ನಿರ್ವಹಣೆ ಕೊರತೆ: ಸೌರ ವಿದ್ಯುತ್ ಕತ್ತಲು
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಜ. 9
ಸರ್ಕಾರ ಲಕ್ಷಗಟ್ಟಲೇ ವೆಚ್ಚಮಾಡಿ ಜನತೆಯ ಕಲ್ಯಾಣಕ್ಕೆ ಯೋಜನೆಗಳನ್ನು ತಯಾರಿಸಿದರೆ ಯೋಜನೆಗಳು ಯಾವ ರೀತಿ ಮೂಲೆ ಸೇರುತ್ತವೆ ಎನ್ನುವುದಕ್ಕೆ ತಾಲೂಕಿನ ಗಂಡಬೊಮ್ಮನಹಳ್ಳಿ, ಕೆ. ದಿಬ್ಬದಹಳ್ಳಿ, ಯರ್ರಗುಂಡ್ಲ ಹಟ್ಟಿ ಗ್ರಾಮಗಳೇ ಸಾಕ್ಷಿಯಾಗಿವೆ.
ಐದು ವರ್ಷಗಳ ಹಿಂದೆ ಈ ಮೂರು ಗ್ರಾಮಗಳಲ್ಲಿ ಲಕ್ಷಗಟ್ಟಲೇ ವೆಚ್ಚದಲ್ಲಿ ನಿರ್ಮಿಸಿದ ಸೌರ ವಿದ್ಯುತ್ ದೀಪಗಳು ನಿರ್ವಹಣೆ ಕೊರತೆಯಿಂದ ಕತ್ತಲಲ್ಲಿವೆ. ಜನತೆಗೂ ಉಪಯೋಗವೂ ಇಲ್ಲದೇ ಅತ್ತ ಸೌರ ವಿದ್ಯುತ್ ದೀಪ ಕಂಬಗಳು, ಯಂತ್ರಗಳು ಹಾಳಾಗುತ್ತಿದ್ದರೂ ಈ ಬಗ್ಗೆ ಆಡಳಿತ ಎಚ್ಚೆತ್ತುಕೊಳ್ಳುತ್ತಿಲ್ಲ.
ತಾಲೂಕಿನ ಗಂಡಬೊಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯ ಮೂರು ಹಳ್ಳಿಗಳಲ್ಲಿ 2007ರಲ್ಲಿ ತಾಲೂಕಿನಲ್ಲೇ ಪ್ರಥಮವಾಗಿ ಮಹತ್ತರ ಸೌರ ವಿದ್ಯುತ್ ದೀಪ ಅಳವಡಿಸಿದ್ದರು. ಅವು ಈಗ ನಿರ್ವಹಣೆಯಿಲ್ಲದೆ ಹಾಳಾಗುತ್ತಿವೆ. ಅಂದಾಜು ರು. 50 ಲಕ್ಷ ವೆಚ್ಚದ ಗ್ರಾಮೀಣರಿಗಾಗಿ ರೂಪಿತಗೊಂಡ ಇಂಟಿಗ್ರೇಟೆಡ್ ರೂರಲ್ ಎನರ್ಜಿ ಪ್ರೋಗ್ರಾಂ (ಐಆರ್ಇಪಿ) ಯೋಜನೆಯಲ್ಲಿ ತಾಲೂಕಿನ ಗಂಡಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿಯನ್ನು ಪ್ರಾಯೋಗಿಕವಾಗಿ ಆಯ್ಕೆಮಾಡಿಕೊಳ್ಳಲಾಗಿತ್ತು.
ಅದಕ್ಕಾಗಿ ಗಂಡಬೊಮ್ಮನಹಳ್ಳಿ, ಕೆ. ದಿಬ್ಬದಹಳ್ಳಿ ಹಾಗೂ ಯರಗುಂಡ್ಲಹಟ್ಟಿ ಗ್ರಾಮಗಳಲ್ಲಿ ಸುಮಾರು ಮೂವತ್ತೈದು ಸೌರ ವಿದ್ಯುತ್ ದೀಪ, ಕುಡಿವ ನೀರಿನ ಮೋಟಾರ್ ಗೆ ಸೌರ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಈಗ, ಗಂಡಬೊಮ್ಮನಹಳ್ಳಿ ಮತ್ತು ಕೆ.ದಿಬ್ಬದಹಳ್ಳಿಯಲ್ಲಿ ನೀರೆತ್ತಲು ಮಾತ್ರ ಸೌರ ವಿದ್ಯುತ್ ಬಳಕೆಯಾಗುತ್ತದೆ. ಯರಗುಂಡ್ಲಹಟ್ಟಿಯಲ್ಲಿ ನಿರುಪಯುಕ್ತವಾಗಿದೆ. ಉಳಿದಂತೆ ಎಲ್ಲ ಸೌರ ವಿದ್ಯುತ್ ದೀಪಗಳು, ಬ್ಯಾಟರಿ, ನಿರ್ವಹಣೆ ಇಲ್ಲದೆ ಸ್ಮಾರಕದಂತೆ ಕಂಗೊಳಿಸುತ್ತವೆ.
ಸೆಲ್ಕೋ ಸೋಲಾರ್ ಕಂಪನಿಗೆ ಐದು ವರ್ಷಗಳ ನಿರ್ವಹಣೆಗೆ ಗುತ್ತಿಗೆ ನೀಡಲಾಗಿತ್ತು. ಆ ಅವಧಿಯಲ್ಲಿ ಸೂಕ್ತ ನಿರ್ವಹಣೆ ಮಾಡಿದ್ದರು. ಆಗ ವಿದ್ಯುತ್ ಕೈಕೊಟ್ಟರೂ ಸೌರ ವಿದ್ಯುತ್ ದೀಪಗಳಿಂದ ಗ್ರಾಮಗಳು ಝಗಮಗಿಸುತ್ತಿದ್ದವು. ಈಗ ಗ್ರಾಮಗಳ ಚಿತ್ರಣ ಬದಲಾಗಿದೆ.
ಸದಾ ಕುಡಿವ ನೀರು, ರಾತ್ರಿಯಾದರೆ ಬೆಳಕು ಕಾಣುತ್ತಿದ್ದ ಜನತೆಗೆ ಕರೆಂಟಿದ್ದರೆ ಮಾತ್ರ ಬೆಳಕು, ನೀರು ಎಂಬಂತಾಗಿದೆ. ಗ್ರಾಪಂಗೆ ಸಾಕಷ್ಟು ಅನುದಾನ ಬಂದು ಖರ್ಚಾಗುತ್ತಿದೆ. ಇಂಥ ಜನೋಪಯೋಗಿ ಕಾರ್ಯಗಳತ್ತ ಸಂಬಂಧಿಸಿದ ಇಲಾಖೆ ಗಮನಹರಿಸದೇ ಇರುವುದನ್ನು ನೋಡಿ ಜನತೆ ಆಡಳಿತದ ಮೇಲೆ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ.
ಈ ಸೌರ ವಿದ್ಯುತ್ ಯೋಜನೆಯಲ್ಲಿ ಬೀದಿ ದೀಪ ಕಂಬಗಳು, ಸೌರ ವಿದ್ಯುತ್ಗೆ ಸಂಬಂಧಿಸಿದ ಪರಿಕರಗಳು ಇವೆ. ಈಗ ಎಲ್ಲ ಬೀದಿ ದೀಪಗಳಿಗೆ ಬ್ಯಾಟರಿ ಜೋಡಣೆ ಮಾಡಿ ಸಂಪರ್ಕ ಕಲ್ಪಿಸಿದರೆ ವಿದ್ಯುತ್ ಇಲ್ಲದೇ ಕಂಗಾಲಾಗಿರುವ ಇಂದಿನ ದಿನಗಳಲ್ಲಿ ವಿದ್ಯುತ್ ಉಳಿತಾಯ ಮಾಡಿದಂತಾಗುತ್ತದೆ. ಮತ್ತೆ ಗ್ರಾಮಗಳು ವಿದ್ಯುತ್ ಸಂಕಷ್ಟದಿಂದ ಪಾರಾಗಿ ಮತ್ತೆ ಝಗಮಗಿಸುವ ಬೀದಿದೀಪದ ಬೆಳಕು ಸಾಕಾರವಾಗಲಿ ಎನ್ನುವುದು ಗಿರೀಶ್, ಮಲ್ಲಿಕಾರ್ಜುನ ಸೇರಿದಂತೆ ಗ್ರಾಮಸ್ಥರ ಒತ್ತಾಯವಾಗಿದೆ.
ಭೀಮಣ್ಣ ಗಜಾಪುರ