ಧ್ವನಿ, ಬೆಳಕು ಇಲ್ಲದ ಉತ್ಸವ
ಹೊಸಪೇಟೆ: ನಾಡಿನ ಕಲಾಪರಂಪರೆ ಪ್ರತಿಬಿಂಬಿಸುವ, ಹಂಪಿಯಲ್ಲಿ ಹಿಂದಿನ ವಿಜಯನಗರ ಸಾಮ್ರಾಜ್ಯದ ವೈಭವ ಪುನರ್‌ದರ್ಶನದ ಉದ್ದೇಶದಿಂದ ಹಂಪಿ ಉತ್ಸವನ್ನು ಹಲವು ವರ್ಷಗಳಿಂದಲೂ ಆಚರಿಸಿಕೊಂಡು ಬಂದಿದ್ದು, ಕೆಲ ಕಾರಣಾಂತರಗಳಿಂದ ಎರಡು ವರ್ಷಗಳಿಂದ ನಿಂತಿರುವ ಉತ್ಸವ ಪ್ರಸಕ್ತ ವರ್ಷ ರು. 7.30 ಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಯುತ್ತಿದೆ. ಆದರೆ, ಉತ್ಸವದಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಇಲ್ಲದಿರುವುದು ಉತ್ಸವಕ್ಕೆ ಬರುವ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.
ಜನತೆಗೆ ಬೇಸರ: ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬರಲಾಗಿತ್ತು. ಹಂಪಿ ಉತ್ಸವ ಕೇವಲ ಮೂರು ದಿನಗಳ ಕಾಲ ನಡೆದರೆ, ಧ್ವನಿ ಬೆಳಕು ಕಾರ್ಯಕ್ರಮ ಏಳು ದಿನಗಳವರೆಗೆ ನಡೆದು ಸಾಂಸ್ಕೃತಿಕ ಸಪ್ತಾಹದ ರೀತಿ ನಿತ್ಯವೂ ಸಾವಿರಾರು ಜನರು ಗಾಂಭೀರತೆಯಿಂದ ಈ ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಈ ವರ್ಷದ ಉತ್ಸವದಲ್ಲಿ ಧ್ವನಿ, ಬೆಳಕು ಇಲ್ಲದಿರುವುದು ಉತ್ಸವ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ವೈಭವ ಪ್ರತಿಬಿಂಬಿಸುತ್ತಿತ್ತು: ಹಂಪಿ ಉತ್ಸವದಲ್ಲಿ ನಾಲ್ಕು ವೇದಿಕೆಗಳಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ, ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ ಮಾತ್ರ ಅಖಂಡವಾಗಿ ಒಂದು ಇತಿಹಾಸ ಮರುಸೃಷ್ಟಿ ಮಾಡುವ ರೀತಿ ಒಂದೇ ಪ್ರದೇಶದಲ್ಲಿ ಸುಮಾರು 15ಕ್ಕೂ ಹೆಚ್ಚು ರಂಗಮಂಚಗಳ (ವೇದಿಕೆ) ಮೇಲೆ ಭವ್ಯವಾಗಿ ಅನಾವರಣಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ಎರಡೂವರೆ ಗಂಟೆಗಳ ಕಾಲ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಪ್ರೇಕ್ಷಕರನ್ನು ವಿಜಯನಗರ ಕಾಲಕ್ಕೆ ಮತ್ತು ಸ್ವಾತಂತ್ರ್ಯ ಚಳವಳಿ ಕಾಲಕ್ಕೆ ಕರೆದೊಯ್ಯುವಂಥ ವಿಜಯನಗರ ವೈಭವ ಮತ್ತು ಶ್ರೀಕೃಷ್ಣದೇವರಾಯ ವೈಭವ ಹಾಗೂ ಕರ್ನಾಟಕ ವೈಭವ ಎಂಬ ಮೂರು ವಿನೂತವಾದ ನಾಡು-ನುಡಿಯ ವೈಭವ ಸಾರುವಂಥ ಕಾರ್ಯಕ್ರಮವು ಧ್ವನಿ ಮತ್ತು ಬೆಳಕು ಕಾರ್ಯಕ್ರಮಗಳಲ್ಲಿ ಯಾವುದಾದರೊಂದನ್ನು ಹಂಪಿ ಉತ್ಸವದಲ್ಲಿ ಪ್ರದರ್ಶನಕ್ಕೆ ಅಣಿ ಮಾಡಿದ್ದರೆ ಹಂಪಿ ಉತ್ಸವ ಅತ್ಯಂತ ಆಕರ್ಷಕವಾಗಿರುತ್ತಿತ್ತು.
ಧ್ವನಿ ಮತ್ತು ಬೆಳಕು ಕಾರ್ಯಕ್ರಮವು ಹಂಪಿ ಉತ್ಸವದಲ್ಲಿದ್ದಾಗ ಸ್ಥಳೀಯ ಕಲಾವಿದರು 7 ದಿನಗಳ ಕಾಲ ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ ಪ್ರದರ್ಶನ ಸೇರಿದಂತೆ 14 ದಿನಗಳ ಕಾಲ ಹಂಪಿ ಉತ್ಸವ ತಮ್ಮದೇ ಉತ್ಸವ ಎನ್ನುವಂತೆ ಉತ್ಸಾಹದಿಂದ ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ ಭಾಗವಹಿಸಿ, ಮನೋಜ್ಞವಾಗಿ ಅಭಿನಯಿಸುತ್ತಿದ್ದರು.
ಇದರಿಂದ ನೂರಾರು ಸ್ಥಳೀಯ ಕಲಾವಿದರಿಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ ನಟನೆಗೆ ಅವಕಾಶ ಒದಗಿಸಲಾಗಿತ್ತು. ಇದರಿಂದ ಕಲಾವಿದರ ಬದುಕಿಗೂ ಆಸರೆಯಾಗಿತ್ತು. ಆದರೆ, ಈ ವರ್ಷ ಉತ್ಸವದಲ್ಲಿ ಧ್ವನಿ-ಬೆಳಕು ಕಾರ್ಯಕ್ರಮ ಇಲ್ಲದಿರುವುದರಿಂದ ಸಂತೋಷದಿಂದ ಹಂಪಿ ಉತ್ಸವದಲ್ಲಿ ಪಾಲ್ಗೊಳ್ಳಬೇಕೆಂದುಕೊಂಡ ಸ್ಥಳೀಯ ಕಲಾವಿದರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸಿ.ಕೆ. ನಾಗರಾಜ್