ಸುದ್ದಿ ಸಂಕ್ಷೇಪ
ಇಂದು ಕಲಿಕೋತ್ಸವ
ಕೂಡ್ಲಿಗಿ: ಶಿಕ್ಷಣ ಇಲಾಖೆಯಿಂದ ನಡೆಯುವ ತಾಲೂಕು ಮಟ್ಟದ ಮಕ್ಕಳ ಕಲಿಕೋತ್ಸವ ಕಾರ್ಯಕ್ರಮ ತಾಲೂಕಿನ ಹೊಸಹಳ್ಳಿ ಕೆಎಂಎಸ್ ಪ್ರಥಮದರ್ಜೆ ಕಾಲೇಜಿನಲ್ಲಿ ಇಂದು (ಜ.9) ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಬಿಇಓ ಎಂ.ಆರ್. ಮಂಜುನಾಥ, ತಾಲೂಕು ಶಿಕ್ಷಣ ಸಮನ್ವಯಾಧಿಕಾರಿ ಮೈಲೇಶ್ ತಿಳಿಸಿದ್ದಾರೆ. ಕಲಿಕೋತ್ಸವ ಕಾರ್ಯಕ್ರಮದಲ್ಲಿ ಜಿಪಂ, ತಾಪಂ ಹಾಗೂ ಗ್ರಾಪಂ ಸದಸ್ಯರು, ಜನಪ್ರತಿನಿಧಿಗಳು, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಲಿದ್ದು, 1ರಿಂದ 8ನೇ ತರಗತಿವರೆಗೆ ಓದುತ್ತಿರುವ ಮಕ್ಕಳಿಗೆ ಪಠ್ಯಪುಸ್ತಕದಲ್ಲಿರುವ ಪಾಠಗಳನ್ನು ಎಷ್ಟರಮಟ್ಟಿಗೆ ಕಲಿತಿದ್ದಾರೆ ಎನ್ನುವುದನ್ನು ಮನೋರಂಜನೆಯ ಮೂಲಕ ಸ್ಪರ್ಧೆ ಏರ್ಪಡಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮ ಇದಾಗಿದ್ದು, ಆಸಕ್ತಿ ಇರುವ ಮಕ್ಕಳು ಸಹ ಭಾಗವಹಿಸಬಹುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇಂದಿನಿಂದ ಯುವ ಕಾಂಗ್ರೆಸ್ಗೆ ಚುನಾವಣೆ
ಬಳ್ಳಾರಿ: ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಸಮಿತಿಗೆ 9ರಿಂದ ಎರಡು ದಿನಗಳ ಕಾಲ ಚುನಾವಣೆ ನಡೆಯಲಿದೆ. ಜ. 6 ಮತ್ತು 7ರಂದು ನಡೆಯಬೇಕಿದ್ದ ಈ ಚುನಾವಣೆಯಲ್ಲಿ ರಾಜ್ಯ ಸಮಿತಿಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಚಿಹ್ನೆ ಬದಲಾವಣೆಯಿಂದಾಗಿ ರಾಜ್ಯ ಚುನಾವಣಾಧಿಕಾರಿಗಳ ಆದೇಶದ ಮೇರೆಗೆ ಮತದಾನ ಸ್ಥಗಿತಗೊಳಿಸಲಾಗಿತ್ತು.
ಜ. 9ರಂದು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 5 ಗಂಟೆವರೆಗೆ ನಡೆಯಲಿರುವ ಮತದಾನದಲ್ಲಿ ಹಡಗಲಿ ಹಾಗೂ ಕೂಡ್ಲಿಗಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಮತದಾರರಿಗೆ ಮತದಾನ ಮಾಡಲು ಕೂಡ್ಲಿಗಿಯ ಗುಡೇಕೋಟೆ ರಸ್ತೆ ಪ್ರದೇಶದಲ್ಲಿರುವ ಸಮುದಾಯ ಭವನದಲ್ಲಿ ವ್ಯವಸ್ಥೆ ಕಲ್ಪಿಸಿದೆ. ಕಂಪ್ಲಿ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕಂಪ್ಲಿಯ ಗಂಗಾವತಿ ರಸ್ತೆ ನಟರಾಜ್ ಚಿತ್ರಮಂದಿರದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಜ. 10ರಂದು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 5 ಗಂಟೆಗೆ ನಡೆಯುವ ಚುನಾವಣೆಯಲ್ಲಿ ಎಚ್.ಬಿ. ಹಳ್ಳಿ, ಸಂಡೂರು ಹಾಗೂ ಹೊಸಪೇಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಮತದಾರರು ಮತದಾನ ಮಾಡಲು ಹೊಸಪೇಟೆಯ ರೇಲ್ವೆ ನಿಲ್ದಾಣದ ಬಳಿ ಇರುವ ರೋಟರಿ ಸಭಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಬಳ್ಳಾರಿ ನಗರ ಮತ್ತು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮತದಾರರಿಗೆ ನಗರದ ಡಾ. ರಾಜ್ಕುಮಾರ್ ರಸ್ತೆ ಪ್ರದೇಶದಲ್ಲಿರುವ ಸೆಂಟೆನರಿ ಸಭಾಂಗಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬಳ್ಳಾರಿ ಲೋಕಸಭಾ ಚುನಾವಣಾಧಿಕಾರಿ ಕೆ.ಎ. ಉಮ್ಮರ್ ಫಾರೂಕ್ ಆದೇಶದ ಮೇರೆಗೆ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಜೆ.ವಿ. ಮಂಜುನಾಥ ತಿಳಿಸಿದ್ದಾರೆ.
ಮೂಲವ್ಯಾಧಿ: ಆತ್ಮಹತ್ಯೆ
ಬಳ್ಳಾರಿ: ಮೂಲವ್ಯಾಧಿ ನೋವು ತಾಳದೆ ವ್ಯಕ್ತಿಯೋರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ನಗರದ ಹವಂಭಾವಿಯಲ್ಲಿ ನಡೆದಿದೆ. ಮೃತನು ಹವಂಭಾವಿಯ ನಾಗಿರೆಡ್ಡಿ (30). ಈತನಿಗೆ ಇಬ್ಬರು ಹೆಂಡಿರಿದ್ದು, ಮೂಲವ್ಯಾಧಿ ನೋವಿನಿಂದ ಕಳೆದ ಎರಡು ದಿನಗಳ ಹಿಂದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ, ಮಂಗಳವಾರ ಸಂಜೆ ಮೃತಪಟ್ಟಿದ್ದಾನೆ. ಈ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರ್ಯಾಕ್ಟರ್ನಿಂದ ಬಿದ್ದು ಸಾವು
ಕೂಡ್ಲಿಗಿ: ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಆನಂದಪ್ಪ ಅವರ ಹೊಲದ ಹತ್ತಿರ ಟ್ರ್ಯಾಕ್ಟರ್ನಲ್ಲಿ ತೆರಳುತ್ತಿದ್ದ ನಾಗರಾಜ (45) ಎಂಬಾತ ಟ್ರ್ಯಾಕ್ಟರ್ನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮಂಗಳವಾರ ರಾತ್ರಿ ತಮ್ಮ ಮಗನನ್ನು ಹುಲಿಕೆರೆಯಿಂದ ಹೊಸಹಳ್ಳಿಗೆ ಬಿಟ್ಟು ಬರಲು ಟ್ರ್ಯಾಕ್ಟರ್ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಚಾಲಕನ ವಿರುದ್ಧ ಮೃತನ ಅಣ್ಣ ಚೌಡಪ್ಪ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕರಡಿ ನಿಗೂಢ ಸಾವು: ಪರಿಶೀಲನೆ
ಕೂಡ್ಲಿಗಿ: ತಾಲೂಕಿನ ಗುಡೇಕೋಟೆ ಅರಣ್ಯ ಪ್ರದೇಶದ ರಂಗಯ್ಯನಗುಡ್ಡ ಜಲಾಶಯದ ಬಳಿ 4 ವರ್ಷದ ಗಂಡು ಕರಡಿಯೊಂದು ಮಂಗಳವಾರ ರಾತ್ರಿ ನಿಗೂಢವಾಗಿ ಸಾವನ್ನಪ್ಪಿದೆ. ಗುಡೇಕೋಟೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತಾಲೂಕಿನ ಗಡಿಭಾಗದ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಗಡಿಯಲ್ಲಿ ಕರಡಿ ಸತ್ತಿರುವುದು ಖಚಿತವಾದ ನಂತರ ಆ ತಾಲೂಕಿನ ಅರಣ್ಯ ಅಧಿಕಾರಿಗಳು ಕರಡಿ ಶವ ಪರೀಕ್ಷೆ ನಡೆಸಿದ್ದಾರೆ ಎಂದು ಗುಡೇಕೋಟೆ ಆರ್ಎಫ್ಒ ಬಿ.ಪಿ. ದುದ್ದಿಗಿ ತಿಳಿಸಿದರು.
ಗುಡೇಕೋಟೆ ಅರಣ್ಯ ಪ್ರದೇಶದಲ್ಲಿ ಕರಡಿ ಸಂತತಿ ಹೆಚ್ಚಿದ್ದು ಇತ್ತೀಚಿಗೆ ಭೀಮಸಮುದ್ರ ಸಮೀಪದ ಕರಡಿಹಳ್ಳಿ ಬಳಿ ಕರಡಿಯೊಂದು ಸತ್ತಿದೆ. ಕರಡಿಗಳ ಸಾವಿನ ಬಗ್ಗೆ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಭೀಮಸಮುದ್ರ ರಂಗನಾಥ, ಜೋಗಿಹಳ್ಳಿ ಚನ್ನಪ್ಪ, ಕರಡಿಹಳ್ಳಿ ಗೌಡ್ರು ಸುರೇಶ್, ಶೆಡ್ ಬಸಣ್ಣ, ಯೋಗಾನಂದಮೂರ್ತಿ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.