ಬಿಪಿಒಗೆ ಪೀಪಲ್ಸ್ ಚಾಯ್ಸ್ ಅವಾರ್ಡ್
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 5
ಗ್ರಾಮೀಣ ಮಹಿಳೆಯರಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ಮೂಲಕ ಅವರ ಸಬಲೀಕರಣಕ್ಕೆ ಮುಂದಾಗಿರುವ ಡೆಟಾ ಹಳ್ಳಿ ಬಿಪಿಒ ನ್ಯೂಯಾರ್ಕ್ನ ಗ್ಲೋಬಲ್ನ ಸೋರ್ಸಿಂಗ್ ಕೌನ್ಸಿಲ್ನಿಂದ 2013ನೇ ಸಾಲಿನ ಅಂತಾರಾಷ್ಟ್ರೀಯ ಪೀಪಲ್ಸ್ ಚಾಯ್ಸ್ ಅವಾರ್ಡ್ಗೆ ಭಾಜನವಾಗಿದೆ. ವಿಶ್ವದ 39 ದೇಶಗಳಲ್ಲಿ ಬಳ್ಳಾರಿ ಜಿಲ್ಲೆಯ ಡೆಟಾ ಹಳ್ಳಿ ಬಿಪಿಒ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಇಂದಿನ ಜಾಗತಿಕ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಅತ್ಯಗತ್ಯ. ಅದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಕಂಪ್ಯೂಟರ್ ಕಲಿಕೆಗೆ ಆಸಕ್ತಿ ತೋರುತ್ತಾರೆ. ಗ್ರಾಮೀಣ ಭಾಗದ ಅದರಲ್ಲೂ 8-10ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಗಣಕಯಂತ್ರ ಶಿಕ್ಷಣ ನೀಡಲು ಜೆಎಸ್ಡಬ್ಲ್ಯೂನ ಡೆಟಾ ಹಳ್ಳಿ ಬಿಪಿಒ ಮುಂದಾಗಿದೆ.
ಗ್ರಾಮೀಣ ಮಹಿಳೆಯರು ಅದರಲ್ಲೂ 8ರಿಂದ 10ನೇ ತರಗತಿ, ಪಿಯುಸಿ ಓದಿರುವವರಿಗೆ, ಗೃಹಿಣಿಯರಿಗೆ ಕಂಪ್ಯೂಟರ್ ತರಬೇತಿಯನ್ನು ಜೆಎಸ್ಡಬ್ಲ್ಯೂನ ಡೆಟಾ ಹಳ್ಳಿ ಬಿಪಿಒ ಸೆಂಟರ್ ಮಾಡುತ್ತಿದೆ. 2005ರಲ್ಲಿ ಆರಂಭವಾದ ಇದು ಇಲ್ಲಿಯವರೆಗೆ ಮನೆಯಲ್ಲಿ ಕುಳಿತಿದ್ದ 750 ಮಹಿಳೆಯರಿಗೆ ಕಂಪ್ಯೂಟರ್ ಶಿಕ್ಷಣ ನೀಡಿ ಹೊರಗಡೆ ಕೆಲಸ ಮಾಡುವ ಧೈರ್ಯ ತುಂಬಿದೆ. 40 ವರ್ಷ ಮೀರಿರುವ ಮಹಿಳೆಯರು ಕೂಡ ಕಂಪ್ಯೂಟರ್ ಶಿಕ್ಷಣ ಕಲಿಯಲು ಆಸಕ್ತಿ ತೋರಿದ್ದಾರೆ. ಇದು ಉತ್ತಮ ಬೆಳವಣಿಗೆ ಕೂಡ.
ಮದುವೆಯಾಗಿ ಮನೆಯಲ್ಲೇ ಕೂಡುವ ಹೆಣ್ಣುಮಕ್ಕಳು (8 ಮತ್ತು 10ನೇ ತರಗತಿ ಓದಿರುವ) ಡೆಟಾ ಎಂಟ್ರಿ ಬಿಪಿಒದಲ್ಲಿ ಕಂಪ್ಯೂಟರ್ ಜ್ಞಾನ ಪಡೆದು, ಬೇರೆ ಬೇರೆ ಕಡೆಗೆ ಕಂಪ್ಯೂಟರ್ ಆಧಾರಿತ ಉದ್ಯೋಗದಲ್ಲಿ ತೊಡಗಿಸಿಕೊಂಡು ತಿಂಗಳಿಗೆ ಸಾವಿರಾರು ರು. ದುಡಿಯುತ್ತಿದ್ದಾರೆ. ನೂರಾರು ಮಹಿಳೆಯರು ಇಲ್ಲಿ ಕಂಪ್ಯೂಟರ್ ಜ್ಞಾನ ಪಡೆಯಲು ಮುಂದಾಗಿದ್ದಾರೆ.
ಮಾಸಾಶನದೊಂದಿಗೆ ತರಬೇತಿ: ಡೆಟಾ ಎಂಟ್ರಿ ಬಿಪಿಒದಲ್ಲಿ ಉಚಿತ ತರಬೇತಿ ಕೊಡುವುದಲ್ಲದೆ ಮಾಸಾಶನ ಕೊಡುವ ವ್ಯವಸ್ಥೆ ಇದೆ. ಮೊದಲ ತಿಂಗಳು ರು. 1500, ಎರಡನೇ ತಿಂಗಳಿನಿಂದ ರು. 4500 ಕೊಡುವ ವ್ಯವಸ್ಥೆ ಮಾಡಲಾಗಿದೆ. ಆರಂಭದಲ್ಲಿ ಕಂಪ್ಯೂಟರ್ ಬೇಸಿಕ್ ನಾಲೇಡ್ಜ್ ಕಲಿಸಿಕೊಟ್ಟು, ನಂತರ ಟೈಪ್, ಡಾಟಾ ಎಂಟ್ರಿ ಸೇರಿದಂತೆ ದುಡಿಮೆಗೆ ಅಗತ್ಯವಾದ ಕಂಪ್ಯೂಟರ್ ತರಬೇತಿ ನೀಡಲಾಗುತ್ತದೆ. ಅಂಗವಿಕಲ ಮಹಿಳೆಯರು ತರಬೇತಿ ಪಡೆದು, ಇಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಇಲ್ಲಿ ತರಬೇತಿ ಪಡೆದಿರುವ ಹಳ್ಳಿಯ ಮಹಿಳೆಯರು, ಯುವತಿಯರು ಬೇರೆಡೆ ಕೆಲಸ ನಿರ್ವಹಿಸುತ್ತ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಇನ್ನು ಹೆಚ್ಚಿನ ಆಸಕ್ತಿ ಉಳ್ಳವರು ಮುಕ್ತ ವಿಶ್ವವಿದ್ಯಾಲಯಗಳಲ್ಲಿ ತಮ್ಮ ಶಿಕ್ಷಣ ಮುಂದುವರೆಸಿ ಹೆಚ್ಚಿನ ಶಿಕ್ಷಣ ಪಡೆಯುತ್ತಿದ್ದಾರೆ ಎಂಬುದು ಸಂತಸದ ಸಂಗತಿ.
ಪ್ರಶಸ್ತಿಗೆ ಭಾಜನವಾದ ಬಿಪಿಒ: ನ್ಯೂಯಾರ್ಕ್ನ ದಿ ಗ್ಲೋಬಲ್ ಸೋರ್ಸಿಂಗ್ ಕೌನ್ಸಿಲ್ ವಿಶ್ವದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸುತ್ತಿರುವ ಬಿಪಿಒಗಳನ್ನು ಗುರುತಿಸಿ ಪ್ರತಿವರ್ಷ ಪೀಪಲ್ಸ್ ಚಾಯ್ಸ್ ಆವಾರ್ಡ್ ನೀಡುತ್ತಿದೆ. 2013ರ ಈ ವಾರ್ಡ್ಗೆ ವಿಶ್ವದ 39 ದೇಶಗಳಿಂದ 45ಕ್ಕೂ ಹೆಚ್ಚು ಬಿಪಿಒ ಸೆಂಟರ್ಗಳು ಭಾಗವಹಿಸಿದ್ದು, ಅದರಲ್ಲಿ ಜೆಎಸ್ಡಬ್ಲ್ಯೂನ ಡೆಟಾ ಎಂಟ್ರಿ ಬಿಪಿಒ ಮೊದಲನೆ ಸ್ಥಾನ ಪಡೆದಿದೆ.
ಬಿಪಿಒದ ಮುಖ್ಯಸ್ಥೆ ಶೈಲಾಜಾ ಲೋಬೋ ಮಾತನಾಡಿ, ಪ್ರತಿದಿನ 8 ತಾಸುಗಳಿಗೆ ಒಂದರಂತೆ ಎರಡು ಶಿಫ್ಟ್ಗಳಲ್ಲಿ ತರಬೇತಿ ನೀಡಲಾಗುತ್ತದೆ. 2005ರಿಂದ ತರಬೇತಿ ನೀಡುತ್ತಿದೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜನರನ್ನು ಕರೆತಂದು ತರಬೇತಿ ನೀಡಲಾಗುತ್ತದೆ ಎನ್ನುತ್ತಾರೆ.