ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಐತಿಹಾಸಿಕ ಉತ್ಸವಕ್ಕೆ ಕ್ಷಣಗಣನೆ

Mainashree
Updated On : 10 Jan 2014, 10:41 am

ಕನ್ನಡಪ್ರಭ ವಾರ್ತೆ, ಹಂಪಿ, ಜ. 9
ಹಕ್ಕಬುಕ್ಕರು ಸ್ಥಾಪಿಸಿದ, ಶ್ರೀ ಕೃಷ್ಣದೇವರಾಯ ಆಳಿದ ಹಂಪಿಯು ಬಾಳೆ ಮತ್ತು ಸಕ್ಕರೆ ಕಬ್ಬಿನ ತೋಟಗಳ ಮಧ್ಯೆ ಮದುವಣಗಿತ್ತೆಯಂತೆ ಉತ್ಸವಕ್ಕಾಗಿ ಸಿಂಗಾರಗೊಂಡಿದೆ. ಹಾಳು ಹಂಪಿಯೆಂದು ಬಿಂಬಿತವಾಗಿರುವ ಹಂಪಿಯ ಸ್ಮಾರಕಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ. ಅನುದಾನದ ಕೊರತೆ, ಕೆಲವರ ಅಪಸ್ವರಗಳ ಮಧ್ಯೆ ಹಂಪಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಎರಡು ವರ್ಷ ಬರಗಾಲದಿಂದಾಗಿ ರದ್ದಾಗಿದ್ದ ಹಂಪಿ ಉತ್ಸವ ಜ. 10ರಂದು ಚಾಲನೆ ಪಡೆಯಲಿದೆ. ಉತ್ಸವವನ್ನು ಕಣ್ಣಾರೆ ಕಂಡು ಸಂತೋಷಪಡುವ ಮನಸ್ಸುಗಳು ನಾಡಿನ ವಿವಿಧೆಡೆಯಿಂದ ಹಂಪಿಯತ್ತ ಹೆಜ್ಜೆ ಹಾಕುತ್ತಿವೆ. ಹಲವು ವಿಶೇಷ ಕಾರ್ಯಕ್ರಮಗಳ ಮೂಲಕ ಉತ್ಸವವು ಈ ಬಾರಿ ಇತಿಹಾಸ, ಸಾಹಿತ್ಯ, ಕಲೆ, ಸಂಗೀತ ಆಸಕ್ತರನ್ನು ತನ್ನತ್ತ ಸೆಳೆಯುತ್ತಿದೆ.
ನಾಲ್ಕು ವೇದಿಕೆಗಳ ಮೂಲಕ ಹಂಪಿಯ ಗತವೈಭವವನ್ನು ಕಟ್ಟಿಕೊಡುವ ಪ್ರಯತ್ನ ನಡೆದಿದೆ. ವಿಜಯನಗರ ಕಾಲದ ಪ್ರಸಿದ್ಧ ಅರಸ ಶ್ರೀ ಕೃಷ್ಣದೇವರಾಯ ವೇದಿಕೆ, ಹಂಪಿ ಉತ್ಸವಕ್ಕೆ ಪ್ರಮುಖ ಕಾರಣಿಕರ್ತರಾದ ಎಂ.ಪಿ. ಪ್ರಕಾಶ್ ಹೆಸರಿನ ವೇದಿಕೆ, ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣೀಭೂತರಾದ ವಿದ್ಯಾರಣ್ಯರ ಹೆಸರಿನಲ್ಲಿ ವೇದಿಕೆ ಹಾಗೂ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ಹಕ್ಕಬುಕ್ಕರ ಹೆಸರಿನ ವೇದಿಕೆಗಳು ಮೂರು ದಿನದ ಉತ್ಸವಕ್ಕೆ ಸಿಂಗಾರಗೊಂಡಿವೆ.
ಹಂಪಿಯನ್ನು ಒಂದೇ ನೋಟದಲ್ಲಿ ನೋಡುವ ಹಂಪಿ ಬೈ ಸ್ಕೈ(ಆಗಸದಲ್ಲಿ ಹಂಪಿ), ಹಂಪಿ ಹಾಗೂ ಗಣಿ ನಾಡನ್ನು ಹೆಲಿಕಾಪ್ಟರ್‌ನಲ್ಲಿ ಕುಳಿತು ನೋಡುವುದು, ಕಿಚನ್ ಕ್ವೀನ್, ಹಾಟ್ ಏರ್ ಬಲೂನ್, ರಿಮೋಟ್ ಹೆಲಿಕಾಪ್ಟರ್ ಮೂಲಕ ಕಾರ್ಯಕ್ರಮದ ಉದ್ಘಾಟನೆಗೆ ಪುಷ್ಪವೃಷ್ಟಿ, ವಿಕಲಚೇತನರ ಕ್ರೀಡಾಕೂಟ, ಪೇಂಟ್ ಬಾಲ್, ಹಂಪಿ ವಿಹಂಗಮ ದೃಶ್ಯ, ವರ್ಣಚಿತ್ರ ಸ್ಪರ್ಧೆ, ಸಾಹಸ ಕ್ರೀಡೆಗಳು, ಮಹಿಳಾ ಉತ್ಸವ, ಗಾಳಿಪಟ ಸ್ಪರ್ಧೆಗಳು ಉತ್ಸವದಲ್ಲಿ ಗಮನ ಸೆಳೆಯಲಿವೆ. ಉತ್ಸವ ವೀಕ್ಷಣೆಗೆ ರಾಜ್ಯ, ದೇಶದ ಪ್ರವಾಸಿಗರೊಂದಿಗೆ, ಫ್ರಾನ್ಸ್, ಜಪಾನ್, ಅಮೆರಿಕ, ಇಂಗ್ಲೆಂಡ್, ಇಟಲಿ ಸೇರಿದಂತೆ ವಿವಿಧ ದೇಶಗಳಿಂದ ಆಗಮಿಸಿರುವ ವಿದೇಶಿ ಪ್ರವಾಸಿಗರು ಹಂಪಿ ಸುತ್ತಮುತ್ತಲಿನ ಹೋಂಸ್ಟೇಗಳಲ್ಲಿ ತಂಗಿದ್ದು ಉತ್ಸವಕ್ಕೆ ಕಾತರದಿಂದ ಕಾದಿದ್ದಾರೆ.
ಮೂರು ದಿನಗಳ ಉತ್ಸವಕ್ಕೆ ಹಂಪಿ ಗಾಯತ್ರಿ ಪೀಠದ ಹತ್ತಿರದ ಮೈದಾನದಲ್ಲಿ ನಿರ್ಮಿಸಿರುವ ಶ್ರೀ ಕೃಷ್ಣದೇವರಾಯ ವೇದಿಕೆಯಲ್ಲಿ ಜ. 10ರಂದು ಸಂಜೆ 5ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಸಂಸದರು, ಜಿಲ್ಲೆಯ ಶಾಸಕರು, ಜಿಪಂ ಸದಸ್ಯರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಉತ್ಸವದ ಚಾಲನೆಗೆ ಸಾಕ್ಷಿಯಾಗಲಿದ್ದಾರೆ. ದೇಶದ ಸಂಸ್ಕೃತಿ ಬಿಂಬಿಸುವ ನೃತ್ಯ ಸಂಗೀತ, ಹಂಪಿಯ ಗತವೈಭವ ಮರುಕಳಿಸುವ ವಿವಿಧ ಕಾರ್ಯಕ್ರಮಗಳು ಮೂರು ದಿನ ಗಮನ ಸೆಳೆಯಲಿವೆ.
ಜ. 10ರಂದು ರೂಪಾ ಅಯ್ಯರ್ ಅವರ ವಿಜಯನಗರ ಕಾಲದ ಸಾಂಪ್ರದಾಯಿಕ ಉಡುಪು ಪ್ರದರ್ಶನ, ಮುಂಬೈನ ಶಬರಿ ಬ್ರದರ್ಸ್ ಅವರಿಂದ ಖವ್ವಾಲಿ ಮತ್ತು ಗಜಲ್, ಮುಂಬೈನ ಶಾನ್ ಅವರಿಂದ ಹಿಂದಿ ಮತ್ತು ಕನ್ನಡ ಚಿತ್ರಗೀತೆಗಳ ಗಾಯನ, ಕಸ್ತೂರಿಶಂಕರ್ ಅವರ ಸುಗಮಸಂಗೀತ, ಎಂ.ಡಿ. ಪಲ್ಲವಿ ಅವರ ಕನ್ನಡ ಗೀತೆಗಳ ಗಾಯನ, ಪ್ರವೀಣ ಗೋಡ್ಖಿಂಡಿ ಅವರ ಫ್ಯೂಜನ್ ಬ್ಯಾಂಡ್, ಫಯಾಜ್‌ಖಾನ್ ಅವರ ಗಜಲ್, ಆರ್ಟಿಕ್ಯೂಲೇಟ್ ಇಂಡಿಯಾದಿಂದ ನೃತ್ಯರೂಪಕ, ರಿಂಪಾಶಿವ ಅವರ ತಬಲ ವಾದನ, ಅರ್ಪಿತ ವೆಂಕಟೇಶ್ ಅವರ ಓಡಿಸ್ಸಿ ನೃತ್ಯ, ಶುಭಾ ಮುದ್ಗಲ್ ಅವರ ಹಿಂದುಸ್ತಾನಿ ಗಾಯನ ಸೇರಿದಂತೆ ಹೆಸರಾಂತ ಕಲಾವಿದರು, ಗಾಯಕರು ಕಲಾ ಪ್ರದರ್ಶನ ನೀಡಲಿದ್ದಾರೆ. ಜ. 11ರಂದು ಅರ್ಚನಾ ಉಡುಪ ಅವರಿಂದ ಕನ್ನಡ ಗೀತಗಾಯನ, ಓಡಿಶಾದ ಪ್ರಿನ್ಸ್ ಡ್ಯಾನ್ಸ್ ತಂಡದಿಂದ ಟ್ಯಾಲೆಂಟ್ ಷೋ, ನಾಗರಾಜ ಕೋಟೆಯವರಿಂದ ಹಾಸ್ಯ, ಕುನಾಲ್ ಗಾಂಜಾವಾಲ ಅವರಿಂದ ಹಿಂದಿ ಮತ್ತು ಕನ್ನಡ ಚಿತ್ರಗೀತೆಗಳು ನಡೆಯಲಿವೆ. ಜ. 12ರಂದು ಪಂಕಜ್ ಉದಾಸ್ ಅವರ ಗಜಲ್, ರಿಚರ್ಡ್ ಲೂಯಿಸ್ ಅವರ ಹಾಸ್ಯ, ಮುಂಬೈನ ಜಾವೇದ್ ಅಲಿ ಅವರಿಂದ ಹಿಂದಿ ಚಿತ್ರಗೀತೆಗಳು, ರಘು ದೀಕ್ಷಿತರಿಂದ ಫ್ಯೂಜನ್, ಮುಂಬೈನ ಸುನಿಧಿ ಚೌವ್ಹಾಣ್ ಅವರಿಂದ ಹಿಂದಿ, ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ಸೇರಿ ನಾಲ್ಕು ವೇದಿಕೆಗಳಲ್ಲಿ ನೂರಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಮೂರು ದಿನ ಜರುಗಲಿವೆ.
ಉತ್ಸವ ಗೊಂದಲ, ಗಲಾಟೆ ಇಲ್ಲದಂತೆ ನಡೆಯಲು ಹಂಪಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಉತ್ಸವದ ಯಶಸ್ವಿಗೆ ಜಿಲ್ಲಾಡಳಿತ, ಅಧಿಕಾರಿಗಳು ಹಲವು ದಿನಗಳಿಂದ ಹಂಪಿಯಲ್ಲಿ ಬೀಡು ಬಿಟ್ಟಿದ್ದರು. 3 ದಿನ ಉತ್ಸವಕ್ಕೆ ಆಗಮಿಸುವ ಜನರಿಗೆ ಊಟದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ.


ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement