ಮೂವರಿಗೆ ಕನಕ ಗುರುಪೀಠದ ಪ್ರಶಸ್ತಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 5
ಗುಲ್ಬರ್ಗ ವಿಭಾಗದ ತಿಂಥಿಣಿಯ ಕನಕ ಗುರುಪೀಠದಿಂದ ನಾಲ್ಕು ವರ್ಷಗಳಿಂದ ಹಮ್ಮಿಕೊಳ್ಳುತ್ತಿರುವ ಹಾಲುಮತ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ಈ ಬಾರಿ ಜ. 13ರಿಂದ 3 ದಿನಗಳ ಕಾಲ ನಡೆಯಲಿದ್ದು, ಇದರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ 3 ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಕನಕ ಗುರುಪೀಠದ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷೆ ಹನುಮಾಕ್ಷಿ ಗೋಗಿ ತಿಳಿಸಿದರು.
ನಗರದ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ಭಾನುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
13ರಿಂದ ಉತ್ಸವ: ಹಾಲುಮತ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಪ್ರತಿವರ್ಷ ಹಮ್ಮಿಕೊಳ್ಳುವ ಮೂಲಕ ಸಮುದಾಯದ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದೆ. ಈ ಬಾರಿ ಜ. 13, 14 ಮತ್ತು 15ರಂದು ಉತ್ಸವ ನಡೆಸಲಾಗುತ್ತದೆ. ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಮೈಸೂರು ಸಂಸದ ಎಚ್. ವಿಶ್ವನಾಥ, ಮಾಜಿ ಸಚಿವ ಎಚ್.ಎಂ. ರೇವಣ್ಣ, ಸಮಾಜದ ಎಲ್ಲ ಜನಪ್ರತಿನಿಧಿಗಳು, ಮುಖಂಡರು, ಬಾಂಧವರು ಭಾಗವಹಿಸಲಿದ್ದಾರೆ ಎಂದರು.
ಪೀಠವು ಕನಕಶ್ರೀ ಪ್ರಶಸ್ತಿಯನ್ನು ಮೈಸೂರು ವಿವಿ ಪ್ರಾಧ್ಯಾಪಕರಾಗಿದ್ದ ಪ್ರೊ. ಸುಧಾಕರ ಅವರಿಗೆ ನೀಡಿದೆ. ಸುಧಾಕರ ಅವರು ಜನಪದ ಸಾಹಿತ್ಯ, ಕನಕದಾಸರ ಕುರಿತು ಮಾಡಿದ ಸಂಶೋಧನೆಗಾಗಿ ಮರಣೋತ್ತರವಾಗಿ ಪ್ರಶಸ್ತಿ ನೀಡುತ್ತಿದೆ. ಉತ್ತರ ಕರ್ನಾಟಕದ ಪ್ರಸಿದ್ಧ ಕವಿ, ಜನಪದ ವಿದ್ವಾಂಸ ಡಾ. ಶ್ರೀರಾಮ ಇಟ್ಟಣವರ್ ಅವರಿಗೆ ಹಾಲುಮತ ಭಾಸ್ಕರ ಪ್ರಶಸ್ತಿ ನೀಡಲಾಗುತ್ತಿದೆ. ಈ ಇಬ್ಬರು ಪ್ರಶಸ್ತಿ ವಿಜೇತರು ಹಾಲುಮತದವರಾಗಿದ್ದು, ಸಿದ್ದಶ್ರೀ ಪ್ರಶಸ್ತಿಯನ್ನು ಹಿಂದುಳಿದ ವರ್ಗದ ಇತರೆ ಸಮುದಾಯಕ್ಕೆ ಮೀಸಲಿರಿಸಿದ್ದು, ಈ ಪ್ರಶಸ್ತಿಯನ್ನು ಹಿರಿಯ ಚಲನಚಿತ್ರ ನಟಿ ಲೀಲಾವತಿ ಅವರಿಗೆ ಸಿದ್ಧಶ್ರೀ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ಪ್ರಶಸ್ತಿಯು ತಲಾ ರು. 50 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ಪ್ರಶಸ್ತಿಗಳನ್ನು ಹಾಲುಮತ ಸಾಂಸ್ಕೃತಿಕ ವೈಭವದಲ್ಲಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾದ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಕುಲ ಸಚಿವರಾದ ಪ್ರೊ. ಮಲ್ಲಿಕಾ ಘಂಟಿ, ಬೆಂಗಳೂರಿನ ವಿಜಯ ಕಾಲೇಜಿನ ಪ್ರಾಧ್ಯಾಪಕ ಸಿದ್ದರಾಜು, ಕುವೆಂಪು ವಿವಿಯ ಕನ್ನಡ ಪ್ರಾಧ್ಯಾಪಕ ಪ್ರಶಾಂತ ನಾಯಕ, ಕುರುಬ ಸಮಾಜದ ಮುಖಂಡರಾದ ಕಲ್ಲುಕಂಬ ಪಂಪಾಪತಿ, ರಾಜ್ಯ ಯುವ ಕುರುಬರ ಸಂಘದ ಅಧ್ಯಕ್ಷ ಬಿ.ಎಂ. ಮಲ್ಲಿಕಾರ್ಜುನ ಪಾಟೀಲ್ ಇತರರಿದ್ದರು.