ಮೂರು ದಿನಗಳಾದರೂ ಬಂದಿಲ್ಲ ಶವಗಳು
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜ. 7
ಗೋವಾದ ಕಾಣಕೋಣದಲ್ಲಿ ಶನಿವಾರ ನಡೆದ ಕಟ್ಟಡ ದುರಂತದಲ್ಲಿ ಮೃತಪಟ್ಟ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ಬಂಗಾರಿ ಉದಯ್, ಜಬಿವುಲ್ಲಾ ಅವರ ಮೃತದೇಹಗಳನ್ನು ಪತ್ತೆಹಚ್ಚಲು ಸಂಬಂಧಿಕರು ಪರದಾಡಿದ್ದು, 3 ದಿನಗಳ ಬಳಿಕ ಶವ ಗುರುತು ಸಿಕ್ಕಿವೆ. ಆದರೆ ಈವರೆಗೂ ಸ್ವಗ್ರಾಮಕ್ಕೆ ಶವಗಳನ್ನು ತಂದಿಲ್ಲ.
ದುರಂತದ ಸುದ್ದಿ ತಿಳಿಯುತ್ತಲೆ ಗೋವಾದ ಕಾಣಕೋಣದ ಘಟನಾ ಸ್ಥಳಕ್ಕೆ ಮೃತರ ಸಂಬಂಧಿಕರು ಹೋಗಿದ್ದರು. ಆದರೆ ಯಾರೊಬ್ಬರನ್ನೂ ಹತ್ತಿರ ಸುಳಿಯಲು ಬಿಟ್ಟಿಲ್ಲ. ಇದರಿಂದ ಮೃತ ದೇಹಗಳನ್ನು ಪತ್ತೆ ಮಾಡಲು ಸಾಕಷ್ಟು ತೊಂದರೆ ಅನುಭವಿಸುವಂತಾಯಿತು. ಶವ ಪಡೆಯಲು ಮೂರು ದಿನಗಳು ಕಾದು ಕುಳಿತಿದ್ದೇವೆ ಎನ್ನುತ್ತಾರೆ ಮೃತ ಜಬಿವುಲ್ಲಾ ಸಂಬಂಧಿ ಸಾದಿಕ್.
ಗೋವಾದ ಪ್ರತಿ ಆಸ್ಪತ್ರೆಗೆ ಅಲೆದಾಡಿದರೂ ಇಬ್ಬರ ಮೃತ ದೇಹಗಳು ಪತ್ತೆಯಾಗಲಿಲ್ಲ. ಎರಡು ದಿನ ಹಗಲು ರಾತ್ರಿ ಅಲೆದಾಡಿದಾಗ ಕೊನೆಗೆ ಸೋಮವಾರ ದೇಹಗಳು ಸಿಕ್ಕಿವೆ. ದಾಖಲಾಗಿರುವ ಆಸ್ಪತ್ರೆಯಲ್ಲಿ ಕನ್ನಡಿಗರ ಮೃತ ದೇಹಗಳೆಂದು ನೋಂದಣಿಯಾಗಿಲ್ಲ. ಕಾರಣ ಇಬ್ಬರ ಹೆಸರುಗಳನ್ನೂ ಬದಲಾಯಿಸಲಾಗಿತ್ತು. ಆರೋಗ್ಯ ಸಿಬ್ಬಂದಿಗೆ ನಂತರ ಎಲ್ಲ ವಿಷಯವನ್ನು ಮನವರಿಕೆ ಮಾಡಿ ದಾಖಲೆಗಳನ್ನು ನೀಡಿದಾಗ ಅವರ ನಿಜ ಹೆಸರುಗಳನ್ನು ನೋಂದಾಯಿಸಲಾಗಿದೆ. ಮಂಗಳವಾರ ಮಧ್ಯಾಹ್ನದವರೆಗೂ ವೈದ್ಯಕೀಯ ಪರೀಕ್ಷೆಯಾಗಿಲ್ಲ ಎಂಬ ದೂರು ಸಂಬಂಧಿಕರದ್ದು. ಗೋವಾದಿಂದ ಶವಗಳನ್ನು ತರುವುದು ತಮಗೆ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.
ತಹಸೀಲ್ದಾರ್ ಎ.ಬಿ. ವಿಜಯಕುಮಾರ ಮೃತರ ಸಂಬಂಧಿಕರ ಮನೆಗೆ ಭೇಟಿ ನೀಡಿ, ಎರಡೂ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಗೋವಾ ಕಟ್ಟಡ ದುರಂತದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಲ್ಲಿನ ಅಧಿಕಾರಿಗಳ ಜತೆ ಸಂಪರ್ಕ ಸಾಧಿಸಲಾಗಿದೆ. ಸುಮಾರು 17ಕ್ಕೂ ಹೆಚ್ಚು ಶವಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕಾಗಿದೆ. ಹೀಗಾಗಿ ಶವ ತರುವುದು ವಿಳಂಬವಾಗಿದೆ. ಈ ಪ್ರಕ್ರಿಯೆ ಮುಗಿದ ಬಳಿಕ ಮೃತ ದೇಹಗಳನ್ನು ಬಿಡುಗಡೆ ಮಾಡುತ್ತಾರೆಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ತಮ್ಮ ಇಲಾಖೆಯ ಮುಖ್ಯ ಕಾರ್ಯದರ್ಶಿಯನ್ನು ಸಂಪರ್ಕಿಸಿ ಎಲ್ಲ ಮಾಹಿತಿ ಪಡೆದರೂ, ಈವರೆಗೂ ಶವಗಳು ಗ್ರಾಮಕ್ಕೆ ಬರದಿರುವುದು ದುರಂತದ ಸಂಗತಿ. ಕೂಲಿ ಅರೆಸಿ ಹೋಗಿ ಶವವಾಗಿರುವ ಇಬ್ಬರ ಮೃತ ದೇಹಗಳನ್ನು ಸರ್ಕಾರ ಮತ್ತು ಕಾರ್ಮಿಕ ಸಚಿವರು ಕೂಡಲೆ ತರಲು ಕುಟುಂಬದವರಿಗೆ ನೆರವಾಗಬೇಕು ಎಂದು ಮೃತರ ಕುಟುಂಬದವರು ಆಗ್ರಹಿಸಿದ್ದಾರೆ.