ಐಟಿಐ ವಿದ್ಯಾರ್ಥಿಗಳಿಂದ ಧರಣಿ
ಬಳ್ಳಾರಿ: ಐಟಿಐ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾದ ಸೆಮಿಸ್ಟರ್ ಪದ್ದತಿಯನ್ನು ವಿರೋಧಿಸಿ, ಎಐಡಿವೈಓ, ಎಐಡಿಎಸ್ಓ ಜಿಲ್ಲಾ ಸಮಿತಿ ಹಾಗೂ ಐಟಿಐ ವಿದ್ಯಾರ್ಥಿಗಳ ಹೋರಾಟ ಸಮಿತಿಗಳ ನೇತೃತ್ವದಲ್ಲಿ ನೂರಾರು ಐಟಿಐ ವಿದ್ಯಾರ್ಥಿಗಳು ನಗರದಲ್ಲಿ ಬುಧವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ನಗರದ ಕನಕದುರ್ಗಮ್ಮ ದೇವಸ್ಥಾನದಿಂದ ಆರಂಭವಾದ ಐಟಿಐ ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆ ಅಂಡರ್ಬ್ರಿಡ್ಜ್ನಿಂದ ಗಡಿಗಿ ಚನ್ನಪ್ಪ ವೃತ್ತ ತಲುಪಿ ಅಲ್ಲಿ ಕೆಲಕಾಲ ಮಾನವ ಸರಪಳಿ ರಚಿಸಿ, ಪ್ರತಿಭಟನೆ ನಡೆಸಿ ನಂತರ ಡಿಸಿ ಕಚೇರಿ ತಲುಪಿದರು. ರಸ್ತೆಯುದ್ದಕ್ಕೂ ಐಟಿಐನಲ್ಲಿ ಸೆಮಿಸ್ಟರ್ ಪದ್ದತಿ ಕೈಬಿಡುವಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಎಸ್. ಉಮೇಶ್ ಮಾತನಾಡಿ, ಐಟಿಐ ಪಠ್ಯಕ್ರಮವನ್ನು ಸೆಮಿಸ್ಟರ್ ಪದ್ದತಿಗೆ ಬದಲಾಯಿಸುವ ಅಗತ್ಯವೇನು ಎಂಬುದಕ್ಕೆ ಸರ್ಕಾರವಾಗಲೀ, ಡೈರಕ್ಟರ್ ಜನರಲ್ ಆಫ್ ಎಂಪ್ಲಾಯ್ಮೆಂಟ್ ಅಂಡ್ ಟ್ರೈನಿಂಗ್ (ಡಿಜಿಇಟಿ) ಯಾವುದೇ ಸರ್ಕಾರ ಸಕಾರಣ ನೀಡಿಲ್ಲ. ಇದು ಅತ್ಯಂತ ಬೇಜವಾಬ್ದಾರಿ ನಡವಳಿಕೆ. ಐಟಿಐ ತರಬೇತಿದಾರರಿಗೆ ಇದರಿಂದ ಆಘಾತವಾಗಿದೆ. ಕಾಲೇಜುಗಳ ಪ್ರಾಚಾರ್ಯರು, ಬೋಧಕ ಸಿಬ್ಬಂದಿಗಳು ಗೊಂದಲದಲ್ಲಿದ್ದಾರೆ. ಕೂಡಲೇ ಸೆಮಿಸ್ಟರ್ ಪದ್ದತಿ ಕೈಬಿಡಬೇಕು ಎಂದು ಆಗ್ರಹಿಸಿದರು.
ಈ ಸೆಮಿಸ್ಟರ್ ಪದ್ದತಿ ಜಾರಿ ವಿರೋಧಿಸಿ ಡಿಸೆಂಬರ್ 23ರಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಸಲಾಗಿತ್ತು. ಇಂದು ತರಗತಿ ಬಹಿಷ್ಕಾರ ನಡೆದಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಹೋರಾಟ ನಡೆಸಲಾಗುತ್ತದೆ ಎಂದರು.
ನತಂರ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಎಐಡಿವೈಓ ಉಪಾಧ್ಯಕ್ಷ ರಂಗಯ್ಯ ಶಿಡಿಗಿನಮೊಳ, ಪ್ರಶಾಂತ ಬಡಿಗೇರ, ಎಐಡಿಎಸ್ಓ ಜಿಲ್ಲಾಧ್ಯಕ್ಷ ಗೋವಿಂದ್, ಐಟಿಐ ವಿದ್ಯಾರ್ಥಿಗಳ ಹೋರಾಟ ಸಮಿತಿ ಖಾಜಾ ಮೊಯಿನುದ್ದೀನ್, ರಾಮಾಂಜಿನಿ, ರಘು, ಸಂತೋಷ್, ಕೊಟ್ರೇಶ್, ರಾಜಶೇಖರ್, ನಿರಂಜನ್ ಸೇರಿದಂತೆ ನಗರದ ಐಟಿಐ ಕಾಲೇಜಿನ ನೂರಾರು ಐಟಿಐ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.