ಬೆಳಗಾವಿಯಲ್ಲಿ ಇಂದಿನಿಂದ ವೈನ್ ಉತ್ಸವ
ಬೆಳಗಾವಿ: ಕರ್ನಾಟಕ ದ್ರಾಕ್ಷಾರಸ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಇದೇ ಮೊದಲ ಬಾರಿಗೆ ಬೆಳಗಾವಿಯಲ್ಲಿ ಜ.10 ರಿಂದ ಮೂರು ದಿನಗಳ ಕಾಲ ದ್ರಾಕ್ಷಾರಸ (ವೈನ್) ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ. ಕೃಷ್ಣ ತಿಳಿಸಿದ್ದಾರೆ. ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಟಿಳಕವಾಡಿಯ ಮಿಲೇನಿಯಂ ಗಾರ್ಡನ್ದಲ್ಲಿ ಮೂರು ದಿನಗಳ ಕಾಲ ಉತ್ಸವ ನಡೆಯಲಿದೆ. 10 ರಂದು ಸಂಜೆ 4 ಗಂಟೆಗೆ ತೋಟಗಾರಿಕೆ ಸಚಿವ ಶ್ಯಾಮನೂರು ಶಿವಶಂಕರಪ್ಪ ಉತ್ಸವ ಉದ್ಘಾಟಿಸುವರು ಎಂದರು.
ಏಕೆ ವೈನ್ ಉತ್ಸವ?: ವೈನ್ ಸೇವನೆಯ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಹಾಗೂ ದ್ರಾಕ್ಷಿ ಬೆಳೆಗಾರರಿಗೆ, ವೈನ ದ್ರಾಕ್ಷಿ ತಳಿಗಳಲ್ಲಿ ಅನುಸರಿಸಬೇಕಾದ ಬೇಸಾಯ ಕ್ರಮಗಳನ್ನು ತಿಳಿಸಲು ಈ ಉತ್ಸವ ಸಂಘಟನೆ ಮಾಡಲಾಗಿದೆ. ವೈನ್ ಉದ್ದಿಮೆಯ ಪ್ರಮುಖ ವ್ಯಕ್ತಿಗಳಾದ ದ್ರಾಕ್ಷಿ ಬೆಳೆಗಾರರು, ವೈನ್ ತಯಾರಕರು ಹಾಗೂ ಬಳಕೆದಾರರನ್ನು ಒಂದೆಡೆ ಸೇರಿಸಲಾಗುವುದು. ಅಲ್ಲದೇ, ಉತ್ಸವದ ಹಿನ್ನೆಲೆಯಲ್ಲಿ ಉತ್ತಮ ಗುಣಮಟ್ಟದ ವಿವಿಧ ವೈನ್ಗಳ ಮಾರಾಟದಲ್ಲಿ ಶೇ. 10 ರಷ್ಟು ರಿಯಾಯತಿ ಘೋಷಣೆ ಮಾಡಲಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರವೀಂದ್ರ ಹಕಾಟಿ ಇದ್ದರು.