ಹಂಪಿ ಉತ್ಸವದಲ್ಲಿ ಭಾಗಿಯಾಗುವುದಿಲ್ಲ
ಬಳ್ಳಾರಿ: ಹಂಪಿ ಉತ್ಸವಕ್ಕೆ ಸಂಬಂಧಿಸಿದಂತೆ ಎಲ್ಲದಕ್ಕೂ ತಮ್ಮನ್ನು ಕಡೆಗಣಿಸಿರುವುದು ತೀವ್ರ ಬೇಸರ ತಂದಿದ್ದು, ಹಂಪಿ ಉತ್ಸವದಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ತಿಳಿಸಿದರು.
ನಗರದ ಮಹಾನಗರ ಪಾಲಿಕೆಯಲ್ಲಿ ಶುಕ್ರವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಸ್ಥಳೀಯ ಶಾಸಕರು ಹಾಗೂ ಕಲಾವಿದರನ್ನು ಕಡೆಗಣಿಸಿರುವುದರಿಂದ ತೀವ್ರ ಬೇಸರ ತಂದಿದ್ದು, ಮನಸ್ಸಿಗೆ ನೋವುಂಟು ಮಾಡಿದೆ. ಯಾವ ಸಂಭ್ರಮಕ್ಕೆ ಉತ್ಸವದಲ್ಲಿ ಭಾಗವಹಿಸಲಿ ಎಂದು ಪ್ರಶ್ನಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ಅವರ ವರ್ತನೆ ಬಗ್ಗೆ ಈಗಾಗಲೇ ಸಿಎಂ ಅವರ ಗಮನಕ್ಕೆ ತರಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದರು.
ರೂವಾರಿ ಕುಟುಂಬವು ನಿರ್ಲಕ್ಷ್ಯ:
ಹಂಪಿ ಉತ್ಸವಕ್ಕೆ ಸಭೆಗೆ ಸೌಜನ್ಯಕ್ಕಾದರೂ ತಮ್ಮನ್ನು ಕರೆದಿಲ್ಲ. ಹೊಸಪೇಟೆಯಲ್ಲಿ ನಡೆದ ಸಭೆಗೂ ಆಹ್ವಾನಿಸಿಲ್ಲ. ಅನಂತರ ಬೆಂಗಳೂರಿನಲ್ಲಿ ನಡೆದ ಸಭೆಗೆ ಅಂದೇ ಪತ್ರ ತಲುಪಿಸಲಾಗಿದೆ. ಇದರಿಂದಾಗಿ ನಾವು ಕಾಂಗ್ರೆಸ್‌ನಲ್ಲಿದ್ದೀವಾ ಇಲ್ಲವೋ ಎಂಬ ಭಾವನೆ ನನ್ನನ್ನು ಕಾಡುತ್ತಿದೆ. ನನ್ನನ್ನು ದೂರವಿಟ್ಟು ಹಂಪಿ ಉತ್ಸವ ಮಾಡುವ ಉದ್ದೇಶ ಏನೆಂಬುದು ನನಗೆ ಅರ್ಥವಾಗುತ್ತಿಲ್ಲ. ಹಂಪಿ ಉತ್ಸವದ ರೂವಾರಿಯಾಗಿರುವ ಮಾಜಿ ಸಚಿವ ಎಂ.ಪಿ. ಪ್ರಕಾಶ್ ಅವರ ಕುಟುಂಬವನ್ನು ಕಡೆಗಣಿಸಲಾಗಿದೆ ಎಂದು ತಿಳಿದು ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಕಲಾವಿದರನ್ನು ದೂರವಿಟ್ಟು ಏನು ಸಾಧಿಸಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 3 ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಶಾಮಿಯಾನ ಹಾಕುವುದರಿಂದ ಪ್ರತಿಯೊಂದರಲ್ಲೂ ಮೊದಲು ಬಳ್ಳಾರಿಗೆ ಆದ್ಯತೆ ನೀಡಬೇಕಾಗಿತ್ತು. ನೀಡಿಲ್ಲ. ಈ ರೀತಿ ನಡೆಯುತ್ತಿರುವುದು ತಪ್ಪು. ಇದನ್ನು ಎತ್ತಿ ಹಿಡಿಯುವುದು ನಮ್ಮ ಕರ್ತವ್ಯ ಎಂದರು.
ನಾನು ಹೊಣೆಗಾರನಲ್ಲ: ಉತ್ಸವ ಸಂದರ್ಭದಲ್ಲಿ ತಮ್ಮ ಕಾರ್ಯಕರ್ತರು ಏನಾದರೂ ಅನಾಹುತ ಮಾಡಿದರೆ ಅದಕ್ಕೆ ನಾವು ಹೊಣೆಗಾರರಲ್ಲ. ಬೇಸರದಲ್ಲಿ ನಮ್ಮ ಕಾರ್ಯಕರ್ತರು ಏನಾದರೂ ಮಾಡಬಹುದು ಎಂಬ ಎಚ್ಚರಿಕೆಯನ್ನು ಅನಿಲ್ ಲಾಡ್ ಮಾಧ್ಯಮಗಳ ಮೂಲಕ ರವಾನಿಸಿದರು. ಬಳ್ಳಾರಿಯ ಕಲಾವಿದರು, ಛಾಯಾಗ್ರಾಹಕರು ಸೇರಿದಂತೆ ಜಿಲ್ಲೆಯವರಿಗೆ ಪ್ರಥಮ ಆದ್ಯತೆ ನೀಡಿ, ಮತ್ತೊಂದು ವೇದಿಕೆ ನಿರ್ಮಾಣ ಮಾಡಲಿ. ಇನ್ನೆರಡ್ಮೂರು ದಿನಗಳಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.
ಸ್ಪಷ್ಟನೆ: ಹಂಪಿ ಉತ್ಸವ ಕುರಿತಂತೆ ನಿರ್ಲಕ್ಷ್ಯ ಕ್ರಮವು ಮನಸ್ಸಿಗೆ ತೀವ್ರ ನೋವುಂಟು ಮಾಡಿದ್ದು, ಮುಖ್ಯಮಂತ್ರಿಗಳು ಕರೆದರೂ ನಾನು ಹಂಪಿ ಉತ್ಸವದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.