ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರಾಜ್ಯಾದ್ಯಂತ ಶುದ್ಧ ನೀರಿಗೆ ಜನಾಂದೋಲನ

Lingaraj Badiger
Updated On : 4 Jan 2014, 11:15 am

ಕೂಡ್ಲಿಗಿ: ರಾಜ್ಯದ 73 ತಾಲೂಕುಗಳಲ್ಲಿ ಕುಡಿಯುವ ನೀರಿನಲ್ಲಿ ಪ್ಲೋರೈಡ್ ಅಂಶವಿದ್ದು, ಈ ನೀರನ್ನು ನಿತ್ಯ ಸೇವಿಸುವುದರಿಂದ ಸಾಮಾನ್ಯ ಜನತೆಯ ಆರೋಗ್ಯ ಹದಗೆಡುತ್ತಿದೆ. ಶೇ. 60ರಷ್ಟು ಜನತೆ ಫ್ಲೋರೈಡ್‌ಯುಕ್ತ ನೀರು ಕುಡಿಯುತ್ತಲೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರೂ ಆಡಳಿತ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗಾಗಿ ಶುದ್ಧ ಕುಡಿವ ನೀರಿಗೆ ಆಗ್ರಹಿಸಿ ರಾಜ್ಯಾದ್ಯಂತ ಶುದ್ಧ ಜಲಕ್ಕಾಗಿ ಜೀವ ಜಲ ಜನಾಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಎಐವೈಎಫ್ ರಾಷ್ಟ್ರೀಯ ಮಂಡಳಿ ಸದಸ್ಯ ಸಾತಿ ಸುಂದರೇಶ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜನಾಂದೋಲನ ಭಿತ್ತಿಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದ ಅವರು, ಪಂಚಾಯತ್ ರಾಜ್ ಇಲಾಖೆ ಅಂಕಿ-ಅಂಶದಂತೆ ರಾಜ್ಯದ 20,920 ಹಳ್ಳಿಗಳಲ್ಲಿ ಫ್ಲೋರೈಡ್ ನೀರು ಸರಬರಾಜಾಗುತ್ತಿದೆ. ವೈಜ್ಞಾನಿಕವಾಗಿ 1 ಪಿಪಿಎಂಗಿಂತಲೂ ಹೆಚ್ಚಿನ ಫ್ಲೋರೈಡ್ ಅಂಶ ಮೀರಿದರೆ ಜನತೆಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆಂದು ಹೇಳಲಾಗಿದೆ. ಸರ್ಕಾರಗಳು ಕನಿಷ್ಠ ಶುದ್ಧ ನೀರು ಕೊಡಲಾರದಷ್ಟು ಮುರ್ಖತನ ಪ್ರದರ್ಶಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ಶೇ. 57.79ರಷ್ಟು ಫ್ಲೋರೈಡ್ ಅಂಶ ಹೆಚ್ಚಿರುವುದರಿಂದ ಜನತೆ ಅನೇಕ ಕಾಯಿಲೆಗಳಿಗೆ ತುತ್ತಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ರಾಜ್ಯ ಸರ್ಕಾರ ಎಚ್ಚರಿಸಲು ರಾಜಕೀಯೇತರ ಶಕ್ತಿಯಾಗಿ ಎಐಎಸ್‌ಎಫ್, ಇಪ್ಟಾ, ಮಹಿಳಾ ಸಂಘಟನೆ ಹಾಗೂ ಎಐವೈಎಫ್ ಜಂಟಿಯಾಗಿ ಜನಾಂದೋಲನ ರೂಪಿಸಿ ಜನತೆಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಜಾಗೃತಿ ಜಾಥಾ: ತಾಲೂಕು ಶುದ್ಧ ಜಲ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಚ್. ವೀರಣ್ಣ, ತಾಲೂಕಿನ ಎಂ.ಬಿ. ಅಯ್ಯನಹಳ್ಳಿಯಲ್ಲಿ ಜ. 20ರಂದು ಶುದ್ಧಜಲ ಹೋರಾಟದ ಜಾಗೃತಿ ಜಾಥಾ ಉದ್ಘಾಟನೆಗೊಂಡು 33 ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಚರಿಸಲಿದ್ದು, ಶುದ್ಧ ಜಲದಿಂದ ಆಗುವ ಉಪಯೋಗ ಕುರಿತು ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು. ತಾಲೂಕಿನ 217 ಹಳ್ಳಿಗಳಿಗೆ ಶುದ್ಧ ಕುಡಿವ ನೀರಿನ ಯೋಜನೆಗೆ ಈಗಾಗಲೆ ರು. 130  ಕೋಟಿ ಬಿಡುಗಡೆಯಾಗಿದೆ. ಆದರೆ, ಆ ಕಾರ್ಯದ ಪ್ರಗತಿ ಇಲ್ಲದೆ ಯೋಜನೆ ಜನರಿಗೆ ಹತ್ತಿರವಾಗುತ್ತಿಲ್ಲ. ಶುದ್ಧ ಕುಡಿವ ನೀರು ಲಭ್ಯವಾಗುವವರೆಗೆ ಹೋರಾಟ ನಿಲ್ಲದು. ಜಾಗೃತಿ ಜಾಥಾ ಮುಕ್ತಾಯದ ನಂತರ ಪಟ್ಟಣದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎಐಎಸ್‌ಎಫ್ ರಾಜ್ಯಾಧ್ಯಕ್ಷ ಸಂತೋಷ್, ತಾಲೂಕು ಅಧ್ಯಕ್ಷ ಎಂ.ಎಸ್. ಹಮೀರ್, ವಕೀಲ ಸಿದ್ದಲಿಂಗಪ್ಪ, ವಿದ್ಯಾರ್ಥಿ ಸಂಚಾಲಕ ನಂದಿ ಪಂಪಾಪತಿ, ಅಯ್ಯನಹಳ್ಳಿ ಎಸ್. ಮೂರ್ತೆಪ್ಪ, ತಿಪ್ಪೇಸ್ವಾಮಿ, ಕರಡಿಹಳ್ಳಿ ಶೆಟ್ಟಿಶರಣಪ್ಪ, ಮಡಕಲಕಟ್ಟೆ ಪಾಲಯ್ಯ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement