ಜನತೆ ಅಭಿರುಚಿಗೆ ತಕ್ಕಂತೆ ಮೇಳ
ಕನ್ನಡಪ್ರಭ ವಾರ್ತೆ, ಹಂಪಿ, ಜ. 9
ಪ್ರವಾಸಿಗರ, ಜನತೆಯ ಅಭಿರುಚಿ ಮನಗಂಡು ಪುಸ್ತಕ, ಕರಕುಶಲ ಮೇಳ, ಉತ್ಸವದ ಹಿಂದಿನ ಛಾಯಾಚಿತ್ರ, ವಿಡಿಯೋ ತುಣುಕು ಮತ್ತು ಹಂಪಿ ಬೈ ಆರ್ಟ್ ಪ್ರದರ್ಶನವನ್ನು ಉತ್ಸವದಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಉತ್ಸವದಲ್ಲಿ ವಸ್ತುಗಳನ್ನು ಹೆಚ್ಚು ಖರೀದಿಸುವ ಮೂಲಕ ಉದ್ಯಮಗಳನ್ನು ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಮನವಿ ಮಾಡಿದರು.
ಹಂಪಿಯಲ್ಲಿ ಗುರುವಾರ ಪುಸ್ತಕ ಹಾಗೂ ಕರಕುಶಲ ಮೇಳ, ಮಾರಾಟ ಮಳಿಗೆಗಳನ್ನು ಉದ್ಘಾಟಿಸಿ ಅವರು ಮಾತನಾಡಿ, ಮಾಜಿ ಉಪ ಮುಖ್ಯಮಂತ್ರಿ ದಿ.ಎಂ.ಪಿ. ಪ್ರಕಾಶ್ ಅವರು ಹಂಪಿ ಉತ್ಸವಕ್ಕೆ ಚಾಲನೆ ನೀಡಿದ್ದರಿಂದ ಇಂದು ಹಂಪಿ ಉತ್ಸವ ನಾಡಿನ ಉತ್ಸವವಾಗಿ ಆಚರಣೆಗೊಳ್ಳುತ್ತಿದೆ. ಅದ್ಬುತ, ದೊಡ್ಡ ಉತ್ಸವನ್ನಾಗಿ ರೂಪಿಸಿ, ಚಾಲನೆ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಪ್ರಕಾಶ್ ಅವರನ್ನು ನಾವು ಗೌರವಪೂರ್ವಕವಾಗಿ ಅಭಿನಂದಿಸುತ್ತೇವೆ ಎಂದರು.
ಉತ್ಸವದ ಸಮಾರೋಪದಲ್ಲಿ ಕೇಂದ್ರ ರೇಲ್ವೆ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಲಿದ್ದು, ಸಮಾರಂಭದಲ್ಲೆ ಬೆಂಗಳೂರು- ಹೊಸಪೇಟೆ ಇಂಟರ್ ಸಿಟಿ ರೈಲು ಘೋಷಿಸುವಂತೆ ಮನವಿ ಮಾಡಿದ್ದೇವೆ. ಬೆಂಗಳೂರು- ಹೊಸಪೇಟೆ ನಡುವೆ ಇಂಟರ್ ಸಿಟಿ ರೈಲು ಆರಂಭವಾದರೆ ಹಂಪಿಗೆ ಬರುವ ಪ್ರವಾಸಿಗರಿಗೆ ಹೆಚ್ಚು ಅನುಕೂಲ ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿದಂತಾಗುತ್ತದೆ ಎಂದರು.
ಹಂಪಿಯಲ್ಲಿ ಸೋಲಾರ್ ಲೈಟ್ ಹಾಗೂ ಮೆಟ್ಟಲುಗಳನ್ನು ಅಳವಡಿಸುವಾಗ ಸ್ಮಾರಕಗಳಿಗೆ ಸಣ್ಣಪುಟ್ಟ ಧಕ್ಕೆಗಳಾಗಿರಬಹುದು ಆದರೆ ಯಾವುದೇ ರೀತಿಯಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಮುಖಂಡ ಆಂಜನೇಯಲು, ರಾಂಪ್ರಸಾದ್, ಎಲ್. ಸಿದ್ದನಗೌಡ, ಅಯ್ಯಾಳಿ ತಿಮ್ಮಪ್ಪ, ಕೆ.ಎಂ. ಹಾಲಪ್ಪ, ಗುಜ್ಜಲ್ ರಘು, ಶ್ರೀನಿವಾಸರಾವ್, ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಅಪರ ಜಿಲ್ಲಾಧಿಕಾರಿ ವೆಂಕಟೇಶ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶ್ರೀನಿವಾಸ ಕುಲಕರ್ಣಿ, ಎನ್ಐಸಿ ಅಧಿಕಾರಿ ವಸ್ತ್ರದ್, ವಾರ್ತಾ ಇಲಾಖೆ ಅಧಿಕಾರಿ ಶ್ರೀನಿವಾಸ್ ಸೇರಿದಂತೆ ಇತರರಿದ್ದರು.
ಪುಸ್ತಕ ಓದುವ ಹವ್ಯಾಸ ರೂಢಿಸಿಕೊಂಡವರಿಗೆ ಹಂಪಿ ಉತ್ಸವಕ್ಕೆ ಅನೇಕ ಪುಸ್ತಕ ಮಾರಾಟ ಮಳಿಗೆಗಳು ಬಂದಿವೆ. ಹೀಗಾಗಿ ಪುಸ್ತಕ ಪ್ರಿಯರಿಗೆ ಹೆಚ್ಚು ಪುಸ್ತಕ ಖರೀದಿ ಮಾಡಲು ಅನುಕೂಲವಾಗಲಿದೆ. ಚನ್ನಪಟ್ಟಣದ ವಸ್ತುಗಳು, ಇಳಕಲ್ ಸೀರೆ ಸೇರಿದಂತೆ ಇತರೆ ವಸ್ತುಗಳ ಪ್ರದರ್ಶನ ಮತ್ತು ಮಾರಾಟದಿಂದ ಅಭಿರುಚಿಗೆ ತಕ್ಕಂತೆ ವಸ್ತುಗಳನ್ನು ಖರೀದಿಸುತ್ತಾರೆ. ಜನರು ಉತ್ಸವದ ನೆನಪಿಗಾಗಿ ಯಾವುದಾದರೊಂದು ವಸ್ತು ಖರೀದಿಸಿ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು.
- ಪಿ.ಟಿ. ಪರಮೇಶ್ವರ ನಾಯ್ಕ, ಜಿಲ್ಲಾ ಉಸ್ತುವಾರಿ ಸಚಿವ