ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಹಂಪಿ ಉತ್ಸವದಲ್ಲಿ ಭಾಗಿಯಾಗಲ್ಲ: ಲಾಡ್

Lingaraj Badiger
Updated On : 4 Jan 2014, 11:33 am

ಬಳ್ಳಾರಿ: ಹಂಪಿ ಉತ್ಸವಕ್ಕೆ ಸಂಬಂಧಿಸಿದಂತೆ ಎಲ್ಲದಕ್ಕೂ ತಮ್ಮನ್ನು ಕಡೆಗಣಿಸಿರುವುದು ತೀವ್ರ ಬೇಸರ ತಂದಿದ್ದು, ಹಂಪಿ ಉತ್ಸವದಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ತಿಳಿಸಿದರು.
ನಗರದ ಮಹಾನಗರ ಪಾಲಿಕೆಯಲ್ಲಿ ಶುಕ್ರವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಸ್ಥಳೀಯ ಶಾಸಕರು ಹಾಗೂ ಕಲಾವಿದರನ್ನು ಕಡೆಗಣಿಸಿರುವುದರಿಂದ ತೀವ್ರ ಬೇಸರ ತಂದಿದ್ದು, ಮನಸ್ಸಿಗೆ ನೋವುಂಟು ಮಾಡಿದೆ. ಯಾವ ಸಂಭ್ರಮಕ್ಕೆ ಉತ್ಸವದಲ್ಲಿ ಭಾಗವಹಿಸಲಿ ಎಂದು ಪ್ರಶ್ನಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ಅವರ ವರ್ತನೆ ಬಗ್ಗೆ ಈಗಾಗಲೇ ಸಿಎಂ ಅವರ ಗಮನಕ್ಕೆ ತರಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದರು.  
ರೂವಾರಿ ಕುಟುಂಬವು ನಿರ್ಲಕ್ಷ್ಯ: ಹಂಪಿ ಉತ್ಸವಕ್ಕೆ ಸಭೆಗೆ ಸೌಜನ್ಯಕ್ಕಾದರೂ ತಮ್ಮನ್ನು ಕರೆದಿಲ್ಲ. ಹೊಸಪೇಟೆಯಲ್ಲಿ ನಡೆದ ಸಭೆಗೂ ಆಹ್ವಾನಿಸಿಲ್ಲ. ಅನಂತರ ಬೆಂಗಳೂರಿನಲ್ಲಿ ನಡೆದ ಸಭೆಗೆ ಅಂದೇ ಪತ್ರ ತಲುಪಿಸಲಾಗಿದೆ. ಇದರಿಂದಾಗಿ ನಾವು ಕಾಂಗ್ರೆಸ್‌ನಲ್ಲಿದ್ದೀವಾ ಇಲ್ಲವೋ ಎಂಬ ಭಾವನೆ ನನ್ನನ್ನು ಕಾಡುತ್ತಿದೆ. ನನ್ನನ್ನು ದೂರವಿಟ್ಟು ಹಂಪಿ ಉತ್ಸವ ಮಾಡುವ ಉದ್ದೇಶ ಏನೆಂಬುದು ನನಗೆ ಅರ್ಥವಾಗುತ್ತಿಲ್ಲ. ಹಂಪಿ ಉತ್ಸವದ ರೂವಾರಿಯಾಗಿರುವ ಮಾಜಿ ಸಚಿವ ಎಂ.ಪಿ. ಪ್ರಕಾಶ್ ಅವರ ಕುಟುಂಬವನ್ನು ಕಡೆಗಣಿಸಲಾಗಿದೆ ಎಂದು ತಿಳಿದು ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಕಲಾವಿದರನ್ನು ದೂರವಿಟ್ಟು ಏನು ಸಾಧಿಸಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 3 ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಶಾಮಿಯಾನ ಹಾಕುವುದರಿಂದ ಪ್ರತಿಯೊಂದರಲ್ಲೂ ಮೊದಲು ಬಳ್ಳಾರಿ ಜಿಲ್ಲೆಗೆ ಆದ್ಯತೆ ನೀಡಬೇಕಾಗಿತ್ತು. ಆದರೆ ನೀಡಿಲ್ಲ. ಈ ರೀತಿ ನಡೆಯುತ್ತಿರುವುದು ತಪ್ಪು. ಇದನ್ನು ಎತ್ತಿ ಹಿಡಿಯುವುದು ನಮ್ಮ ಕರ್ತವ್ಯ ಎಂದರು. ಉತ್ಸವ ಸಂದರ್ಭದಲ್ಲಿ ತಮ್ಮ ಕಾರ್ಯಕರ್ತರು ಏನಾದರೂ ಅನಾಹುತ ಮಾಡಿದರೆ ಅದಕ್ಕೆ ನಾವು ಹೊಣೆಗಾರರಲ್ಲ. ಬೇಸರದಲ್ಲಿ ನಮ್ಮ ಕಾರ್ಯಕರ್ತರು ಏನಾದರೂ ಮಾಡಬಹುದು ಎಂಬ ಎಚ್ಚರಿಕೆಯನ್ನು ಸಹ ಅನಿಲ್ ಲಾಡ್ ಮಾಧ್ಯಮಗಳ ಮೂಲಕ ರವಾನಿಸಿದರು. ಬಳ್ಳಾರಿಯ ಕಲಾವಿದರು, ಛಾಯಾಗ್ರಾಹಕರು ಸೇರಿದಂತೆ ಜಿಲ್ಲೆಯವರಿಗೆ ಪ್ರಥಮ ಆದ್ಯತೆ ನೀಡಿ, ಮತ್ತೊಂದು ವೇದಿಕೆ ನಿರ್ಮಾಣ ಮಾಡಲಿ. ಈ ಬಗ್ಗೆ ಇನ್ನೆರಡು-ಮೂರು ದಿನಗಳಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು. ಹಂಪಿ ಉತ್ಸವ ಕುರಿತಂತೆ ನಿರ್ಲಕ್ಷ್ಯ ಕ್ರಮವು ಮನಸ್ಸಿಗೆ ತೀವ್ರ ನೋವುಂಟು ಮಾಡಿದ್ದು, ಮುಖ್ಯಮಂತ್ರಿಗಳು ಕರೆದರೂ ನಾನು ಹಂಪಿ ಉತ್ಸವದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹೈ-ಕ ನಿಯಮ ಉಲ್ಲಂಘನೆ: ನೇಮಕಾತಿ ಪ್ರಕ್ರಿಯೆಗೆ ಚಾಲನೆ
ಹೂವಿನಹಡಗಲಿ: ಹೈಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಿ ಕಾನೂನುಗಳನ್ನು ರಚನೆ ಮಾಡಿದ ಅಧಿಕಾರಿಗಳೇ ಹೈ-ಕ ನಿಯಮಗಳನ್ನು ಗಾಳಿಗೆ ತೂರಿ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, ಸರ್ಕಾರ ಮತ್ತೆ ಮಲತಾಯಿ ಧೋರಣೆ ತಾಳಿದೆ ಎಂದು ಹೈಕ ರಾಜ್ಯ ಉಪಾಧ್ಯಕ್ಷ ಡಾ. ರಝಾಕ ಉಸ್ತಾದ ಹಾಗೂ ಸಂಚಾಲಕ ಡಾ. ಎಸ್.ಎಸ್. ಪಾಟೀಲ್ ದೂರಿದ್ದಾರೆ.
ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಹೈಕಕ್ಕೆ ವಿಶೇಷ ಮೀಸಲಾತಿ ನೀಡಲು ಅವಕಾಶ ನೀಡಿದೆ. ರಾಜ್ಯ ಸರ್ಕಾರ 371 (ಜೆ) ಕಲಂ ಅಡಿ ಕಾನೂನು ರಚಿಸಿ ಜಾರಿಗೆ ತಂದಿರುವುದು ಸಂತೋಷ. ಆದರೆ, 1956ರಿಂದಲೂ ಮಲತಾಯಿ ಮಕ್ಕಳಂತೆ ಬದುಕುತಿದ್ದ ಹೈಕ ಜನತೆಯ ಉರುಗೋಲುನ್ನು ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ಫೆ. 23, 2013ರಂದು ಆದೇಶ ಹೊರಡಿಸಿ ಹೈಕ ಭಾಗದ ನೇಮಕಾತಿ ತಡೆ ಹಿಡಿದಿತ್ತು. ಕಳೆದ ತಿಂಗಳು ಮತ್ತೊಂದು ಆದೇಶ ಮಾಡಿ ಎಲ್ಲ ಅಧಿಸೂಚನೆಗಳನ್ನು ವಾಪಸ್ ಪಡೆದು ಹೈಕ ಭಾಗಕ್ಕೆ ಮೀಸಲಾತಿ ನಿಗದಿಗೊಳಿಸಬೇಕು ಎಂದು ಆದೇಶಿಸಿದೆ. ಆದೇಶ ಉಲ್ಲಂಘಿಸಿ ವಿವಿಧ ಇಲಾಖೆಗಳಲ್ಲಿ ಹಲವಾರು ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿರುವುದು ಘೋರ ಅನ್ಯಾಯ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement