ರೈತರನ್ನು ಅಲಕ್ಷಿಸಿದರೆ ಸರ್ಕಾರ ಉಳಿಯಲ್ಲ: ನಿಯಾಜಿ ಹುಸೇನ್
ಕೊಟ್ಟೂರು: ರೈತಾಪಿ ವರ್ಗದವರನ್ನು ಅಲಕ್ಷಿಸಿದ ಯಾವುದೇ ಸರ್ಕಾರಕ್ಕೆ ಖಂಡಿತಾ ಉಳಿಗಾಲವಿಲ್ಲ. ಈ ಮರ್ಮವನ್ನು ಅರಿತು ಸಿಎಂ ಸಿದ್ದರಾಮಯ್ಯ ತಮ್ಮ ಆಡಳಿತವನ್ನು ರೈತ ಪರವಾಗಿ ನಡೆಸುವತ್ತ ಮುಂದಾಗಬೇಕು ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಿಯಾಜಿ ಹುಸೇನ್ ಹೇಳಿದರು.
ಸಮೀಪದ ದೂಪದಹಳ್ಳಿ ಗ್ರಾಮದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಗ್ರಾಮ ಘಟಕದ ನಾಮಫಲಕ ಉದ್ಘಾಟಿಸಿ ಮಾತನಾಡಿದ ಅವರು, ಬೆಳೆಗಳಿಗೆ ಸೂಕ್ತ ಬೆಲೆ ಸಿಗದೇ ರೈತರ ಬದುಕು ದಿನದಿನಕ್ಕೂ ದುರ್ಬರವಾಗುತ್ತಿದೆ. ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಲೇ ಸಾಗಿವೆ. ಇದೊಂದು ದೊಡ್ಡ ಸವಾಲಾಗಿ ಸ್ವೀಕರಿಸುವ ಮನೋಭಾವನೆಯನ್ನು ರಾಜ್ಯಸರ್ಕಾರ ತೆಗೆದುಕೊಳ್ಳಬೇಕು. ರೈತ ಸಾವಿಗೀಡಾದ ನಂತರ ಪರಿಹಾರ ಘೋಷಿಸುವ ಬದಲಿಗೆ ಉತ್ತಮ ಬದುಕಿಗೆ ನೆರವು ಕಲ್ಪಿಸಲು ಗಮನಹರಿಸಬೇಕು ಎಂದರು.
ಜಿಲ್ಲಾ ಉಪಾಧ್ಯಕ್ಷ ಎನ್. ಭರಮಣ್ಣ ಮಾತನಾಡಿದರು. ಮುಖಂಡರುಗಳಾದ ನಾಗರಾಜ, ಚಂದ್ರಯ್ಯಸ್ವಾಮಿ, ಬಾಬುನಾಯ್ಕ, ಗುರುಲಿಂಗಪ್ಪ, ಮಹಾದೇವಪ್ಪ, ಜಿ. ಮರುಳಸಿದ್ದಪ್ಪ, ಕಕ್ಕುಪ್ಪಿ ಬಸವರಾಜ, ಮಹೇಶಪ್ಪ, ನಾಗರೆಡ್ಡಿ, ಕೊಟ್ರಪ್ಪ, ಶಿವನಾಯ್ಕ, ಈರಣ್ಣ, ಎಚ್. ನಾಗರಾಜ, ಅಳವಂಡಿ ಕೊಟ್ರೇಶಪ್ಪ, ಬಿ. ರಾಮಪ್ಪ, ಕೆ. ರಾಮಪ್ಪ, ಬಿ.ಎಂ. ಗುರುಬಸವರಾಜ್, ಕೆ. ಅಜ್ಜಪ್ಪ, ಎಚ್. ನಿಂಗಪ್ಪ, ಎಚ್. ಮಲ್ಲಪ್ಪ, ಬಿ.ಎಂ. ವೀರೇಶ್, ಎ. ಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.