ಲೋಕಸಭಾ ಚುನಾವಣೆ: ಎಎಪಿ ಸ್ಪರ್ಧೆ
ಬಳ್ಳಾರಿ: ಆಮ್ ಆದ್ಮಿ ಪಕ್ಷವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಖಚಿತ ಎಂದು ಪಕ್ಷದ ರಾಜ್ಯ ಸಂಯೋಜಕ ವಿಜಯ್ ಶರ್ಮಾ ತಿಳಿಸಿದರು.
ನಗರದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಯಾವ ಯಾವ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಇಳಿಯಬೇಕು. ಯಾರನ್ನು ಕಣಕ್ಕಿಳಿಸಬೇಕು ಎನ್ನುವ ಬಗ್ಗೆ ಇದೇ ತಿಂಗಳಲ್ಲಿ ರಾಜ್ಯದಲ್ಲಿ ನಡೆಯಲಿರುವ ಆಮ್ ಆದ್ಮಿ ಪಕ್ಷದ ಪ್ರಮುಖ ಸಭೆಯಲ್ಲಿ ಚರ್ಚಿಸಿ, ನಿರ್ಣಯ ಕೈಗೊಳ್ಳಲಾಗುವುದು ಎಂದರು.
ವ್ಯವಸ್ಥೆಯ ಪರಿವರ್ತನೆ: ಸಮಾಜದಲ್ಲಿ ಬದಲಾವಣೆ ತರುವ ಪರಿಕಲ್ಪನೆಯೊಂದಿಗೆ ಸ್ವಚ್ಛ, ದಕ್ಷ, ಜನಪರ ಆಡಳಿತ ನೀಡುವ ಗುರಿಯೊಂದಿಗೆ ಪಕ್ಷ ಮುನ್ನಡೆಯುತ್ತಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಬಡ ಜನರಿಂದ ಪಕ್ಷಕ್ಕೆ ಉತ್ತಮ ಸ್ಪಂದನೆ ಕಂಡುಬಂದಿದೆ. ಇದು ಆರೋಗ್ಯಕರ ಬೆಳವಣಿಗೆ ಎಂದರು. ಅಧಿಕಾರಕ್ಕಾಗಿಯೇ ಹಪಹಪಿಸುವ ರಾಜಕೀಯ ವ್ಯಕ್ತಿಗಳ ವಿರುದ್ಧ ಜನರಲ್ಲಿ ಕ್ರಾಂತಿ, ಜಾಗೃತಿ ಮೂಡಿಸಲು ಪಕ್ಷದಿಂದ ಪ್ರಾಮಾಣಿಕ ಪ್ರಯತ್ನ ಆಂದೋಲನ ರೀತಿಯಲ್ಲಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು. ಬಳ್ಳಾರಿಯ ಸಂಯೋಜಕ ಪತ್ತಿ ವಿಜಯಕುಮಾರ್, ಸುರೇಂದ್ರ ಭೋಪ್ರಾ, ಪ್ರಶಾಂತ್ ಕೇಣಿ, ಬೆಳಗಾವಿಯ ಆಲಂ ಇತರರು ಇದ್ದರು.