ಅರೆಬರೆ ಮಾಹಿತಿ: ಅಧಿಕಾರಿಗಳ ತರಾಟೆ
ಹೂವಿನಹಡಗಲಿ: ಮೇಲಧಿಕಾರಿಗಳ ಗೈರು, ಅಧೀನ ಅಧಿಕಾರಿಗಳ ಅರೆಬರೆ ಮಾಹಿತಿ, ಏನೇ ಕೇಳಿದರೂ ಆಯ್ತು ಸಾರ್, ಅಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂಬಿತ್ಯಾದಿ ಉಡಾಫೆ ಉತ್ತರಗಳಿಂದ ತಾಪಂ ಪ್ರಗತಿ ಪರಿಶೀಲನಾ ಸಭೆ ಗಂಭೀರತೆಯನ್ನು ಕಳೆದುಕೊಂಡಿತ್ತು.
ಇಲ್ಲಿನ ಮಲ್ಲಿಗೆ ಸಭಾಂಗಣದಲ್ಲಿ ಮಂಗಳವಾರ ಸ್ಥಾಯಿ ಸಮಿತಿ ಅಧ್ಯಕ್ಷ ಹರವಿ ಪ್ರಕಾಶ ಅಧ್ಯಕ್ಷತೆಯಲ್ಲಿ ನಡೆದ ತಾಪಂ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳ ಉಡಾಫೆ ಉತ್ತರಗಳನ್ನು ಕೇಳಿ ಸಿಟ್ಟಿಗೆದ್ದ ಸ್ಥಾಯಿ ಸಮಿತಿ ಅಧ್ಯಕ್ಷ ಹರವಿ ಪ್ರಕಾಶ, ಅರೆಬರೆ ಮಾಹಿತಿ ಇದ್ರೆ ಸಭೆಗೆ ಬರಬೇಡಿ, ಈ ಸಭೆ ನಿಮ್ಮ ಕಥೆ ಕೇಳಲು ಅಲ್ಲ, ನಿಮಗೆಲ್ಲಾ ಜಿಡ್ಡುಗಟ್ಟಿದೆ, ಏನೇ ಹೇಳಿದರೂ ಯಾವ ಕೆಲಸವು ಆಗುತ್ತಿಲ್ಲ, ಆಯಾ ಗ್ರಾಮಗಳ ಜನಪ್ರತಿನಿಧಿಗಳನ್ನು ಜನರು ಒದೆಯುವವರೆಗೂ ನೀವು ಕ್ರಮ ಕೆಲಸ ಮಾಡಲ್ಲ ಅಂತಾ ಕಾಣ್ಸುತ್ತೆ ಹೀಗೆಂದು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜಲಾನಯನ: ಅರಣ್ಯೀಕರಣ, ಕಲ್ಲು ಒಡ್ಡು, ಕೃಷಿ ಹೊಂಡ ನಿರ್ಮಾಣಕ್ಕೆ ಸರ್ಕಾರ ಹಣ ನೀಡುತ್ತದೆ. ಆದರೆ, ನಿಮ್ಮ ಮಾಹಿತಿಯಲ್ಲಿ ಯಾವ ಕಾಮಗಾರಿಗೆ ಎಷ್ಟು ಅನುದಾನ ಎಂಬುದಿಲ್ಲ. ಇವುಗಳಿಗೆ ನಿಮ್ಮ ಜೇಬಿನ ಹಣ ಬಳಕೆ ಮಾಡಿದ್ದೀರಾ ಅದನ್ನಾದರೂ ಹೇಳಿ, ಯಾಕ್ರಿ ಬರುತ್ತೀರಿ ಸಭೆಗೆ ಎಂದು ಜಲಾನಯನ ಅಧೀನ ಅಧಿಕಾರಿ ಪರಮೇಶ್ವರಯ್ಯರನ್ನು ತರಾಟೆಗೆ ತೆಗೆದುಕೊಂಡಾಗ ನಾಳೆ ಮಾಹಿತಿ ನೀಡುತ್ತೇವೆಂದು ಉಡಾಫೆಯಿಂದ ಉತ್ತರಿಸಿದರು.
ಹ್ಯಾರಡ ಕಾಯ್ದಿಟ್ಟ ಅರಣ್ಯ ಪ್ರದೇಶಕ್ಕೆ ನಿತ್ಯ ಬೆಂಕಿ ಬೀಳುತ್ತಿದೆ. ಅರಣ್ಯ ಕಾಯಲು 15-20 ಮಂದಿ ಅರಣ್ಯ ಸಿಬ್ಬಂದಿ ಕೆಲಸವಾದರೂ ಏನು? ಕಾಡುಗಳ ಹುಲ್ಲು ಬೆಳೆಯಲಿಕ್ಕೆ ಅಲ್ಲ, ಗಿಡ ಮರ ಬೆಳೆಸಿ ಕಾಡು ಇತ್ತು ಎನ್ನುವ ಕುರುಹಾದರೂ ಉಳಿಸುವ ಕೆಲಸ ಮಾಡಿ, ಸರ್ಕಾರದ ಉಪ್ಪು ತಿಂದು ಈ ರೀತಿ ಕೆಲಸ ಮಾಡಬೇಡಿ ಎಂದು ಹರವಿ ಪ್ರಕಾಶ ಅರಣ್ಯ ಇಲಾಖೆ ಅಧಿಕಾರಿಗಳಾದ ಜಗದೀಶ ಮತ್ತು ಬಬಲಾದಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಹಿರೇಹಡಗಲಿ-ಮಾಗಳ ಕುಡಿವ ನೀರಿನ ಯೋಜನೆಯಿಂದ ಕಲುಷಿತ ನೀರು ಪೂರೈಕೆಯಾಗಿದ್ದು, ಇದರಿಂದ ಕೆಲವರು ಕೆಮ್ಮು, ಜ್ವರದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಹಿತಿಯನ್ನು ಸಭೆ ಗಮನಕ್ಕೆ ತಂದಾಗ, ಈ ಕೂಡಲೇ ಸಂಬಂಧಪಟ್ಟ ಇಲಾಖೆ ಮತ್ತು ಹಿರೇಹಡಗಲಿ, ಮಾಗಳ ಗ್ರಾಪಂ ಪಿಡಿಓಗಳು ವಾರದೊಳಗೆ ಶುದ್ಧ ಕುಡಿವ ನೀರು ಪೂರೈಕೆಗೆ ಕ್ರಮಕೈಗೊಳ್ಳಿ ಎಂದು ಪ್ರಕಾಶ ಹೇಳಿದರು. ಸಭೆಯಲ್ಲಿ ತಾಪಂ ಪ್ರಭಾರಿ ಇಒ ರಂಗಪ್ಪ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.