ಹಂಪಿ ಉತ್ಸವಕ್ಕೆ ಸೂಕ್ತ ಬಿಗಿ ಭದ್ರತೆ: ಎಸ್ಪಿ
ಹೊಸಪೇಟೆ: ಜ. 10, 11 ಮತ್ತು 12ರಂದು ನಡೆಯಲಿರುವ ಹಂಪಿ ಉತ್ಸವ ಯಶಸ್ವಿಗೊಳಿಸಲು ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ಚೇತನ್‌ಸಿಂಗ್ ರಾಥೋಡ್ ತಿಳಿಸಿದರು.
ಹಂಪಿಯಲ್ಲಿ ವಿವಿಧ ವೇದಿಕೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ಸವದಲ್ಲಿ ಲೋಪಗಳಾದಂತೆ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಲಾಗಿದೆ. ಸೂಕ್ತ ಭದ್ರತೆಗಾಗಿ ಡಿವೈಎಸ್ಪಿ, ಸಿಪಿಐ, ಪಿಎಸ್‌ಐ ಸೇರಿದಂತೆ 160 ಅಧಿಕಾರಿಗಳು, 1,500 ಪೊಲೀಸ್ ಸಿಬ್ಬಂದಿ, ಕೆಎಸ್‌ಆರ್‌ಪಿಯ 6 ತುಕಡಿ, ಜಿಲ್ಲಾ ಸಶಸ್ತ್ರ ಪಡೆಯ 8 ತುಕಡಿ, 6 ಬಾಂಬ್ ನಿಷ್ಕ್ರಿಯ ದಳ ನಿಯೋಜಿಸಲಾಗಿದೆ ಎಂದು ವಿವರಿಸಿದರು.
ಉತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗೆ ಸುಗಮ ಸಂಚಾರಕ್ಕಾಗಿ ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. 3 ದಿನಗಳ ಕಾಲ ಹಂಪಿಗೆ ಹೋಗುವ ಎಲ್ಲ ವಾಹನಗಳನ್ನು ನಿರ್ಬಂಧಿಸಲಾಗಿದ್ದು, ಉತ್ಸವದಲ್ಲಿ ಭಾಗವಹಿಸುವ ಸಾರ್ವಜನಿಕರು ಕಡ್ಡಿರಾಂಪುರ ಕ್ರಾಸ್‌ನಿಂದ ಕೆಎಸ್‌ಆರ್‌ಟಿಸಿ ಬಸ್ ಮೂಲಕವೆ ತೆರಳಬೇಕು. ಪಾಸ್‌ಗಳನ್ನು ಹೊಂದಿರುವ ವಾಹನಗಳಿಗೆ ಮಾತ್ರ ಪ್ರವೇಶವಿರುತ್ತದೆ. ಏಕಮುಖ ಸಂಚಾರ ಆದೇಶ ಜಾರಿಯಲ್ಲಿರುವುದರಿಂದ ಎಲ್ಲ ವಾಹನ ಚಾಲಕರು ಆದೇಶವನ್ನು ಪಾಲಿಸಬೇಕು ಎಂದರು.
ಪರವಾನಗಿ ಇಲ್ಲದಿರುವ ವಾಹನಗಳಿಗೆ ಪ್ರವೇಶವಿಲ್ಲದಿರುವುದರಿಂದ ಸಾರ್ವಜನಿಕರು ಎಲ್ಲ ವಾಹನಗಳನ್ನು ಕಡ್ಡಿರಾಂಪುರದ ಬಳಿ ಪಾರ್ಕಿಂಗ್ ಮಾಡುವ ಮೂಲಕ ಉತ್ಸವಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.