ಯುವ ಕವಿಗಳಿಗೆ ಜಿಎಸ್ಸೆಸ್ ಮಾರ್ಗದರ್ಶಿ: ಕುಂವೀ
ಬಳ್ಳಾರಿ: ಜಿಎಸ್ಎಸ್ ಅವರು ತಮ್ಮ ತಾತ್ವಿಕ ಚಿಂತನೆಗಳ ವಿರುದ್ಧ ರಾಜಿ ಮಾಡಿಕೊಳ್ಳದ ಮನೋಭಾವದಿಂದಲೇ ಜೀವನ ಸಾಗಿಸಿದವರು ಎಂದು ಸಾಹಿತಿ ಕುಂ. ವೀರಭದ್ರಪ್ಪ ಅವರು ತಿಳಿಸಿದ್ದಾರೆ.
ಸಿ. ಅಶ್ವತ್ಥ್ ಕಲಾ ಬಳಗ, ಕನ್ನಡ ಕ್ರಾಂತಿ ದಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಳ್ಳಾರಿ ಮೀಡಿಯಾ ಕ್ಲಬ್ ಜಂಟಿಯಾಗಿ ನಗರದ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಬಳಿ ಈಚೆಗೆ ಜಿಎಸ್ಎಸ್ ಕಾವ್ಯ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪರಂತಹ ವಿಶ್ವಮಾನ್ಯ ಕವಿಯನ್ನು ಕಂಡ ಧನ್ಯತಾಭಾವ ನಮ್ಮದಾಗಬೇಕು. ಜಿಎಸ್ಎಸ್ ಅವರು ಯುವ ಕವಿಗಳಿಗೆ ಮಾರ್ಗದರ್ಶಿಯಂತಿದ್ದರು ಎಂದರು.
ಕನ್ನಡ ಕ್ರಾಂತಿ ದಳದ ಅಧ್ಯಕ್ಷ ದರೂರು ಶಾಂತನಗೌಡ ಮಾತನಾಡಿದರು. ಅರಿವು ಸಂಘಟನೆಯ ಶಿರಿಗೇರಿ ಪನ್ನರಾಜ್, ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ದರೂರು ಪುರುಷೋತ್ತಮಗೌಡ, ಡಾ. ಮಂಜುನಾಥ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ರಾಜು ಬಾವಿಹಳ್ಳಿ, ವೀರಶೈವ ತರುಣ ಸಂಘದ ಅಧ್ಯಕ್ಷ ರೂಪನಗುಡಿ ಬಸವರಾಜ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ನಿಷ್ಠಿರುದ್ರಪ್ಪ, ಹಂಪನಗೌಡ, ಸ್ವಾಮಿ ವಿವೇಕಾನಂದ ಯುವಕ ಸಂಘದ ಪಿ. ಗಾದೆಪ್ಪ, ಸಿ.ಅಶ್ವತ್ಥ್ ಕಲಾ ಬಳಗದ ಮೀನಳ್ಳಿ ಚಂದ್ರಶೇಖರ್, ಪಿ.ಎಸ್ ಸೋಮಲಿಂಗನಗೌಡ ಸೇರಿದಂತೆ ಇತರರು ಇದ್ದರು.
ಅಶ್ವತ್ಥ್ ಕಂಠಸಿರಿಯನ್ನು ಹೊಂದಿರುವ ಯಲ್ಲನಗೌಡ ಶಂಕರಬಂಡೆ, ಯುವ ಗಾಯಕರಾದ ಅಮೃತ ವರ್ಷಿಣಿ ಉಪ್ಪಾರ್, ಹರ್ಷಾ ಉಪ್ಪಾರ್, ದೊಡ್ಡ ಬಸವ ಗವಾಯಿ ಡಿ.ಕಗ್ಗಲ್, ವಸಂತಕುಮರ್, ಕವಿತಾ, ಅಲ್ಕಾ ದೇಶಪಾಂಡೆ, ಚಿನ್ಮಯ್ ಕಂಪ್ಲಿ, ಹನುಮಯ್ಯ ಮತ್ತಿತರರು ಜಿಎಸ್ಎಸ್ ಹಾಗೂ ಕುವೆಂಪು ಅವರ ಕಾವ್ಯ ಗಾಯನ ಮಾಡಿದರು. ಇದೇ ವೇಳೆ ಕ್ರೀಡಾ ಇಲಾಖೆ ಮಲಕಪ್ಪ ಹಾಗೂ ದೊಡ್ಡ ಬಸವ ಗವಾಯಿ ಡಿ.ಕಗ್ಗಲ್ ಅವರನ್ನು ಸನ್ಮಾನಿಸಲಾಯಿತು.