10ರಂದು ಕಾರ್ಯಕರ್ತರಿಗೆ ವಿಚಾರ ಸಂಕಿರಣ
ಬಳ್ಳಾರಿ: ನ್ಯಾ. ಸದಾಶಿವ ಆಯೋಗದ ವರದಿ ಶಿಫಾರಸಿನಂತೆ ಮೀಸಲಾತಿ ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲು ಜ. 10ರಂದು ಕಾರ್ಯಕರ್ತರಿಗೆ ತರಬೇತಿ ನೀಡಲು ರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎಚ್. ಹನುಮಂತಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಬೆಳಗಾವಿ ಸುವರ್ಣಸೌಧದಲ್ಲಿ ಡಿಸೆಂಬರ್‌ನಲ್ಲಿ ನಡೆದ ಅಧಿವೇಶನದ ವೇಳೆ ವರದಿ ಜಾರಿಗಾಗಿ ಡಿ. 3,4,5 ರಂದು ವಿವಿಧ ದಲಿತ ಪರ ಸಂಘಟನೆಗಳಿಂದ ಸುಮಾರು 20 ಸಾವಿರ ಜನರು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಡಿ. 5ರಂದು ಪ್ರತಿಭಟನೆ ಪ್ರಮುಖರನ್ನು ಮಾತುಕತೆಗೆ ಕರೆದ ಸಿದ್ದರಾಮಯ್ಯ, ಸದಾಶಿವ ಆಯೋಗದ ವರದಿಗೆ ನಮ್ಮ ಸಹಮತವಿದೆ. ಆದರೆ, ಜಾರಿಗಾಗಿ ಸಮಯಾವಕಾಶ ಕೇಳಿದರು.
ಜತೆಗೆ ಕಳೆದ 2012ರ ಬೆಳಗಾವಿ ಅಧಿವೇಶನದ ವೇಳೆ ನೂರಾರು ಮಾದಿಗರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯುವುದಾಗಿ ಮಾತುಕೊಟ್ಟಿದ್ದರು. ಆದರೆ, ಈ ಚರ್ಚೆ ನಡೆದು ಈಗಾಗಲೇ ತಿಂಗಳಾಗಿದ್ದರೂ, ಈ ಬಗ್ಗೆ ಮುಖ್ಯಮಂತ್ರಿ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.
ಮೈಸೂರು ವಿವಿಯಲ್ಲಿ ಸಾಕಷ್ಟು ಹರಗಣಗಳನ್ನು ಮಾಡಿದ ಐಪಿಎಸ್ ಅಧಿಕಾರಿ, ಕಬ್ಬು ಬೆಳೆಗಾರರ ಪ್ರಕರಣಗಳನ್ನು ಹಿಂದಕ್ಕೆ ಪಡೆದಿದ್ದು, ದಲಿತರ ಮೇಲಿನ ಪ್ರಕರಣಗಳನ್ನು ಮಾತ್ರ ಹಿಂದಕ್ಕೆ ಪಡೆಯುವಲ್ಲಿ ಮೀನಮೇಷ ಎಣಿಸುತ್ತಿದೆ. ಕೇವಲ ಸುಳ್ಳು ಭರವಸೆಗಳನ್ನು ನೀಡುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದಲಿತರನ್ನು ತಪ್ಪುದಾರಿ ಗೆಳೆಯುತ್ತಿದ್ದಾರೆ. ಹೀಗಾಗಿ ಕೂಡಲೇ ವರದಿ ಜಾರಿಗೆ ಕ್ರಮಕೈಗೊಳ್ಳಬೇಕು ಎಂದರು.
ಜ. 10ರ ವಿಚಾರ ಸಂಕಿರಣದಲ್ಲಿ ಜಿಲ್ಲೆಗೆ 20ರಂತೆ 30 ಜಿಲ್ಲೆಗಳ 600 ಆಯ್ದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು. ಸಮಿತಿ ಉಪಾಧ್ಯಕ್ಷ ಡಿ. ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಡಿ. ಗುರುಸಿದ್ದಪ್ಪ, ರಾಮಣ್ಣ ಚೇಳ್ಳಗುರ್ಕಿ, ತಿಪ್ಪೇಸ್ವಾಮಿ ಇದ್ದರು.