ಸುವಾಸನೆ ಬೀರಿದ ಖಾದ್ಯ ಮೇಳ
ಕನ್ನಡಪ್ರಭ ವಾರ್ತೆ, ಹಂಪಿ, ಜ. 9
ಅದೊಂದು ಸ್ಪರ್ಧೆ, ಆ ಸ್ಪರ್ಧೆ ನಡೆಯುತ್ತಿದ್ದ ಜಾಗದ ಸುತ್ತಲಿನ ಪ್ರದೇಶವೆಲ್ಲ ವಿವಿಧ ಖಾದ್ಯಗಳ ಸುವಾಸನೆಯಿಂದ ಕೂಡಿತ್ತು. ರುಚಿಕಟ್ಟಾದ ಆಹಾರ ಪದಾರ್ಥ ತಯಾರಿಸಿ ತಾನೇ ಕಿಚನ್ ಕ್ವೀನ್ ಆಗಬೇಕೆಂಬ ತುಡಿತ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳೆಯರಲ್ಲಿ ಇತ್ತು.
ಹೌದು, ಈ ಸ್ಪರ್ಧೆ ನಡೆದದ್ದು ಹಂಪಿಯಲ್ಲಿ. ಜ. 10ರಿಂದ ಆರಂಭವಾಗಲಿರುವ ಐತಿಹಾಸಿಕ ಹಂಪಿ ಉತ್ಸವದ ಈ ಬಾರಿಯ ವಿಶೇಷ ಆಕರ್ಷಣೆ ಸಾಂಪ್ರದಾಯಿಕ ಆಹಾರ ಮೇಳ. ಅದಕ್ಕಾಗಿ ಕಿಚನ್ ಕ್ವೀನ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆ ಬುಧವಾರದಿಂದ ಆರಂಭವಾಗಿದ್ದು, ಗುರುವಾರವೂ ಯಶಸ್ವಿಯಾಗಿ ಜರುಗಿತು. ವಿಶೇಷ ಎಂದರೆ ಭಾರತೀಯ ಖಾದ್ಯಗಳನ್ನು ಹಂಪಿಗೆ ಆಗಮಿಸಿರುವ ವಿದೇಶಿಯರು ಸವಿದದ್ದು.
ಮೇಳದಲ್ಲಿ ಮಹಿಳೆಯರು ವಿವಿಧ ಬಗೆಯ ಆಹಾರ ಖಾದ್ಯಗಳನ್ನು ತಯಾರಿಸಲು ಗುಂಪು ಗುಂಪಾಗಿ ಆಗಮಿಸಿದ್ದರು. ಹಂಪಿಯ ಬಸವಣ್ಣ ಮಂಟಪದ ಸಮೀಪದಲ್ಲಿ ಆಯೋಜಿಸಿರುವ ಸಾಂಪ್ರದಾಯಿಕ ಆಹಾರ ತಯಾರಿಕೆ ಸ್ಪರ್ಧೆಗೆ ಮಹಿಳೆಯರು ಆಹಾರ ತಯಾರಿಕೆಗೆ ಬೇಕಾದ ಅಗತ್ಯ ವಸ್ತುಗಳೊಂದಿಗೆ ಉತ್ಸಕರಾಗಿ ಪಾಲ್ಗೊಂಡಿದ್ದರು. ರು. 500 ಪ್ರವೇಶ ಶುಲ್ಕ ಭರ್ತಿ ಮಾಡಿ ಕಿಚನ್ ಕ್ವೀನ್ ಸ್ಪರ್ಧೆಗೆ ಬಂದಿದ್ದರು. ಕಿಚನ್ ಕ್ವೀನ್ ಸ್ಪರ್ಧೆಯಲ್ಲಿ ಗೆದ್ದವರಿಗೆ ಕ್ರಮವಾಗಿ ಪ್ರಥಮ ಬಹುಮಾನ ರು. 25 ಸಾವಿರ, ದ್ವಿತೀಯ ರು. 15 ಸಾವಿರ, ತೃತೀಯ ಬಹುಮಾನ ರು. 10 ಸಾವಿರ ಪಡೆಯಲು ನೂರಾರು ಮಹಿಳೆಯರು ಸಿದ್ಧರಾಗಿದ್ದರು.
ಬಂಡ್ರಿ ಮಮತಾ ಕಿಚನ್ ಕ್ವೀನ್: ಬುಧವಾರ ಆರಂಭವಾಗಿದ್ದ ಕಿಚನ್ ಕ್ವೀನ್ ಸ್ಪರ್ಧೆಗೆ ರು. 500 ಪ್ರವೇಶ ಶುಲ್ಕ ಇದ್ದಿದ್ದರಿಂದ ಹೆಚ್ಚಾಗಿ ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಲು ಹಿಂದೇಟು ಹಾಕಿದ್ದರು. ಆದರೂ 26 ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ರೀತಿಯ ಖಾದ್ಯ ತಯಾರಿಸಿದರು. ಅವರಲ್ಲಿ ಹೊಸಪೇಟೆ ನಿವಾಸಿ ಬಂಡ್ರಿ ಮಮತಾ ಪ್ರಥಮ ಬಹುಮಾನ ಪಡೆದರೆ, ಹೊಸಪೇಟೆ ನಿವಾಸಿ ಅನಿತಾ ದ್ವಿತೀಯ ಹಾಗೂ ಹಂಪಿ ನಿವಾಸಿ ತುಳಸಿ ಅವರು ರು. 10 ಸಾವಿರದೊಂದಿಗೆ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡರು.
ಗುರುವಾರ 37 ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿ ರಾಗಿ ಮುದ್ದೆ, ಉದುಕ, ರಾಗಿ ಅಲ್ವ, ಕಡ್ಲಿ ಉಂಡೆ, ಶಾವಿಗೆ ಪಾಯಸ, ಗೋದಿ ಪಾಯಸ, ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಕರಿಕಡಬು, ಗಾರಿಗೆ, ಚಿತ್ರಾನ್ನ, ವೆಜಿಟೆಬಲ್ ಫಲಾವ್, ಇಡ್ಲಿ, ವಡೆ, ಚಟ್ನಿ, ವಿವಿಧ ಬಗೆಯ ಸಾಂಬಾರ್, ಒಗ್ಗರಣೆ, ಮಿರ್ಚಿ, ಬಜಿ, ಕಾರ ಮಂಡಕ್ಕಿ, ಕಾಳು ಪಲ್ಲೆ, ಎಣ್ಣೆ ಬದನೆಕಾಯಿ ಪಲ್ಲೆ ಸೇರಿದಂತೆ ವಿವಿಧ ರೀತಿಯ ತರಕಾರಿ ಪಲ್ಲೆ, ಸಿಹಿ ತಿಂಡಿ, ಅನ್ನ ಸಂಬಾರ್ನ್ನು ಕೇವಲ 2 ತಾಸಿನಲ್ಲಿ ಸಿದ್ಧಪಡಿಸಿ ಸ್ಪರ್ಧೆಗೆ ನೀಡಿದರು.
ಗುರುವಾರದ ಕಿಚನ್ ಕ್ವೀನ್ ಸ್ಪರ್ಧೆಯಲ್ಲಿ ಹೊಸಪೇಟೆ ನಿವಾಸಿ ಬಿ.ಎಸ್. ರೇಖಾ ಪ್ರಥಮ, ಮರಿಯಮ್ಮನಹಳ್ಳಿಯ ಕೆ. ಶಾರದಾ ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಬಳ್ಳಾರಿ ತಾಲೂಕಿನ ಬಾದನಹಟ್ಟಿಯ ಪಿ. ಲಲಿಲಾ ಪಡೆದುಕೊಂದರು. ಶುಕ್ರವಾರವೂ ಈ ಸ್ಪರ್ಧೆ ನಡೆಯಲಿದೆ. ಸಾಂಪ್ರದಾಯಿಕ ಆಹಾರ ಮೇಳದಲ್ಲಿ ವಿವಿಧ ರೀತಿಯ ಆಹಾರ ಪದಾರ್ಥಗಳ ವಾಸನೆಯನ್ನು ಹಂಪಿ ಉತ್ಸವಕ್ಕೆ ಆಗಮಿಸಿದ ಜನತೆ ಆಸ್ವಾದಿಸಿದರು.