ಧಾರ್ಮಿಕ ಮನೋಭಾವವಿರಲಿ
ಕನ್ನಡಪ್ರಭ ವಾರ್ತೆ, ಕಂಪ್ಲಿ, ಜ. 7
ಪ್ರತಿಯೊಬ್ಬರೂ ಧಾರ್ಮಿಕ ಮನೋಭಾವ ಅಳವಡಿಸಿಕೊಳ್ಳಬೇಕು. ಒತ್ತಡದ ಜೀವನದಲ್ಲಿ ಧಾರ್ಮಿಕ ಆಚಾರ ವಿಚಾರಗಳಿಂದ ವಿಮುಖರಾಗಬಾರದು ಎಂದು ಹೂಲಿ ಮತ್ತು ಸುಳ್ಯದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣಕ್ಕೆ ಸಮೀಪದ ಬುಕ್ಕಸಾಗರ ಗ್ರಾಮದ ಕರಿಸಿದ್ಧೇಶ್ವರ ಸಂಸ್ಥಾನ ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಲಿಂ. ಕರಿಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರ ಅಮೃತ ಶಿಲಾಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಅವರು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ತಮ್ಮ ಇಷ್ಟ ಗುರುಗಳ ಮಾರ್ಗದರ್ಶನವನ್ನು ಪಾಲಿಸುವುದರ ಮೂಲಕ ಪ್ರತಿಯೊಬ್ಬರೂ ತಮ್ಮ ಜೀವನವನ್ನು ಹಸನು ಮಾಡಿಕೊಳ್ಳಬೇಕು. ಅಧ್ಯಾತ್ಮ ಮಾರ್ಗದಿಂದ ಮಾತ್ರ ಮನುಷ್ಯನ ಬದುಕು ನೆಮ್ಮದಿಯಿಂದ ಸಾಗಲು ಸಾಧ್ಯ ಎಂದು ತಿಳಿಸಿದರು.
ಲಿಂ. ಕರಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಅಮೃತ ಶಿಲಾಮೂರ್ತಿ ಪ್ರತಿಷ್ಠಾಪನೆ ಮತ್ತು ಪ್ರಥಮ ವರ್ಷದ ಲಿಂಗಾಂಗ ಸಾಮರಸ್ಯದ ಪ್ರಥಮ ಪುಣ್ಯಸ್ಮರಣೋತ್ಸವ ಅಂಗವಾಗಿ ಬೆಳಗ್ಗೆ ರುದ್ರ ಹೋಮ, ರುದ್ರಾಭಿಷೇಕ, ಸಹಸ್ರನಾಮ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಸಾಂಗತ್ರಯ ಸಂಸ್ಕೃತ ಪಾಠಶಾಲೆ ಪ್ರಾಚಾರ್ಯ ಎಂ.ಎಸ್. ಶಶಿಧರ ಶಾಸ್ತ್ರಿಗಳು, ಸಿಡೇನೂರಿನ ನೀಲಕಂಠಶಾಸ್ತ್ರಿಗಳ ಪೌರೋಹಿತ್ಯದಲ್ಲಿ ಶಾಸ್ತ್ರೋಕ್ತವಾಗಿ ಜರುಗಿದವು.
ಬುಕ್ಕಸಾಗರ ಕರಿಸಿದ್ಧೇಶ್ವರ ಸಂಸ್ಥಾನ ಮಠದ ವಿಶ್ವರಾಧ್ಯ ಶಿವಾಚಾರ್ಯರು ಕಾರ್ಯಕ್ರಮದ ನೇತೃತ್ವವಹಿಸಿದ್ದರು. ಕುರುಗೋಡು ರಾಘವಾಂಕ ಶಿವಾಚಾರ್ಯ ಸ್ವಾಮೀಜಿ, ಎಮ್ಮಿಗನೂರಿನ ವಾಮದೇವ ಶಿವಾಚಾರ್ಯರು, ಹೆಬ್ಬಾಳು ರೇಣುಕಾಶ್ರಮದ ಶಿವಪ್ರಕಾಶ ಶಿವಶರಣರು, ಶಿರಕೋಳದ ಹಿರೇಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಲಿಂಗಯ್ಯ ತಾತನವರು, ಬುಕ್ಕನಹಟ್ಟಿ ಶರಣಸ್ವಾಮೀಜಿ, ಬಸವರಾಜ ಸ್ವಾಮೀಜಿ, ಎಸ್.ಡಿ. ಬಸವರಾಜ್, ಸದ್ಭಕ್ತರು ಭಾಗವಹಿಸಿದ್ದರು.