ಶಾಲೆಗೆ ಸೌಲಭ್ಯ ಒದಗಿಸುವೆ: ಸಚಿವ ಪರಮೇಶ್ವರ ನಾಯ್ಕ
ಬಳ್ಳಾರಿ: ಶಿಕ್ಷಣದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಶಾಲೆಗೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಒದಗಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ್ ಭರವಸೆ ನೀಡಿದರು.
ನಗರದ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿ, ಬಾಲಕಿಯರಿಗೆ ಶಿಕ್ಷಣ ನೀಡುತ್ತಿರುವ ಕಿತ್ತೂರುರಾಣಿ ಚೆನ್ನಮ್ಮ ಶಾಲೆ ಮಾದರಿ ಶಾಲೆಯಾಗಿ ಬೆಳೆಯಲೆಂದು ಹಾರೈಸಿದ ಸಚಿವರು, ಶಾಲೆಗೆ ಅಗತ್ಯವಿರುವ ಕ್ರೀಡೆ, ಕಂಪ್ಯೂಟರ್ ಸೇರಿದಂತೆ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ನಂತರ ಶಾಲೆಯ ಪ.ಪಂಗಡದ ವಿದ್ಯಾರ್ಥಿನಿ ಬಿ. ಅನಿತಾಗೆ ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಮಂಡಳಿಯಿಂದ ರು. 7000 ಚೆಕ್ ವಿತರಿಸಿದರು. ನ್ಯಾಯಾಧೀಶೆ ಎಂ.ಎಚ್. ಶಾಂತಾ, ಡಿಡಿಪಿಐ ವೀರಣ್ಣ ಜತ್ತಿ, ವೀ.ವಿ. ಸಂಘದ ಕಾರ್ಯದರ್ಶಿ ಗುರುಸಿದ್ದಸ್ವಾಮಿ, ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಗೋನಾಳ್ ವಿರೂಪಾಕ್ಷಗೌಡ ಮಾತನಾಡಿದರು. ಶಾಲೆಯ ಮುಖ್ಯಗುರು ವಾರ್ಷಿಕ ವರದಿ ಮಂಡಿಸಿದರು. ನಂತರ ಸಚಿವ ಪರಮೇಶ್ವರ್ ನಾಯ್ಕ್, ನ್ಯಾಯಾಧೀಶೆ ಎಂ.ಎಚ್. ಶಾಂತಾ, ಶಾಲೆಯ ಹಳೆಯ ವಿದ್ಯಾರ್ಥಿನಿಯರಾದ ಶಿರೀಷ, ಪ್ರಭ ಎರಗಲ್ ಅವರನ್ನು ಸನ್ಮಾನಿಸಲಾಯಿತು. ವಕೀಲರಾದ ಯಾಲ್ಪಿ ಪಂಪನಗೌಡ, ಉಮಾಶಂಕರ್, ಬಿ.ವಿ.ಬಸವರಾಜ್ ಮತ್ತು ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಸುಷ್ಮಾ ನಾಗರಾಳ್ ನಿರೂಪಿಸಿದರು. ಶಿಕ್ಷಕಿ ಗಿರಿಜಾ ಸ್ವಾಗತಿಸಿದರು. ಎಂ. ಶೈಲಜಾ ವಂದಿಸಿದರು.