ಕಾನೂನು ತಿಳಿವಳಿಕೆ: ನೆಮ್ಮದಿ ಬಾಳು
ಕನ್ನಡಪ್ರಭ ವಾರ್ತೆ, ಕಂಪ್ಲಿ, ಜ. 7
ಶಾಂತಿ, ನೆಮ್ಮದಿಯ ಜೀವನಕ್ಕೆ ವಿಶಾಲ ಮನೋಭಾವದೊಡನೆ ಕಾನೂನು ತಿಳಿವಳಿಕೆ ಅಗತ್ಯ ಎಂದು ಹೊಸಪೇಟೆ ಜೆಎಂಎಫ್ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಹತ್ತಿಕಾಳ ಪ್ರಭು ಸಿದ್ದಪ್ಪ ತಿಳಿಸಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಹೊಸಪೇಟೆ ತಾಲೂಕು ಕಾನೂನು ಸಮಿತಿ, ವಕೀಲರ ಸಂಘ ಹಾಗೂ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಬೆಂಗಳೂರಿನ ರಾಜ್ಯ ಕಾನೂನು ಸೇವೆಗಳ ಪ್ರಾಕಾರ ಕಾನೂನು ಸಾಕ್ಷರತಾ ರಥಯಾತ್ರೆ ಕಾರ್ಯಕ್ರಮ ಅಂಗವಾಗಿ ಶಾಲೆ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಬೌದ್ಧಿಕ ಸಂಪತ್ತನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕು. ಯಶಸ್ಸಿಗಾಗಿ ಪರಿಶ್ರಮದೊಡನೆ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು. ವ್ಯಕ್ತಿತ್ವ ವಿಕಸನಕ್ಕೆ ಕಾನೂನು ಅರಿವು ಅಗತ್ಯ ಎಂದು ತಿಳಿಸಿದರು.
ಉಪ ಪ್ರಾಚಾರ್ಯ ಸಿ.ಅನ್ಸರ್ ಸಾಹೇಬ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಣ್ಮಕ್ಕಳು ಕಾನೂನಿನ ನೆರವು ಪಡೆಯುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದ್ದು, ವಿದ್ಯಾರ್ಥಿ ಹಂತದಲ್ಲೆ ಕಾನೂನಿನ ಅರಿವು ಪಡೆದುಕೊಳ್ಳಬೇಕು ಎಂದು ಹೇಳಿದರು.
ವಕೀಲರಾದ ಎಂ. ವಿರೂಪಾಕ್ಷಯ್ಯ ಇವರು ಭಾರತ ದಂಡ ಸಂಹಿತೆ ಕುರಿತು, ಸಿ.ಯಂಕಪ್ಪ ಮಹಿಳಾ ದೌರ್ಜನ್ಯ ಕಾಯ್ದೆ ಕುರಿತು ವಿದ್ಯಾರ್ಥಿನಿಯರಿಗೆ ಉಪನ್ಯಾಸ ನೀಡಿದರು.
ಹೊಸಪೇಟೆ 3ನೇ ತ್ವರಿತ ನ್ಯಾಯಾಲಯದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಣ್ಣ, ಹೊಸಪೇಟೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮಾರುತಿ ಎಸ್. ಬಾಗಡೆ, ವಕೀಲರ ಸಂಘದ ಅಧ್ಯಕ್ಷ ಕೆ.ರತ್ನಾಕರ ರಾವ್, ಕೊಟ್ರೇಶ್ ಹಿರೇಮಠ, ಎಸ್ಡಿಎಂಸಿ ಅಧ್ಯಕ್ಷ ಆರ್. ಇಮಾಂಸಿ, ಪಿಎಸ್ಐ ಡಿ.ಹುಲುಗಪ್ಪ, ವಕೀಲರಾದ ಮೋಹನ್, ಎ.ಸಿ. ದಾನಪ್ಪ, ಯು.ಎಂ. ಬಸವರಾಜ್, ಹುಲುಗಪ್ಪ, ಹರೀಷ್, ಡಿ.ಆನಂದ್, ರಘು, ರಾಘವೇಂದ್ರ ಪ್ರಸಾದ್ ಮಾತನಾಡಿದರು.
ಪವಿತ್ರ, ಉಮಾಮಹೇಶ್ವರಿ ಪ್ರಾರ್ಥಿಸಿದರು. ಶಿಕ್ಷಕ ನಾಗೇಂದ್ರ ಸ್ವಾಗತಿಸಿದರು.
ಪಿ.ನಾಗರಾಜ ವಂದಿಸಿದರು. ಸಿದ್ಧಲಿಂಗೇಶ್ ಗದುಗಿನ ನಿರೂಪಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.