ಸಾಲ ತೀರಿಸಲಾಗದೆ ಮೂವರು ಸಾವಿಗೆ ಶರಣು
ಯಲ್ಲಾಪುರ/ಭಟ್ಕಳ/ರಾಣೆಬೆನ್ನೂರು: ಸಾಲ ತೀರಿಸಲಾಗದ ರೈತರಿಬ್ಬರು ಗುರುವಾರ ರಾತ್ರಿ ಯಲ್ಲಾಪುರ ಹಾಗೂ ರಾಣೆಬೆನ್ನೂರು ತಾಲೂಕುಗಳಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೆ, ಯುವಕನೊಬ್ಬ ಸಾಲಕ್ಕೆ ಹೆದರಿ ಭಟ್ಕಳದಲ್ಲಿ ಸಾವಿಗೆ ಶರಣಾಗಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹಣಸೇಮನೆಯ ಚಂದ್ರು ಹುಲಿಯಾ ಮರಾಠಿ (60) ಹಾಗೂ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದ ಬಸವರಾಜ ದುರುಗಪ್ಪ ಭಾಕಿ (40) ವಿಷ ಸೇವಿಸಿದ ಪರಿಣಾಮ ಮೃತಪಟ್ಟಿದ್ದಾರೆ. ಸಾಲ ಬಾಧೆಯಿಂದ ಕಂಗೆಟ್ಟ ಯುವಕ ದುರ್ಗಾ ನಾಯ್ಕ (22) ಭಟ್ಕಳ ತಾಲೂಕಿನ ಮಲ್ಲಾರಿಮನೆಯಲ್ಲಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾನೆ. ಈತನ ಶವ ಮನೆ ಸಮೀಪದ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಂಬಂಧಿಸಿದ ಠಾಣೆಗಳಲ್ಲಿ ಆತ್ಮಹತ್ಯಾ ಪ್ರಕರಣಗಳು ದಾಖಲಾಗಿವೆ.