ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಇಂದು ಅಣಕು ಸಂಸತ್ ಸ್ಪರ್ಧೆ

Lingaraj Badiger
Updated On : 6 Jan 2014, 12:45 pm

ಬಳ್ಳಾರಿ: ನಗರದ ಎಸ್.ಜಿ. ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಬಳ್ಳಾರಿ ಜಿಲ್ಲಾ ಮಟ್ಟದ ಅಣಕು ಯುವ ಸಂಸತ್ ಸ್ಪರ್ಧೆ ಕಾರ್ಯಕ್ರಮವನ್ನು ಜ. 6ರಂದು ಬೆಳಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ. ಎಸ್.ಜಿ. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಉಮಾಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಅಬ್ದುಲ್ ರಶೀದ್ ಪಾಲ್ಗೊಳ್ಳುವರು. ಈ ಸ್ಪರ್ಧೆಯಲ್ಲಿ ಬಳ್ಳಾರಿ ಜಿಲ್ಲೆಯ ಎಲ್ಲ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ತಂಡಗಳು ಭಾಗವಹಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ಹಂಪಿ ಉತ್ಸವ: ಮದ್ಯ ಮಾರಾಟ ನಿಷೇಧ
ಬಳ್ಳಾರಿ: ಹಂಪಿಯಲ್ಲಿ ಜನವರಿ 10ರಿಂದ ನಡೆಯಲಿರುವ ಹಂಪಿ ಉತ್ಸವ ಸಂದರ್ಭ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ವಿವಿಧ ಸ್ಥಳಗಳಲ್ಲಿ ಮದ್ಯ ಸಾಗಾಟ ಹಾಗೂ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿ ಅಮ್ಲನ್ ಆದಿತ್ಯ ಬಿಸ್ವಾಸ್ ಅವರು ಆದೇಶಿಸಿದ್ದಾರೆ. ಹೊಸಪೇಟೆ ತಾಲೂಕಿನ ಕಮಲಾಪುರ, ಕಡ್ಡಿರಾಂಪುರ, ಹಂಪಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಜನವರಿ 10ರ ಬೆಳಗ್ಗೆ 6 ಗಂಟೆಯಿಂದ ಜನವರಿ 13ರ ವರೆಗಿನ ಬೆಳಗ್ಗೆ 6 ಗಂಟೆವರೆಗೆ ಎಲ್ಲ ತರಹದ ಮದ್ಯ ಸಾಗಾಣಿಕೆ, ಮದ್ಯ ಮಾರಾಟ ಮಾಡುವ ಅಂಗಡಿ, ಶಾಪ್‌ಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ತಾಲೂಕು ಸಮಿತಿ ಅಸ್ತಿತ್ವಕ್ಕೆ
ಹಗರಿಬೊಮ್ಮನಹಳ್ಳಿ: ಎಪಿಎಂಸಿ ಸಭಾಭವನದಲ್ಲಿ ಎಐಎಸ್‌ಎಫ್‌ನ ರಾಜ್ಯ ಸಂಘಟಕ ಎಚ್.ಎಂ. ಸಂತೋಷ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನೂತನ ತಾಲೂಕು ಸಮಿತಿ ಅಸ್ತಿತ್ವಕ್ಕೆ ತರಲಾಯಿತು. ಪಾಟೀಲ್ ನಾಗನಗೌಡ ತಾಲೂಕು ಪ್ರಧಾನ ಸಂಚಾಲಕರಾಗಿ ಹಾಗೂ ನಟರಾಜ್, ನಾಗರಾಜ್ ಸಹ ಸಂಚಾಲಕರಾಗಿ ಆಯ್ಕೆಯಾದರು. ವಿದ್ಯಾರ್ಥಿ ಮುಖಂಡರಾದ ರವಿ, ವಿನಯ, ಬಸವರಾಜ, ಸಂತೋಷ್ ಕುಮಾರ, ರಮೇಶ, ಎಐಕೆಎಸ್ ಅಧ್ಯಕ್ಷ ಎ. ಅಡಿವೆಪ್ಪ, ಎಐಟಿಯುಸಿ ಅಧ್ಯಕ್ಷ ಅನ್ವರ್ ಬಾಷಾ, ಎಐವೈಎಫ್ ಕೆ. ಗಂಗಾಧರ ಹಾಜರಿದ್ದರು ಎಂದು ಸಮಿತಿ ತಿಳಿಸಿದೆ.
ನೀರಲ್ಲಿ ಮುಳುಗಿ ವಿದ್ಯಾರ್ಥಿಗಳಿಬ್ಬರ ಸಾವು
ಗಂಗಾವತಿ: ತಾಲೂಕಿನ ಸಣ್ಣಾಪುರ ಸಮತೋಲನಾ ಜಲಾಶಯದಲ್ಲಿ ಬಳ್ಳಾರಿಯ ಇಬ್ಬರು ವಿದ್ಯಾರ್ಥಿಗಳು ಮುಳಗಿ ನೀರು ಪಾಲಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಬಳ್ಳಾರಿ ವಿಜಯನಗರ ತಾಂತ್ರಿಕ ಕಾಲೇಜಿನ ಬಿಇ ದ್ವಿತೀಯ ವರ್ಷದ ವಿದ್ಯಾರ್ಥಿ ಸಾಧಿಕ್(20) ಮತ್ತು ಮರ್ಚಂಟ್ ರೆಸಿಡೆನ್ಸಿಯಲ್ ಕಾಲೇಜಿನ ಬಿಬಿಎಂ ವಿದ್ಯಾರ್ಥಿ ಮಸ್ತಾನ್(21) ನೀರು ಪಾಲಾದವರು. ಇವರು ಬಳ್ಳಾರಿ ಕೌಲ್‌ಬಜಾರ್ ಬಡಾವಣೆಯವರು. ವಾರದ ಹಿಂದೆ ಇದೇ ಸ್ಥಳದಲ್ಲಿ ಬೆಂಗಳೂರಿನ ವೈದ್ಯರೊಬ್ಬರು ಈಜಲು ಹೋಗಿ ನೀರು ಪಾಲಾದ ಘಟನೆ ಮಾಸುವ ಮುನ್ನವೆ ಈ ಘಟನೆ ನಡೆದಿದೆ. ಬಳ್ಳಾರಿಯಿಂದ 8 ವಿದ್ಯಾರ್ಥಿಗಳು ಪಿಕ್‌ನಿಕ್ ಬಂದ ಸಂದರ್ಭ ಸಣ್ಣಾಪುರ ಸಮತೋಲನಾ ಜಲಾಶಯದಲ್ಲಿ ಈಜಲು ಇಳಿದಿದ್ದರು. ಆದರೆ, ಸಾಧಿಕ್ ಮತ್ತು ಮಸ್ತಾನ್ ಎನ್ನುವರಿಗೆ ಈಜು ಬಾರದ ಕಾರಣ ನೀರಿನಲ್ಲಿ ಮುಳಗಿ ನೀರು ಪಾಲಾಗಿದ್ದಾರೆ. ಜಲಾಶಯಕ್ಕೆ ಆಗಮಿಸಿದ್ದ ವಿದೇಶಿ ಪ್ರವಾಸಿಗರು ವಿದ್ಯಾರ್ಥಿಗಳ ಶೋಧನೆಗೆ ಸಹಕಾರ ನೀಡಿದ್ದಾರೆ. ಜಲಾಶಯವು ಆಳವಾಗಿದ್ದು, ವಿದೇಶಿಯರು ನೀರಿನಲ್ಲಿ ಇಳಿದು ಶೋಧನೆ ನಡೆಸಿದ್ದಾರೆ. ಗ್ರಾಮೀಣ ಠಾಣೆ ಪೊಲೀಸರು, ಅಗ್ನಿಶಾಮಕ ತಂಡ ಶೋಧನೆ ಕಾರ್ಯ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement