ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಹೈ-ಕ ನಿಯಮ ಉಲ್ಲಂಘನೆ: ನೇಮಕಾತಿ ಪ್ರಕ್ರಿಯೆಗೆ ಚಾಲನೆ

Lingaraj Badiger
Updated On : 4 Jan 2014, 11:15 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜ. 3
ಹೈಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಿ ಕಾನೂನುಗಳನ್ನು ರಚನೆ ಮಾಡಿದ ಅಧಿಕಾರಿಗಳೇ ಹೈ-ಕ ನಿಯಮಗಳನ್ನು ಗಾಳಿಗೆ ತೂರಿ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, ಸರ್ಕಾರ ಮತ್ತೆ ಮಲತಾಯಿ ಧೋರಣೆ ತಾಳಿದೆ ಎಂದು ಹೈಕ ರಾಜ್ಯ ಉಪಾಧ್ಯಕ್ಷ ಡಾ. ರಝಾಕ ಉಸ್ತಾದ ಹಾಗೂ ಸಂಚಾಲಕ ಡಾ. ಎಸ್.ಎಸ್. ಪಾಟೀಲ್ ದೂರಿದ್ದಾರೆ.
ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಹೈಕಕ್ಕೆ ವಿಶೇಷ ಮೀಸಲಾತಿ ನೀಡಲು ಅವಕಾಶ ನೀಡಿದೆ. ರಾಜ್ಯ ಸರ್ಕಾರ 371 (ಜೆ) ಕಲಂ ಅಡಿ ಕಾನೂನು ರಚಿಸಿ ಜಾರಿಗೆ ತಂದಿರುವುದು ಸಂತೋಷ. ಆದರೆ, 1956ರಿಂದಲೂ ಮಲತಾಯಿ ಮಕ್ಕಳಂತೆ ಬದುಕುತಿದ್ದ ಹೈಕ ಜನತೆಯ ಉರುಗೋಲುನ್ನು ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಫೆ. 23, 2013ರಂದು ಆದೇಶ ಹೊರಡಿಸಿ ಹೈಕ ಭಾಗದ ನೇಮಕಾತಿ ತಡೆ ಹಿಡಿದಿತ್ತು. ಕಳೆದ ತಿಂಗಳು ಮತ್ತೊಂದು ಆದೇಶ ಮಾಡಿ ಎಲ್ಲ ಅಧಿಸೂಚನೆಗಳನ್ನು ವಾಪಾಸ್ ಪಡೆದು ಹೈಕ ಭಾಗಕ್ಕೆ ಮೀಸಲಾತಿ ನಿಗದಿಗೊಳಿಸಬೇಕು ಎಂದು ಆದೇಶಿಸಿದೆ. ಆದರೆ, ಸರ್ಕಾರ ಆದೇಶಗಳನ್ನು ಉಲ್ಲಂಘಿಸಿ ವಿವಿಧ ಇಲಾಖೆಗಳಲ್ಲಿ ಹಲವಾರು ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ತರಾತುರಿಯಲ್ಲಿ ನೇಮಕಾತಿ ಆದೇಶ ಹೊರಡಿಸಿರುವುದು ಘೋರ ಅನ್ಯಾಯ ಎಂದಿದ್ದಾರೆ.
ಬೆಳಗಾವಿ ವಿಟಿಯು, ಬೆಂಗಳೂರು ಕೆಎಂಎಫ್, ಆರೋಗ್ಯ ಇಲಾಖೆ (ಏಡ್ಸ್ ನಿಯಂತ್ರಣ ಸಂಸ್ಥೆ), ಕಾರ್ಮಿಕ ಇಲಾಖೆಯ ಸೊಸೈಟಿ ಫಾರ್ ಕರ್ನಾಟಕ-ಜರ್ಮನ್ ಸ್ಕಿಲ್ ಡೆವೆಲಪ್‌ಮೆಂಟ್ ಸೆಂಟರ್, ಬೆಂಗಳೂರು ಆರೋಗ್ಯ ಇಲಾಖೆ, ಬೀದರ್ ಆರೋಗ್ಯ ಇಲಾಖೆ, ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಅಲ್ಲದೆ, ಹೈಕ ಉಪ ಸಮಿತಿ ಸದಸ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರ ಕಾರ್ಮಿಕ ಇಲಾಖೆಯಲ್ಲೇ ನೇಮಕಾತಿ ನಡೆಯುತ್ತಿದ್ದರೂ ಸಚಿವರು ಗಮನ ಹರಿಸಿಲ್ಲ. ಇದು ಈ ಭಾಗದ ಜನತೆ ಮಾಡುವ ದೊಡ್ಡ ಮೋಸಕ್ಕೆ ಸಾಕ್ಷಿ ಎಂದು ಜರಿದಿದ್ದಾರೆ.
ಈ ಕೂಡಲೇ ಸರ್ಕಾರ ಜ. 1, 2013ರಿಂದ ಹೊರಡಿಸಲಾಗಿರುವ ಎಲ್ಲ ನೇಮಕಾತಿ ಆದೇಶಗಳನ್ನು ಹಿಂದಕ್ಕೆ ಪಡೆದು ಹೈಕ ಭಾಗಕ್ಕೆ ಮೀಸಲಾತಿ ನಿಗದಿ ಮಾಡಿ ಮರು ಅಧಿಸೂಚನೆ ಹೊರಡಿಸಲು ಸೂಕ್ತ ಆದೇಶ ಮಾಡಬೇಕು, ನಿರ್ಲಕ್ಷಿಸಿದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement