯೂನಿಸ್ ಭಾಗವಹಿಸಿದ್ದರು.