ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಗ್ರಾಮಗಳು ಉದ್ಧಾರವಾದರೆ ದೇಶದ ಪ್ರಗತಿ

Lingaraj Badiger
Updated On : 7 Jan 2014, 12:26 pm

ಕನ್ನಡಪ್ರಭ ವಾರ್ತೆ, ಗಂಗಾವತಿ, ಜ. 6
ಹಳ್ಳಿಗಳು ಉದ್ಧಾರವಾದರೆ ದೇಶದ ಪ್ರಗತಿ ಸಾಧ್ಯ. ಗ್ರಾಮೀಣ ಜನರು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸೇರ್ಪಡೆಯಾಗಬೇಕು ಎಂದು ಸಿಂಡಿಕೇಟ್ ಬ್ಯಾಂಕ್ ಚೇರ್‌ಮನ್ ಸುಧೀರ್ ಕುಮಾರ ಜೈನ್ ಹೇಳಿದರು.
ಅವರು ತಾಲೂಕಿನ ಕೇಸರಟ್ಟಿಯ ಸಿಂಡಿಕೇಟ್ ಬ್ಯಾಂಕ್‌ಗೆ ಭೇಟಿ ನೀಡಿ, ಬ್ಯಾಂಕಿನ ಆರ್ಥಿಕ ವ್ಯವಹಾರ ಪರಿಶೀಲಿಸಿ ಬಳಿಕ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಆರ್ಥಿಕ ಪ್ರಗತಿ ಬರೀ ಕೈಗಾರಿಕೆಗಳಿಂದ ಆಗುವುದಿಲ್ಲ. ಗ್ರಾಮೀಣ ಭಾಗದ ಜನರೂ ಅಭಿವೃದ್ಧಿ ಹೊಂದಬೇಕು. ಹಳ್ಳಿಗಳ ಪ್ರತಿ ಕುಟುಂಬ, ಪ್ರತಿ ವ್ಯಕ್ತಿ ಬ್ಯಾಂಕ್ ಉಳಿತಾಯ ಖಾತೆ ಹೊಂದಬೇಕು ಎಂದರು.
ಕೇಸರಟ್ಟಿ ಗ್ರಾಪಂ ವ್ಯಾಪ್ತಿಯ ನಾಲ್ಕು ಹಳ್ಳಿಗಳಾದ ಕೇಸರಟ್ಟಿ, ಮಲಕನಮುರಡಿ, ಮರಕುಂಬಿ, ಕೇಸಕ್ಕಿ ಹಂಚಿನಾಳಗಳಲ್ಲಿ 884 ಕುಟುಂಬಗಳಿದ್ದು, 4,587 ಜನಸಂಖ್ಯೆ ಇದೆ. ಅದರಲ್ಲಿ 656 ಉಳಿತಾಯ ಖಾತೆ ಆರಂಭ ಮಾಡಿರುವುದು ಶ್ಲಾಘನೀಯ. ಕೇಸರಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ 581 ಸಾಮಾನ್ಯ ಕ್ರೆಡಿಟ್ ಕಾರ್ಡ್, 232 ಎಸ್‌ಕೆಸಿಸಿ ಕಾರ್ಡ್‌ಗಳ ಮೂಲಕ ಎರಡು ಕೋಟಿಗೂ ಅಧಿಕ ಸಾಲ ನೀಡಲಾಗಿದೆ. ಮಹಿಳಾ ಸ್ವಸಹಾಯ ಗುಂಪುಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸಾಲ ಸೌಲಭ್ಯ ನೀಡಲಾಗಿದೆ. ಆರ್ಥಿಕ ಸೇರ್ಪಡೆಯ ಶಾಖೆಯ ಒಟ್ಟು ವ್ಯವಹಾರ ರು. 367 ಲಕ್ಷಗಳಾಗಿದೆ ಎಂದರು.
ಗ್ರಾಮದ ಸರ್ಕಾರಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಟ್ಯಾಂಕ್ ವಿತರಣೆ ಮಾಡಲಾಯಿತು. ಶಾಖೆಯ ವ್ಯಾಪ್ತಿಯ ಗ್ರಾಮಗಳ ಮಹಿಳಾ ಸ್ವಸಹಾಯ ಗುಂಪುಗಳಿಗೆ ಹಾಗೂ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಚೈತನ್ಯ ಯೋಜನೆಯ ಸಾಲದ ಚೆಕ್ ವಿತರಣೆ ಮಾಡಲಾಯಿತು. ಸಿಂಡಿಕೇಟ್ ಬ್ಯಾಂಕಿನ ಹಿರಿಯ ಅಧಿಕಾರಿಗಳಾದ ಅಲೋಖ್ ಶರಣ್, ಎಂ. ವಸಂತರಾಜನ್, ಎ.ವಿ. ವಸಂತ, ಗಂಗಾವತಿ ಶಾಖೆಯ ಮುಖ್ಯ ವ್ಯವಸ್ಥಾಪಕ ಗಣೇಶ ಮಲ್ಯ, ಕೇಸರಟ್ಟಿ ಶಾಖೆಯ ವ್ಯವಸ್ಥಾಪಕ ಮೈಲಾರಪ್ಪ, ಗ್ರಾಪಂ ಅಧ್ಯಕ್ಷೆ ಈರಗಮ್ಮ ಇದ್ದರು. ಬಳ್ಳಾರಿ ವಿಭಾಗೀಯ ವ್ಯವಸ್ಥಾಪಕ ಎಸ್.ಎಂ. ಗೋರಬಾಳ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement