ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮಾಲ್ವಿ ಡ್ಯಾಂಗೆ ನೀರು: ಪ್ರಾಮಾಣಿಕ ಯತ್ನ

Lingaraj Badiger
Updated On : 8 Jan 2014, 1:14 am

ಹಗರಿಬೊಮ್ಮನಹಳ್ಳಿ:  ಮಾಲ್ವಿ ಡ್ಯಾಂ ತಮ್ಮ ಕ್ಷೇತ್ರದಲ್ಲಿ ಬಾರದೆ ಇದ್ದರೂ ಡ್ಯಾಂಗೆ ಶಾಶ್ವತ ನೀರೊದಗಿಸುವ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ನೀರಾವರಿ ಯೋಜನೆಗಳ ಜಾರಿಗೆ ಆದ್ಯತೆ ನೀಡುತ್ತಿದ್ದು, ಸರ್ಕಾರದ ಅವಧಿಯೊಳಗೆ ಮಾಲ್ವಿ ಡ್ಯಾಂಗೆ ನೀರು ತುಂಬಿಸುವುದಾಗಿ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಭರವಸೆ ನೀಡಿದರು.
ತಾಲೂಕಿನ ಗದ್ದಿಕೇರಿಯಲ್ಲಿ ಸೋಮವಾರ ಸಂಜೆ ಅಂಬೇಡ್ಕರ್ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ, ನೀರಾವರಿ ಜಾರಿ ವಿಚಾರದಲ್ಲಿ ಪಕ್ಷ ರಾಜಕೀಯವನ್ನು ತರಲ್ಲ. ನೀರು ಬಂದರೆ ಅದು ಎಲ್ಲ ರೈತರಿಗೆ ಅನುಕೂಲವಾಗುತ್ತದೆ. ಮಾಲ್ವಿ  ಡ್ಯಾಂಗೆ ನೀರು ತುಂಬಿಸುವ ಯೋಜನೆಗೆ ಅನುಮೊದನೆ ಪಡೆದುಕೊಂಡ ಮೇಲೆಯೇ ನಾನು ಡ್ಯಾಂ ವೀಕ್ಷಣೆಗೆ ಹೋಗುವೆ ಎಂದರು.
ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ ತಾಲೂಕಿನ ಬನ್ನಿಕಲ್ಲು ಕೆರೆ ಸೇರಿದಂತೆ ಹೂವಿನಹಡಗಲಿ ತಾಲೂಕಿನ 9 ಕೆರೆ ಸೇರಿ ಹತ್ತು ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಗೆ ಈಗಾಗಲೆ ಸರ್ಕಾರ ಅನುಮೋದನೆ ನೀಡಿದೆ. ಟೆಂಡರ್ ಕರೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಹತ್ತು ಕೆರೆಗಳು ಭರ್ತಿಯಾದರೆ ಕೆರೆ ಸುತ್ತಲಿನ ಹತ್ತಾರು ಗ್ರಾಮಗಳಲ್ಲಿನ ಅಂತರ್ಜಲ ವೃದ್ಧಿಗೆ ಕುಡಿಯುವ ನೀರು, ಕೃಷಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ತಾಲೂಕಿನ ಪುಣ್ಯಕ್ಷೇತ್ರ ನಂದಿಪುರದ ಮಹೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ತಾಲೂಕ ಚಲವಾದಿ ಮಹಾಸಭಾದ ಅಧ್ಯಕ್ಷ ಕಾಳಿ ಬಸವರಾಜ, ಹೂವಿನಹಡಗಲಿ ಎಪಿಎಂಸಿ ಅಧ್ಯಕ್ಷ ವಾರದ ಗೌಸ್, ರಾಜ್ಯ ಕಟ್ಟಡ ಕಾರ್ಮಿಕ ಮಂಡಳಿ ನಿರ್ದೇಶಕ ಎಂ. ಪರಮೇಶ್ವರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್, ಗ್ರಾಪಂ ಸದಸ್ಯರಾದ ಬಸವರಾಜಪ್ಪ, ಯಲ್ಲಪ್ಪ, ಕಟ್ಟಿ ಬಸವರಾಜ, ರಮೇಶ, ಸುರೇಶ ಇತರರು ಭಾಗವಹಿಸಿದ್ದರು. ಚನ್ನಬಸಪ್ಪ ಸ್ವಾಗತಿಸಿದರು. ಸಿ. ಪ್ರಕಾಶ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement