ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಲೋಹದ ಹಕ್ಕಿಗಳ ಕಲರವ

Mainashree
Updated On : 9 Jan 2014, 10:27 am

ಬಳ್ಳಾರಿ: ರಸ್ತೆ ಬದಿಗಳಲ್ಲಿ ಮುತ್ತು, ರತ್ನಗಳನ್ನು ಮಾರಾಟ ಮಾಡುತ್ತಿದ್ದ ಗತವೈಭವ ವಿಜಯನಗರ ಸಾಮ್ರಾಜ್ಯಕ್ಕಿದೆ. ಇಂತಹ ಗತವೈಭವ ನೆನಪಿಸಲು ಈ ಬಾರಿಯ ಹಂಪಿ (ಜ. 10ರಿಂದ 12) ಉತ್ಸವದಲ್ಲಿ ಲೋಹದ ಹಕ್ಕಿಗಳು ಕಲರವ ಮಾಡಲಿವೆ.
ಗಣಿನಾಡು ಬಳ್ಳಾರಿಯೆಂದರೆ ಲೋಹದ ಹಕ್ಕಿಗಳ ಭರಾಟೆಗೆ (ಹೆಲಿಕಾಪ್ಟರ್)ಗೆ ಹೆಸರಾಗಿತ್ತು. ಇದೀಗ ಹಂಪಿ ಉತ್ಸವದಲ್ಲಿ ಹಂಪಿ ಬೈ ಸ್ಕೈ ಹೆಸರಿನಲ್ಲಿ ಲೋಹದ ಹಕ್ಕಿಗಳ ಹಾರಾಟದ ಮೂಲಕ ವಿಶ್ವವಿಖ್ಯಾತ ಹಂಪಿ ಹಾಗೂ ಗಣಿ ನಾಡನ್ನು ನೋಡುವ ವ್ಯವಸ್ಥೆ ಮಾಡಲಾಗಿದ್ದು, ಭಾರಿ ಬೇಡಿಕೆ ಇದೆ.
ಈ ಬಾರಿಯ ಹಂಪಿ ಉತ್ಸವವು ಹಲವು ಹೊಸ ಕಾರ್ಯಕ್ರಮಗಳಿಗೆ ನಾಂದಿ ಹಾಡಿದೆ. ಅದರಲ್ಲಿ ಹಂಪಿ ಬೈ ಸ್ಕೈ ಕೂಡ ಒಂದಾಗಿತ್ತು. ಲೋಹದ ಹಕ್ಕಿಗಳಲ್ಲಿ ಗಣಿಧಣಿಗಳ ಹಾರಾಟ ಮಾತ್ರವಲ್ಲ, ಹಂಪಿ ಉತ್ಸವದ ನೆಪದಲ್ಲಾದರೂ ಜನಸಾಮಾನ್ಯರು ತಿರುಗಾಡಬೇಕೆಂಬ ಹಂಬಲದಿಂದ ಈ ಬಾರಿ ಉತ್ಸವದಲ್ಲಿ ಹಂಪಿ ಬೈ ಸ್ಕೈ ಹೊಸ ಕಲ್ಪನೆಯನ್ನು ನೀಡಲು ಮುಂದಾಗಿದೆ. ಹಂಪಿ ಬೈ ಸ್ಕೈಗೆ ಪಾಸ್‌ಗಳನ್ನು ಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜನರು ದುಂಬಾಲು ಬೀಳುತ್ತಿದ್ದಾರೆ.
ಕಾಪ್ಟರ್ ಮೂಲಕ ಹಂಪಿ ವೀಕ್ಷಣೆ: ಕಡಿಮೆ ಅನುದಾನದಲ್ಲಿ ಪರಿಣಾಮಕಾರಿ ಉತ್ಸವ ಮಾಡುವ ಪ್ರಯತ್ನವನ್ನು ಅಧಿಕಾರಿಗಳು ಮಾಡಲು ಹೊರಟಿದ್ದಾರೆ. ನೂರಾರು ಎಕರೆ ಪ್ರದೇಶದಲ್ಲಿರುವ ವಿಜಯನಗರ ಸಾಮ್ರಾಜ್ಯವನ್ನು ಕೇವಲ ಕೆಳಗಡೆ ನಿಂತು ಒಂದೇ ನೋಟದಲ್ಲಿ ನೋಡುವುದು ಅಸಾಧ್ಯ. ಈ ಹಿನ್ನೆಲೆಯಲ್ಲಿ ಉತ್ಸವದಲ್ಲಿ ಹಂಪಿ ಬೈಸ್ಕೈ ಮೂಲಕ ಹಂಪಿಯನ್ನು ಒಂದೇ ನೋಟದಲ್ಲಿ ನೋಡಲು ಇಂತಹ ಕಾರ್ಯಕ್ಕೆ ಮುಂದಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಹಂಪಿ ಬೈ ಸ್ಕೈ ಮಾಡಬೇಕೆಂಬ ಚಿಂತನೆ ಇದ್ದು, ಅದನ್ನು ರದ್ದುಪಡಿಸಲಾಗಿತ್ತು. ಹಂಪಿ ಉತ್ಸವದಲ್ಲಾದರೂ ಯೋಜನೆಯನ್ನು ಸಾಕಾರಾಗೊಳಿಸುವ ಪ್ರಯತ್ನಕ್ಕೆ ಇದೀಗ ಜಿಲ್ಲಾಡಳಿತ ಮುಂದಾಗಿದೆ. ಈಗಾಗಲೇ ವೈಷ್ಣವದೇವಿ ಹಾಗೂ ಹರಿದ್ವಾರದಲ್ಲಿ ಇಂತಹ ವ್ಯವಸ್ಥೆ ಇದ್ದು, ಇದೀಗ ಹಂಪಿಯಲ್ಲಿ ಮಾಡಲಾಗಿದೆ. ವೈಷ್ಣವ ದೇವಿಯಲ್ಲಿ ಪ್ರತಿಯೊಬ್ಬರಿಗೆ ರು. 5000 ನಿಗದಿಪಡಿಸಲಾಗುತ್ತಿತ್ತು.
ಹಂಪಿ ಬೈ ಸ್ಕೈಗೆ ಭಾರಿ ಬೇಡಿಕೆ: ಗಣಿನಾಡು ಬಳ್ಳಾರಿಯಲ್ಲಿ ಕೇವಲ ಗಣಿ ಧಣಿಗಳು ಹೆಲಿಕಾಪ್ಟರ್‌ಗಳಲ್ಲಿ ಹಾರಾಟ ಮಾಡುವುದನ್ನು ಬಾಯಿ ತೆರೆದು ನೋಡುತ್ತಿದ್ದರು. ಇದೀಗ ಸಾಮಾನ್ಯರು ಹೆಲಿಕಾಪ್ಟರ್ ನೋಡುವುದು ಮಾತ್ರವಲ್ಲ, ಅದರಲ್ಲಿ ಹಾರಾಟ ಮಾಡಬಹುದು ಎಂಬ ಕಲ್ಪನೆ ಯೋಜನೆಯಿಂದ ಸಾಕಾರಾಗೊಳ್ಳುತ್ತಿದೆ.  ಹಂಪಿ ಬೈ ಸ್ಕೈಗೆ ಎರಡು ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ. ಒಂದು ಹೆಲಿಕಾಪ್ಟರ್‌ನಲ್ಲಿ 6 ಜನರು ಪ್ರಯಾಣ ಮಾಡುವ ವ್ಯವಸ್ಥೆ ಇದ್ದು, 15 ನಿಮಿಷಗಳ ಪ್ರಯಾಣ ಇದಾಗಿದೆ. ಪ್ರತಿಯೊಬ್ಬರಿಗೆ ರು. 2000 ನಿಗದಿ ಮಾಡಲಾಗಿದೆ. 10 ವರ್ಷದ ಮಕ್ಕಳಿಗೆ ರು. 1500 ನಿಗದಿ ಪಡಿಸಲಾಗಿದೆ. ಪ್ರತಿ ಹೆಲಿಕಾಪ್ಟರ್‌ಗೆ ಮೂರು ದಿನಗಳಿಗೆ ರು. 25 ಲಕ್ಷ ಖರ್ಚು ಮಾಡಲಾಗುತ್ತಿದೆ. ಇದೀಗ ಹಂಪಿ ಬೈ ಸ್ಕೈಗೆ ಖರ್ಚಾಗುವ ಹಣವನ್ನು ಶೇ. 50ರಿಂದ 60ರಷ್ಟು ಮಾತ್ರ ಪ್ರಯಾಣದ ದರದಿಂದ ತುಂಬಲು ಸಾಧ್ಯ ಎನ್ನುತ್ತಾರೆ ಅಧಿಕಾರಿಗಳು. ಹಂಪಿ, ಸಂಡೂರು ಹಾಗೂ ತುಂಗಭದ್ರಾ ಜಲಾಶಯವನ್ನು ನೋಡುವ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಟಿಕೆಟ್‌ಗಾಗಿ ಜನರು ಮುಗಿ ಬಿದ್ದಿದ್ದು, ಮುಂಗಡ ಟಿಕೆಟ್ ನೀಡುವ ಬದಲಾಗಿ (ವಿಐಪಿಗಳಿಗೆ ಹೊರತುಪಡಿಸಿ) ಸ್ಥಳದಲ್ಲಿಯೇ ನೀಡುವ ವ್ಯವಸ್ಥೆ ಮಾಡಲಾಗಿದೆ.
ಕಾಪ್ಟರ್‌ನಿಂದ ಪುಷ್ಪವೃಷ್ಟಿ: ಈ ಬಾರಿಯ ಹಂಪಿ ಉತ್ಸವದ ಮತ್ತೊಂದು ವಿಶೇಷವೆಂದರೆ ನಾಲ್ಕು ವೇದಿಕೆಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ರಿಮೋಟ್ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿಯಾಗಲಿದೆ. ಉತ್ಸವದಲ್ಲಿ ಶ್ರೀಕೃಷ್ಣದೇವರಾಯ ವೇದಿಕೆ, ಎಂ.ಪಿ. ಪ್ರಕಾಶ್ ವೇದಿಕೆ, ವಿದ್ಯಾರಣ್ಯ ವೇದಿಕೆ, ಹಕ್ಕಬುಕ್ಕರ ವೇದಿಕೆಯ ವ್ಯವಸ್ಥೆ ಮಾಡಲಾಗಿದ್ದು, ಈ ವೇದಿಕೆಗಳಲ್ಲಿ ಮೂರು ದಿನಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ರಿಮೋಟ್ ಕಾಪ್ಟರ್‌ನ್ನು ಪುಷ್ಟವೃಷ್ಟಿಗೆ ಬಳಸಿಕೊಳ್ಳಲಾಗುತ್ತಿದೆ.

ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement