ಶಾಶ್ವತ ನೀರಿಗೆ ಕಾಯುತ್ತಿದೆ ಮಾಲ್ವಿ ಡ್ಯಾಂ
ಹಗರಿಬೊಮ್ಮನಹಳ್ಳಿ: ತಾಲೂಕಿನ ಮಾಲ್ವಿ ಜಲಾಶಯ ಮುನಿರಾಬಾದ್ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, ವಾರ್ಷಿಕ ಎರಡು ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಆದರೆ ನಾಲ್ಕು ದಶಕಗಳಿದಂಲೂ ನಿರಂತರ ಜಲಕ್ಷಾಮಕ್ಕೆ ತುತ್ತಾಗಿರುವ ಈ ಜಲಾಶಯ ಶಾಶ್ವತ ನೀರೊದಗಿಸುವ ಯೋಜನೆಯನ್ನು ಎದುರು ನೋಡುತ್ತಿದೆ.
ಜಲಾಶಯದ ಜಲಕ್ಷಾಮ ನಿವಾರಿಸಬೇಕೆಂದು ಜನಪ್ರತಿನಿಧಿಗಳು, ಸ್ವಾಮೀಜಿಗಳು, ತಾಲೂಕಿನ ಸಾವಿರಾರು ರೈತರು, ಹೋರಾಟಗಾರರು ಇಲ್ಲಿವರೆಗೂ ಮಾಡಿರುವ ರಸ್ತಾ ರೋಖೋ, ಜೈಲ್ ಭರೋ, ಪಾದಯಾತ್ರೆ, ಬೀದಿ ಹೋರಾಟ ಹಾಗೂ ಸರ್ಕಾರಿ ಕಚೇರಿಗಳ ಮುಂದೆ ಪ್ರತಿಭಟನೆ ಮಾಡಿದರೂ ಯೋಜನೆ ಮಾತ್ರ ಕಾರ್ಯಗತಗೊಂಡಿಲ್ಲ.
ರು. 200 ಕೋಟಿ ಯೋಜನೆ: ಆದರೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮಾಲ್ವಿ ಡ್ಯಾಂಗೆ ಶಾಶ್ವತ ನೀರೊದಗಿಸುವ ಯೋಜನೆಯತ್ತ ಸ್ವಲ್ಪಮಟ್ಟಿನ ಕಾಳಜಿ ವಹಿಸಿದ್ದು ಈ ಭಾಗದ ರೈತರಲ್ಲಿ ಸಂತಸ ಮೂಡುವಂತೆ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಮಾರ್ಗದರ್ಶನದಲ್ಲಿ ಶಾಸಕ ಎಸ್. ಭೀಮಾನಾಯ್ಕ ಸುಮಾರು ರು. 200 ಕೋಟಿ ವೆಚ್ಚದಲ್ಲಿ ಡ್ಯಾಂಗೆ ಶಾಶ್ವತ ನೀರೊದಗಿಸಲು ಯೋಜನೆಯ ಜಾರಿಗೆ ಕಳೆದ ಅಧಿವೇಶನದಲ್ಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ತಾಲೂಕಿನ ಸುಮಾರು 60-70 ಹಳ್ಳಿಗಳಲ್ಲಿನ ಕೃಷಿ ಬದುಕಿನ ಚಿತ್ರಣ, ಇಲ್ಲಿನ ಮಾರುಕಟ್ಟೆಯ ಅರ್ಥಿಕ ಚಟುವಟಿಕೆಗಳ ಮೇಲೆ ಡ್ಯಾಂ ತನ್ನ ಪ್ರಭಾವ ಇಟ್ಟುಕೊಂಡಿದೆ. ಆದರೆ ನಾಲ್ಕು ದಶಕಗಳಿಂದ ಡ್ಯಾಂ ಶಾಶ್ವತ ನೀರಿಗಾಗಿ ಕಾಯುತ್ತಲೆ ಇದೆ. ನೀರು ಮಾತ್ರ ಡ್ಯಾಂಗೆ ಬರಲೇ ಇಲ್ಲ. ಬದಲಾಗಿ ತನ್ನ ಡ್ಯಾಂನ ಆಯಸ್ಸು ಕಳೆಯುತ್ತಿದೆ ಅಷ್ಟೆ.
60 ಗ್ರಾಮದ ಅಂತರ್ಜಲ ವೃದ್ಧಿ: ಒಂದೇ ಒಂದು ಸಲ ಡ್ಯಾಂ ಭರ್ತಿಯಾಗಿ ಹಗರಿ ಹಳ್ಳ ಹರಿದರೆ ಕನಿಷ್ಠ ಎರಡು ವರ್ಷ ಡ್ಯಾಂ ಮೇಲ್ಭಾಗದಲ್ಲಿನ ಸಂಗಮೇಶ್ವರ, ಕುಡಿತಿನಮಗ್ಗಿ, ಅಂಬಳಿ, ಅಲಬೂರು, ದಿಬ್ಬದಳ್ಳಿ, ಕೊಗಳಿ, ಕೊಗಳಿ ತಾಂಡಾ, ಚಿಮ್ಮನಹಳ್ಳಿ,ನೆಲ್ಕುದ್ರಿ- 1,2,3 ಕಾಲೋನಿಗಳು, ವಟ್ಟಮ್ಮನಹಳ್ಳಿ, ಉಲುವತ್ತಿ ಹಾಗೂ ಕೆಳಭಾಗದ ಮಾಲ್ವಿ, ಹರೇಗೊಂಡನಹಳ್ಳಿ, ಹಳೇ ಹಗರಿಬೊಮ್ಮನಹಳ್ಳಿ, ಎಂ.ಬಿ. ಕಾಲೋನಿ, ಚಿಂತ್ರಪಳ್ಳಿ, ವಲ್ಲಭಾಪುರ, ರಾಮನಗರ, ಕೆಚ್ಚಿನಬಂಡಿ, ಬ್ಯಾಲಾಳು, ಕಾತ್ಯಾಯಿನಿಮರಡಿ, ಕಡ್ಲಬಾಳು, ಬಾಚಿಗೊಂಡನಹಳ್ಳಿ- 1,2 ಕಾಲೋನಿಗಳು, ಹಗರಿ ಕ್ಯಾದಿಗಿಹಳ್ಳಿ, ರಾಯರಾಳುತಾಂಡಾ, ಬಲ್ಲಾಹುಣ್ಸಿ ಸೇರಿದಂತೆ 50ರಿಂದ 60ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಅಂತರ್ಜಲ ಕ್ಷಾಮ ಎಂಬುವುದೆ ಸುಳಿಯುವುದಿಲ್ಲ.
ಡ್ಯಾಂ ಮುಂಭಾಗದಿಂದ ಸರಿ ಸುಮಾರು 20 ಕೀ.ಮಿ. ದೂರದಷ್ಟು ವಿಶಾಲ ವ್ಯಾಪ್ತಿಯಲ್ಲಿ ಹರಡಿ ಉದ್ದಕ್ಕೆ ಹರಿಯುವ ಹಗರಿಹಳ್ಳ ಅಂತರ್ಜಲದ ಬಹುದೊಡ್ಡ ಉಗ್ರಾಣ ಹೌದು, ಸರಿ ಸುಮಾರು ಸಾವಿರಾರು ಅಡಿ ಅಳದವರೆಗೂ ಆಗಾಧ ಪ್ರಮಾಣದಲ್ಲಿರುವ ಮರಳಿನರಾಶಿ ಈ ಭಾಗದ ಕೃಷಿಭೂಮಿ ಮತ್ತು ಜನಸಾಮಾನ್ಯರ ನೀರಿನ ದಾಹ ನೀಗಿಸುವ ಕಾರ್ಯವನ್ನು ನೂರಾರು ವರ್ಷಗಳಿಂದ ನಿರ್ವಹಿಸುತ್ತಲೆ ಇದೆ. ಮಳೆ ಕೊರತೆಯಿಂದಾಗಿ ನೀರಿಲ್ಲದೆ ಹಳ್ಳ ಸಂಪೂರ್ಣ ಬತ್ತಿದೆ. ಹೀಗಾಗಿ ಇಲ್ಲಿ ಅಂತರ್ಜಲ ಇಲ್ಲ. ಅಂತರ್ಜಲ ವೃದ್ಧಿಯಾಗಬೇಕಾದರೆ ಮಾಲ್ವಿ ಜಲಾಶಯಕ್ಕೆ ಶಾಶ್ವತ ನೀರು ಬರಲೇಬೇಕು.
ಹುಳ್ಳಿ ಪ್ರಕಾಶ