ಉತ್ಸವಕ್ಕೆ ಭಾರವಾಯ್ತೆ ಪ್ರವೇಶ ಶುಲ್ಕ?
ಬಳ್ಳಾರಿ: ಆರಂಭದಲ್ಲಿ ಹಂಪಿ ಉತ್ಸವಕ್ಕೆ ಅನುದಾನ ಕೊರತೆ ಕಾಡುತ್ತಿತ್ತು. ಈ ಬಾರಿ ಹಂಪಿ ಉತ್ಸವಕ್ಕೆ ನಿರೀಕ್ಷಿತ ಅನುದಾನ ಬಾರದಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಜಿಲ್ಲಾಡಳಿತವು ದೇಣಿಗೆ ಹಾಗೂ ಸ್ಥಳೀಯ ಸಂಸ್ಥೆಗಳು, ವಿವಿಧ ಉದ್ಯಮಗಳ ಮೂಲಕವೇ ಅನುದಾನ ಸಂಗ್ರಹಕ್ಕೆ ಮುಂದಾಗಿತ್ತು. ಅಲ್ಲದೆ, ಕೆಲ ಪ್ರದರ್ಶನ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಸ್ಪರ್ಧಾಳುಗಳಿಗೆ ಪ್ರವೇಶ ಶುಲ್ಕ ನಿಗದಿಸಿದ್ದು, ಹಂಪಿ ಉತ್ಸವ ಮತ್ತು ಸ್ಪರ್ಧಾಳುಗಳ ಉತ್ಸಾಹಕ್ಕೆ ತಣ್ಣಿರೆರಚಿದಂತಾಗಿದೆ.
ಪುಸ್ತಕ ಪ್ರದರ್ಶನ ಸೇರಿದಂತೆ ವಿವಿಧ ಪ್ರದರ್ಶನಗಳಿಗೆ ಶುಲ್ಕ ಏರ್ಪಡಿಸಿರುವುದರಿಂದ ಸಾಹಿತ್ಯ ಆಸಕ್ತರು ಗೊಣಗುತ್ತಲೇ ರು. 10ಗಳನ್ನು ನೀಡಿ ಪುಸ್ತಕ ಪ್ರದರ್ಶನದ ಪ್ರವೇಶಕ್ಕೆ ಮುಂದಾದರೂ, ಅನುದಾನ ಸಂಗ್ರಹ, ಖರ್ಚು ವೆಚ್ಚ ಭರಿಸುವ ಭರಾಟೆಯಲ್ಲಿ ಸ್ಪರ್ಧಾಳುಗಳ ಶುಲ್ಕದ ನಿಗದಿಯಲ್ಲಿ ಹಂಪಿ ಉತ್ಸವ ಆಚರಣೆ ಸಮಿತಿ ಕೊಂಚ ಎಡವಿದಂತೆ ಕಾಡುತ್ತಿದೆ. ಇದರಿಂದ ಕ್ರೀಡಾಪಟುಗಳಲ್ಲಿ ನಿರಾಸಕ್ತಿ ಉಂಟಾಗಲು ಕಾರಣವಾಗಿದೆ.
ಇನ್ನು ಕಲಾವಿದರಿಗೆ ಊಟದ ವ್ಯವಸ್ಥೆ ಸರಿಯಿಲ್ಲ ಎಂಬ ಕೊರಗು ಕೂಡ ಹಂಪಿ ಉತ್ಸವದ ಮೊದಲನೆ ದಿನದಲ್ಲಿ ಎದ್ದು ಕಾಣುತ್ತಿತ್ತು. ಎರಡನೇ ದಿನದಲ್ಲಿ ಇಂತಹ ನ್ಯೂನತೆ, ಕೊರತೆಗಳನ್ನು ಉತ್ಸವ ಸಮಿತಿ ಸರಿಪಡಿಸುವ ಮೂಲಕ ಉತ್ಸವದ ಯಶಸ್ವಿಗೆ ಮುಂದಾಗಬೇಕಿದೆ.
ಸ್ಪರ್ಧಾಳುಗಳಿಗೆ ಶುಲ್ಕ: ಗ್ರಾಮೀಣ ಕ್ರೀಡೆಗಳಿಗೂ ಸ್ಪರ್ಧಾಳುಗಳಿಗೆ ಪ್ರವೇಶಾತಿ ಶುಲ್ಕ ನಿಗದಿ ಪಡಿಸಲಾಗಿತ್ತು. ಮಲ್ಲಕಂಬಕ್ಕೆ ಪ್ರವೇಶಾತಿ ಶುಲ್ಕ ರು. 50, ಕಬಡ್ಡಿ ರು. 50, ಬಂಡಿಗಾಲಿ ಎತ್ತುವುದು ರು. 100, ಕಲ್ಲು ಗುಂಡೆತ್ತುವುದು ರು. 100, ಭಾರ ಎತ್ತುವಿಕೆಗೆ ಪ್ರವೇಶಾತಿ ಶುಲ್ಕ ರು. 200, ಹಗ್ಗ ಜಗ್ಗಾಟಕ್ಕೆ ರು. 50, ಕುಸ್ತಿ ಪಂದ್ಯಾವಳಿಗೆ ರು. 200, ದೇಹದಾರ್ಢ್ಯ ಸ್ಪರ್ಧೆಗೆ ಪ್ರವೇಶಾತಿ ಶುಲ್ಕ ರು. 200ಗಳನ್ನು ನಿಗದಿಪಡಿಸಲಾಗಿತ್ತು. ಗಾಳಿಪಟ, ಸಾಹಸ ಕ್ರೀಡೆಗಳಿಗೆ ಪ್ರವೇಶಾತಿ ಶುಲ್ಕವು ಕೂಡ, ಸ್ಪರ್ಧಾಳಗಳ ಬೇಸರ, ನಿರುತ್ಸಾಹಕ್ಕೆ ಕಾರಣವಾಯಿತು. ಶುಲ್ಕದಲ್ಲಿ ಕೊಂಚ ಮಟ್ಟಿಗೆ ವಿನಾಯ್ತಿ ಇದ್ದರೆ, ಸ್ಪರ್ಧೆಗಳಲ್ಲಿ ಸ್ಪರ್ಧಾಳುಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿರುತ್ತಿತ್ತು, ಇನ್ನು 2 ದಿನ ಉತ್ಸವ ಇರುವುದರಿಂದ ಈ ಕುರಿತು ಅಧಿಕಾರಿಗಳು ಕೊಂಚ ಗಮನ ಹರಿಸಬೇಕಾಗಿದೆ.
ಇನ್ನೆರಡು ದಿನದ ಉತ್ಸವ ಯಶಸ್ವಿಗೆ ಚಿಂತನೆ ಅಗತ್ಯ: ಕರಕುಶಲ ಪ್ರದರ್ಶನ, ಪುಸ್ತಕ ಪ್ರದರ್ಶನ ಹೀಗೆ ಪ್ರತಿಯೊಂದಕ್ಕೂ ಶುಲ್ಕ ವಿಧಿಸುವ ನಿಟ್ಟಿನಲ್ಲಿ ಆಡಳಿತ ಆಲೋಚಿಸಿದ್ದು, ಜನರ ನಿರುತ್ಸಾಹಕ್ಕೆ ಕಾರಣವಾಯಿತು. ಹಂಪಿ ಉತ್ಸವದ ಆರಂಭದ ದಿನವೋ ಅಥವಾ ನಿರುತ್ಸಾಹವೋ ಗೊತ್ತಿಲ್ಲ. ಆದರೆ, ಶುಕ್ರವಾರ ನಿರುತ್ಸಾಹ ಕಾಣುತ್ತಿತ್ತು. ಈ ನಿಟ್ಟಿನಲ್ಲಿ ಅಧಿಕಾರಿಗಳು ಆಲೋಚಿಸಿದಲ್ಲಿ ಎರಡು ದಿನದ ಹಂಪಿ ಉತ್ಸವವನ್ನು ಯಶಸ್ವಿ ಮಾಡಬಹುದು. ಕರ್ನಾಟಕ ಮಲ್ಲಕಂಬ ಸಂಸ್ಥೆಯ ಕಾರ್ಯದರ್ಶಿ, ಲಕ್ಷೇಶ್ವರದ ಸೋಮಶೇಖರ ಕೊಡ್ಲಿ ಮಾತನಾಡಿ, ಹಂಪಿ ಉತ್ಸವದಲ್ಲಿ ಸ್ಪರ್ಧಿಗಳಿಗೆ ಪ್ರತಿವರ್ಷ ಪ್ರಯಾಣ ಭತ್ಯೆ, ಊಟದ ವ್ಯವಸ್ಥೆ ಮಾಡುತ್ತಿದ್ದರು. ಜೊತೆಗೆ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ಪ್ರವೇಶಾತಿ ಶುಲ್ಕ ಇರಲಿಲ್ಲ, ಇದೇ ಪ್ರಥಮ ಬಾರಿಗೆ ಶುಲ್ಕ ವಿಧಿಸಿದ್ದರಿಂದ ಇಂತಹ ಗ್ರಾಮೀಣ ಕ್ರೀಡೆಗಳಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಹೆಚ್ಚಾಗಿ ಪಾಲ್ಗೊಳ್ಳುವುದರಿಂದ ಅವರಿಗೆ ಹಣದ ಕೊರತೆಯ ಹಿನ್ನೆಲೆಯಲ್ಲಿ ಸ್ಪರ್ಧೆಯಲ್ಲಿ ಬಂದು ಭಾಗವಹಿಸುವುದು ಕಷ್ಟವಾಗುತ್ತದೆ ಎಂದರು. ಸ್ಪರ್ಧಾಳು ಶೇಖರಗೌಡ ಆನೆಗುಂದಿ ಮಾತನಾಡಿ, ತಾವು ರಾಷ್ಟಮಟ್ಟದ ಗುಂಡು ಎತ್ತುವ ಸರ್ಧೆಯಲ್ಲಿ ಭಾಗವಹಿಸಿದ್ದೇನೆ, ಎಲ್ಲೂ ಕೂಡ ಪ್ರವೇಶಾತಿ ಶುಲ್ಕ ಇರಲಿಲ್ಲ, ಹಂಪಿ ಉತ್ಸವದಲ್ಲಿ ಪ್ರವೇಶಾತಿ ಶುಲ್ಕ ಮಾಡಲಾಗಿದೆ. ಇದರಿಂದ ಭಾಗವಹಿಸುವುದು ಕೊಂಚ ಕಷ್ಟವಾಗಿದೆ ಎಂದರು.
ಶಶಿಧರ ಮೇಟಿ